ಇಲ್ಲಿ ವ್ಯಕ್ತಿಯ ವಯಸ್ಸನ್ನೂ ಹಿಮ್ಮೆಟ್ಟಿಸಲಾಗುತ್ತೆ : 45 ರ ಈತ ತರುಣನಂತಾಗಲು ಮಾಡುತ್ತಿರುವ ವೈದ್ಯಕೀಯ ಚಿಕಿತ್ಸೆ ಏನು ಗೊತ್ತೇ?
45 ರ ಪ್ರಾಯದ ಆತನಿಗೆ ತಾನು ಯಾವಾಗಲೂ ಚಿರ ಯುವಕನಂತೆ ಕಾಣಬೇಕೆಂಬ ಆಸೆ! ತನಗೆ ಎಷ್ಟೇ ವಯಸ್ಸಾದರೂ ತನ್ನ ತ್ವಚೆ ಯುವಕರನ್ನೂ ನಾಚಿಸಬೇಕೆಂಬ ಬಯಕೆ. ಇದಕ್ಕಾಗಿ ಅವನು ಏನು ಬೇಕಾದರೂ ಮಾಡಲು ಸಿದ್ಧ. ಮೊದಲಿದ್ದ ತನ್ನ ಯೌವ್ವನವನ್ನು ಮರಳಿ ಪಡೆಯುವ ಸಲುವಾಗಿ ಆತನು ಮಾಡುವ ಸಾಹಸಗಳನ್ನು, ಪ್ರತೀ ವರ್ಷ ಸುರಿಯುವ ಹಣವನ್ನು ನೋಡಿದ್ರೆ ಖಂಡಿತಾ ನಿಮ್ಮ ಹುಬ್ಬೇರುತ್ತದೆ. ಅಲ್ಲದೆ ಇವನು ಹುಡುಗನಾಗಲು ನಡೆಸುತ್ತಿರುವ ಕಸರತ್ತುಗಳನ್ನು ಕೇಳಿದ್ರೆ ಇವನೇನು ಮಾನಸಿಕನಾ ಅಂತ ಅನಿಸೋದಂತೂ ಗ್ಯಾರೆಂಟಿ.
ಯಾರಾದ್ರೂ ನಿನಗೆಷ್ಟು ವಯಸ್ಸು ಎಂದು ಕೇಳಿದಾಗ ಉತ್ತರಿಸಲು ಒಮ್ಮೆ ಹಿಂದು ಮುಂದು ನೋಡುವ ನಾವುಗಳು ಸದಾ ನಮ್ಮ ವಯಸ್ಸಿನ ಗುಟ್ಟನ್ನು ಗೌಪ್ಯವಾಗೇ ಇಟ್ಟಿರುತ್ತೇವೆ. ಇದರೊಂದಿಗೆ ಯಾವಾಗಲೂ ಯೌವ್ವನನಾಗಿರಬೇಕು, ವಯಸ್ಸಾದಂತೆ ಕಾಣಬಾರದು, ಎಲ್ಲರೆದರೂ ಚೆನ್ನಾಗಿ ಕಾಣಬೇಕೆಂದು ನಮ್ಮ ತ್ವಚೆಯ ಬಗ್ಗೆ ಸಾಕಷ್ಟು ಗಮನ ಹರಿಸುತ್ತೇವೆ. ಇದಕ್ಕಾಗಿ ಆಹಾರ ಕ್ರಮದಲ್ಲಿ ಬದಲಾವಣೆ ಮಾಡೋದು, ಯೋಗ ಮಾಡುವುದು, ಡಯಟ್ ಮಾಡುವುದೆಲ್ಲಾ ಮಾಡುತ್ತೇವೆ. ಇದು ಸಾಮಾನ್ಯರ ಕತೆಯಾದರೆ ಇನ್ನು ಸಿನಿಮಾ ತಾರೆಯರು, ಶ್ರೀಮಂತರು ಸರ್ಜರಿಯ ಮೊರೆ ಹೋಗುತ್ತಾರೆ. ಅಲ್ಲದೆ ಈಗಂತೂ ವಯಸ್ಸನ್ನು ಸಂಕುಚಿತಗೊಳಿಸುವ ಕುರಿತು ಅನೇಕ ವಿದ ವಿಧದ ಸಂಶೋಧನೆಗಳೇ ನಡೆದಿವೆ. ಆದರೂ ವಯಸ್ಸಾಗುವುದನ್ನು ಇದುವರೆಗೂ ಯಾರಿಗೂ ತಡೆಯಲಾಗಿಲ್ಲ. ಆದ್ರೆ ಇಲ್ಲೊಬ್ಬ 45ರ ಅಮೇರಿಕನ್ ಉದ್ಯಮಿ ಚಿರಯುವಕನಂತೆ ಕಾಣುವುದಕ್ಕೋಸ್ಕರ ಮಿಲಿಯನ್ ಗಟ್ಟಲೆ ಡಾಲರ್ ವೆಚ್ಚ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾನೆ. ತನ್ನ ಪ್ರಯತ್ನದಲ್ಲಿ ಸಕ್ಸಸ್ ಕೂಡಾ ಆಗಿದ್ದಾನೆ.
