ಬರೋಬ್ಬರಿ 300 ಕಿ.ಮೀ ಉರುಳು ಸೇವೆ ಮಾಡಿದ ಧಾರವಾಡದ ಭಕ್ತ
ಧಾರವಾಡ : ದೇವಸ್ಥಾನದಲ್ಲಿ ಸರದಿ ಸಾಲಿನಲ್ಲಿ ಕಾದು ದೇವರ ದರ್ಶನ ಪಡೆಯಬೇಕೆಂದರೇ ಕಷ್ಟ ಅನ್ನೋರೆ ಹೆಚ್ಚು. ಅದ್ರೆ ಇಲ್ಲೊಬ್ಬ ವ್ಯಕ್ತಿ ಸುಮಾರು 300 ಕಿಲೋ ಮೀಟರ್ ದೂರದ ವರೆಗೆ ಉರುಳು ಸೇವೆ ಮಾಡುತ್ತ ದೇವರ ಹರಕೆ ತೀರಿಸಲು ಮುಂದಾಗಿದ್ದಾನೆ.
ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ನಿವಾಸಿ ಈಶ್ವರ ಯಲ್ಲಪ್ಪ ಅಂಬಣ್ಣವರ( 48 ) ಅವರು ರಸ್ತೆಯ ಮೇಲೆ ಉರುಳು ಸೇವೆ ಮಾಡುತ್ತಾ ಮಹಾರಾಷ್ಟ್ರದ ಫಂಡರಪೂರಕ್ಕೆ ಸಾಗುತ್ತಿದ್ದಾರೆ. ಮೈಯಲ್ಲಿ ಪ್ಲಾಸ್ಟಿಕ್ ಹೊದಿಕೆ. ಕಾಲಿಗೆ ಪ್ಲಾಸ್ಟಿಕ್ ಸುತ್ತಿಕೊಂಡು 300 ಕಿ.ಮೀ ದೇಹವನ್ನು ದಂಡಿಸುವ ಮೂಲಕ ರಸ್ತೆಯ ಮೇಲೆ ಉರುಳುತ್ತಾ ದೇವರಿಗೆ ಹರಕೆ ತೀರಿಸಲು ಮುಂದಾಗಿದ್ದಾರೆ. ಇವರ ಭಕ್ತಿಪರಾಕಾಷ್ಠೆಗೆ ಜನರೇ ಬೆಚ್ಚಿಬಿಳುವಂತೆ ಮಾಡಿದೆ.
ಇವರು ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದಿಂದ ಆರಂಭವಾದ ಇವರ ಉರುಳು ಸೇವೆ ಅಮ್ಮಿನಭಾವಿ, ಸವದತ್ತಿದಿಂದ ಕೆ.ಚಂದರಗಿ, ಹುಲಕುಂದ, ಯಾದವಾಡ, ಶಿರೋಳ ಸಿದ್ದಪುರ ಮಾರ್ಗವಾಗಿ ಜಮಖಂಡಿ ಪಟ್ಟಣದ ಮೂಲಕ ಕೃಷ್ಣ ನದಿ, ಜಂಬಗಿ, ಸಾವಳಗಿ ಮೂಲಕ ಜತ್ತ, ಶೇಗಾಂವ್, ಸುನಂದಾ, ಮಾಂಝರಿ, ಕರಡಿ, ಪಾದಗಟ್ಟಿ ಮೂಲಕ ಮಹಾರಾಷ್ಟ್ರದ ಫಂಡರಪೂರ ತಲುಪಲಿದ್ದಾರೆ.
ಪ್ರತಿ ನಿತ್ಯ ಸುಮಾರು 8 ರಿಂದ 10 ಕಿ.ಮೀ ಉರುಳು ಸೇವೆ ಮಾಡುತ್ತಾ ಸಂಚರಿಸುತ್ತಾರೆ. ಸಂಜೆಯಾಗುತ್ತಿದ್ದಂತೆ ಯಾವುದಾದರು ಗ್ರಾಮದ ದೇವಾಲಯದಲ್ಲಿ ವಾಸ್ತವ್ಯ ಹೂಡುತ್ತಾರೆ. ಗ್ರಾಮಸ್ಥರು ಕೊಡುವ ಆಹಾರ, ಹಣ್ಣು-ಹಂಪಲು ತೆಗೆದುಕೊಂಡು ಸಂಚಾರವನ್ನು ಮುಂದುವರಿಸುತ್ತಾರೆ. ಕಳೆದ ಒಂಬತ್ತು ವರ್ಷಗಳಿಂದ ಇವರು ಪಾದಯಾತ್ರೆ ಮೂಲಕ ಪಂಢರಪುರಕ್ಕೆ ಹೋಗಿ ದೇವರ ದರ್ಶನ ಪಡೆದುಕೊಂಡು ತಮ್ಮ ಹರಕೆ ಪೂರೈಸಿದ್ದಾರೆ. ಈಗ ಮೂರು ವರ್ಷಗಳ ಕಾಲ ಹೀಗೆ ಉರುಳು ಸೇವೆ ಮಾಡುತ್ತ ಹೋಗುತ್ತಿದ್ದಾರೆ. ಉರುಳು ಸೇವೆ ಮಾಡಿದರೆ ದೇವರು ಎಲ್ಲಾ ಕಷ್ಟ ಕಾರ್ಪಣ್ಯ ದೂರು ಮಾಡುತ್ತಾನೆ ಎಂಬುದು ಈಶ್ವರ ಯಲ್ಲಪ್ಪ ಅಂಬಣ್ಣವರ ಅವರ ನಂಬಿಕೆ ಹೊಂದಿದ್ದಾರೆ.
ಜನವರಿ 14ರಂದು ಪ್ರಾರಂಭವಾದ ಈ ಉರುಳು ಸೇವೆ ಒಂದು ತಿಂಗಳ ಕಾಲ ಹೀಗೆ ಸಾಗುತ್ತದೆ. ಈಗ ಜಮಖಂಡಿ ಪಟ್ಟಣದ ಸಮೀಪ ಬಂದಿದ್ದಾರೆ. ಕೃಷ್ಣ ನದಿಯ ಮೂಲಕ ಸಾವಳಗಿಯಿಂದ ಮಹಾರಾಷ್ಟ್ರದ ಗಡಿಗೆ ಹೋಗಿ ಪಂಢರಾಪುರ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.