ದೆಹಲಿ ಮಾದರಿಯಲ್ಲೇ ಗುಜರಾತಲ್ಲೂ ಆಯ್ತು, ಬೆಚ್ಚಿ ಬೀಳಿಸುವಂತಹ ಭೀಕರ ಸಾವು! ಬೈಕ್ ಗೆ ಡಿಕ್ಕಿ ಹೊಡೆದು ಸವಾರನನ್ನು 12ಕಿಮೀ ಎಳೆದೊಯ್ದ ಕಾರು!
ಕೆಲವು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಯುವತಿಗೆ ಕಾರು ಡಿಕ್ಕಿ ಹೊಡೆದು, ಬಳಿಕ ಯುವತಿಯನ್ನು ಕಿಲೋಮೀಟರ್ಗಟ್ಟಲೆ ಎಳೆದೊಯ್ದು ಆಕೆ ಮೃತಪಟ್ಟ ಘಟನೆ ಇಡೀ ದೇಶವನ್ನೇ ದಂಗು ಬಡಿಸಿತ್ತು. ಇದೀಗ ಈ ಪ್ರಕರಣ ಮಾಸುವ ಮುನ್ನವೇ ಇದೇ ಮಾದರಿಯಲ್ಲೇ ಗುಜರಾತ್ನಲ್ಲೂ ಆಘಾತಕಾರಿ ಭೀಕರ ಘಟನೆಯೊಂದು ನಡೆದು ತಡವಾಗಿ ಬೆಳಕಿಗೆ ಬಂದಿದೆ. ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಕಾರೊಂದು, ಚಕ್ರಕ್ಕೆ ಸಿಕ್ಕಿದ ಬೈಕ್ ಸವಾರನನ್ನು 12 ಕಿಮೀ ಎಳೆದೊಯ್ದಿದ್ದು, ಪರಿಣಾಮ ಬೈಕ್ ಸವಾರ ಸಾವಿಗೀಡಾಗಿದ್ದಾನೆ.
ಜನವರಿ 18ರಂದು ಸಾಗರ್ ಪಾಟೀಲ್ ಎಂಬ ವ್ಯಕ್ತಿ ತನ್ನ ಪತ್ನಿಯೊಂದಿಗೆ ಕಡೋದರಾ-ಬರ್ಡೋಲಿ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಕಾರೊಂದು ಬಂದು ಡಿಕ್ಕಿ ಹೊಡೆದಿತ್ತು. ಈ ವೇಳೆ ಹಿಂಬದಿ ಕುಳಿತಿದ್ದ ಸಾಗರ್ನ ಪತ್ನಿ ಕೆಳಗೆ ಉರುಳಿಬಿದ್ದಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇವೆಲ್ಲಾ ಆದ ಬಳಿಕ ಸಾಗರ್ನ ಸುಳಿವು ಸಿಕ್ಕಿರಲಿಲ್ಲ. ಮಾರನೇ ದಿನ 12 ಕಿ.ಮೀ ದೂರದಲ್ಲಿ ಛಿದ್ರಗೊಂಡಿದ್ದ ಸ್ಥಿತಿಯಲ್ಲಿದ್ದ ಶವವೊಂದು ಪತ್ತೆಯಾಗಿತ್ತು. ಪರಿಶೀಲನೆ ಬಳಿಕ ಅದು ಸಾಗರ್ ಪಾಟೀಲ್ ಶವವೆಂದು ಖಚಿತಪಟ್ಟಿದೆ.
ಅದೃಷ್ಟವಶಾತ್ ಈ ಭೀಕರ ಘಟನೆಯ ವೀಡಿಯೋವನ್ನು ವಾಹನದ ಹಿಂದೆಯೇ ಚಲಿಸುತ್ತಿದ್ದ ಇನ್ನೊಬ್ಬ ವ್ಯಕ್ತಿ ಚಿತ್ರೀಕರಿಸಿದ್ದಾನೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಸೂರತ್ ಪೊಲೀಸರಿಗೆ ಆ ವ್ಯಕ್ತಿ ವೀಡಿಯೋವನ್ನು ಹಸ್ತಾಂತರಿಸಿದ್ದಾನೆ. ಆದರೆ ಅಷ್ಟು ದೂರ ಎಳೆದೊಯ್ದ ಕಾರು, ಕಾರಿನ್ನು ಚಲಾಯಿಸುತ್ತಿದ್ದ ಆರೋಪಿ ಯಾರೆಂದು ಇನ್ನೂ ಪತ್ತೆಯಾಗಿಲ್ಲ. ದೂರು ದಾಖಲಿಸಿಕೊಂಡ ಪೋಲೀಸರು ಈ ಬಗ್ಗೆ ತನಿಖೆ ನಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸೂರತ್ ನ ಪೋಲೀಸ್ ವರಿಷ್ಟಾಧಿಕಾರಿ ಹಿತೇಶ್ ಜೋಯ್ಸ್ ಅವರು’ ಸಂತ್ರಸ್ತ ಸಾಗರ್ ಪಾಟೀಲ್ ತನ್ನ ಪತ್ನಿ ಅಶ್ವಿನಿಬೆನ್ ಕೂರಿಸಿಕೊಂಡು ದ್ವಿಚಕ್ರವಾಹನದಲ್ಲಿ ಬೈಕ್ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಚಾಲಕ ಕಾರು ನಿಲ್ಲಿಸದೆ ಚಲಾಯಿಸಿಕೊಂಡು 12 ಕಿಲೋಮೀಟರ್ ಸಾಗರ್ ಬಾಡಿಯನ್ನು ಎಳೆದೊಯ್ದಿದ್ದಾನೆ. ಬಳಿಕ ಅಲ್ಲಿಂದ ಪರಾರಾಯಾಗಿದ್ದಾನೆ. ಹಿಂದೆ ಇದ್ದ ವ್ಯಕ್ತಿಯೊಬ್ಬರು ಇದರ ವಿಡಿಯೋವನ್ನು ಚಿತ್ರೀಕರಿಸಿದ್ದು ನಮಗೆ ಹಸ್ತಾಂತರಿಸಿ, ತನಿಕೆಗೆ ಸಹಕರಿಸಿದ್ದಾರೆ ಆದಷ್ಟು ಬೇಗ ಅಪರಾಧಿಯನ್ನು ಹಿಡಿಯುತ್ತೇವೆ’ ಎಂದು ತಿಳಿಸಿದ್ದಾರೆ.