ಹೌದು, ಅಮೆರಿಕಾದ ಖ್ಯಾತ ಉದ್ಯಮಿ, ಲೇಖಕ ಹಾಗೂ ಮಿದುಳಿನ ಚಟುವಟಿಕೆಯನ್ನು ಗಮನಿಸುವ ಮತ್ತು ದಾಖಲಿಸುವ ಕೆರ್ನೆಲ್ ಎಂಬ ಸಂಸ್ಥೆಯೊಂದರ ಸಂಸ್ಥಾಪಕರೂ ಆದ ಬ್ರಿಯಾನ್ ಜಾನ್ಸನ್ ಎಂಬುವವರೇ ಹೀಗೆ ಚಿರಯುವಕನಂತೆ ಕಾಣುವುದಕ್ಕೋಸ್ಕರ ಶ್ರಮ ಪಡುತ್ತಿರುವ ಮನುಷ್ಯ. ಸದ್ಯ ಅವರು ‘ಪ್ರಾಜೆಕ್ಟ್ ಬ್ಲೂಪ್ರಿಂಟ್’ ಮೂಲಕ ತನ್ನ ಎಪಿಜೆನಿಟಿಕ್ ವಯಸ್ಸನ್ನು 5.1 ವರ್ಷಗಳಷ್ಟು ಕಡಿಮೆಗೊಳಿಸುವುದಾಗಿ ಹೇಳಿಕೊಂಡಿದ್ದಾರೆ. ಇದರೊಂದಿಗೆ 45 ರ ಪ್ರಾಯದ ಇವರು 18ರ ಹುಡುಗನ ದೇಹವನ್ನು ಪಡೆಯುವ ಮಹದಾಸೆಯನ್ನು ಹೊಂದಿದ್ದು, ಇದಕ್ಕಾಗಿ ವರ್ಷಂಪ್ರತಿ ಸುಮಾರು 2 ಮಿಲಿಯನ್ ಡಾಲರ್ (16.3 ಕೋಟಿ ) ಮೊತ್ತವನ್ನು ವ್ಯಯಿಸುತ್ತಿದ್ದಾರೆ. ಇಷ್ಟು ದುಡ್ಡು ಖರ್ಚು ಮಾಡುವುದಲ್ಲದೆ 30 ಜನ ವಿಶೇಷ ವೈದ್ಯರ ತಂಡದಿಂದ ಇವರ ಆರೋಗ್ಯ ಹಾಗೂ ಚಟುವಟಿಕೆಯ ಮೇಲುಸ್ತುವಾರಿ ಮಾಡಲಾಗುತ್ತಿದೆ!
ಇದೆಲ್ಲದರ ನಡುವೆ ಎಲ್ಲರೂ ಆಶ್ಚರ್ಯ ಪಡುವ ಸಂಗತಿಯೆಂದರೆ, ಮುಖದ ತ್ವಚೆ ಹಾಗೂ ದೇಹದ ಸೌಂದರ್ಯದ ಮೂಲಕ ಯುವಕನಂತೆ ಕಾಣವ ಹಾಗೆ ಮಾಡಬಹುದು. ಆದರೆ ನಮ್ಮ ದೇಹದ ಹೊರ ಹಾಗೂ ಒಳಭಾಗದ ಅಂಗಾಂಗಗಳು ಕೂಡ ಹರಯದ ವಯಸ್ಸಿನಲ್ಲಿರುವ ಅಂಗಾಂಗಗಳಂತೆ ಮಾರ್ಪಡಿಸಿ, ಅದೇ ರೀತಿ ಶಕ್ತಿ ಪಡೆಯುವಂತೆ ಮಾಡಲು ಸಾಧ್ಯವೇ. ಆದರಿಲ್ಲಿ ಮೆದುಳನ್ನು ಹಿಡಿದು ಹೃದಯ ಶ್ವಾಸಕೋಶಗಳು, ಯಕೃತ್ತು, ಮೂತ್ರಪಿಂಡಗಳು ಸ್ನಾಯುರಜ್ಜುಗಳು, ಹಲ್ಲುಗಳು, ಚರ್ಮ, ಕೂದಲು, ಮೂತ್ರಕೋಶ ಅಲ್ಲದೆ ಶಿಶ್ನ ಹಾಗೂ ಗುದನಾಳವನ್ನು ಕೂಡ 18 ರ ಹರೆಯದ ತರುಣರಂತೆ ಹೊಂದಲು ಜಾನ್ಸನ್ ಬಯಸಿದ್ದಾರೆ ಎಂದು ವೆಬ್‌ಸೈಟೊಂದು ವರದಿ ಮಾಡಿದೆ.
ನಂಬಲು ಅಸಾಧ್ಯವಾದರೂ ಇದು ಸತ್ಯ! ಬಯೋಟೆಕ್ ಪ್ರವರ್ತಕನಾಗಿರುವ ಬ್ರಿಯಾನ್ ಜಾನ್ಸನ್ ಅವರು ವರ್ಷಕ್ಕೆ 2 ಮಿಲಿಯನ್ ಡಾಲರ್‌ವರೆಗೆ ವೆಚ್ಚ ತಗಲಬಹುದಾದ ದುಬಾರಿ ವೈದ್ಯಕೀಯ ಕ್ರಮಗಳಿಗೆ ಒಳಗಾಗುತ್ತಿದ್ದಾರೆ. ಈ ವೈದ್ಯಕೀಯ ಕ್ರಮಗಳಿಂದಾಗಿ ಅವರು 18 ವರ್ಷ ವಯಸ್ಸಿನವರಿಗಿರುವ ಶ್ವಾಸಕೋಶದ ಸಾಮರ್ಥ್ಯ ಮತ್ತು ದೈಹಿಕ ಸಾಮರ್ಥ್ಯ, 37 ವರ್ಷ ವಯಸ್ಸಿನ ಹೃದಯ ಮತ್ತು 28 ವರ್ಷದ ವಯಸ್ಸಿನವರ ಚರ್ಮವನ್ನು ಪಡೆಯಲಿದ್ದಾರಂತೆ. ಆಗರ್ಭ ಶ್ರೀಮಂತ ಸಾಫ್ಟ್‌ವೇರ್ ಉದ್ಯಮಿಯಾಗಿರುವ ಜಾನ್ಸನ್ ಅವರ ವಯಸ್ಸನ್ನು ಕಡಿಮೆಗೊಳಿಸುವ ಈ ಪ್ರಕ್ರಿಯೆಗಾಗಿ 30 ಕ್ಕೂ ಹೆಚ್ಚು ವೈದ್ಯರು ಮತ್ತು ಆರೋಗ್ಯ ತಜ್ಞರು ಬ್ರಿಯಾನ್ ಜಾನ್ಸನ್ ಅವರ ಪ್ರತಿ ದೈಹಿಕ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಪುನರುತ್ಪಾದಕ ಔಷಧ ವೈದ್ಯ 29 ವರ್ಷದ ಆಲಿವರ್ ಜೋಲ್ಮನ್ ನೇತೃತ್ವದ ತಂಡವು ಜಾನ್ಸನ್ ಅವರ ಎಲ್ಲಾ ಅಂಗಗಳಲ್ಲಿ ವಯಸ್ಸಾದ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದ್ದಾರೆ.
ಝೋಲ್ಮನ್ ಮತ್ತು ಜಾನ್ಸನ್ ಅವರು ವಯಸ್ಸಾದ ಮತ್ತು ದೀರ್ಘಾಯುಷ್ಯದ ಬಗೆಗಿನ ವಿಜ್ಞಾನ ಸಂಬಂಧಿ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದಿದ್ದು, ಜಾನ್ಸನ್ ಅವರನ್ನು ಈ ಅತ್ಯಂತ ಭರವಸೆಯ ಚಿಕಿತ್ಸೆ ವಿಧಾನದ ಪರೀಕ್ಷಾರ್ಥವಾಗಿ ಬಳಸಲಾಗುತ್ತಿದೆ. ಅಲ್ಲದೇ ಇದರ ಫಲಿತಾಂಶಗಳನ್ನು ತಮಗೆ ತಿಳಿದ ಪ್ರತಿಯೊಂದು ಮಾರ್ಗದಿಂದ ಪತ್ತೆ ಮಾಡುತ್ತಾರೆ. ಈ ವಯಸ್ಸನ್ನು ಮರೆ ಮಾಡುವ ಈ ವೈದ್ಯಕೀಯ ಪ್ರಯೋಗಕ್ಕಾಗಿ ಕ್ಯಾಲಿಫೋರ್ನಿಯಾದ ವೆನಿಸ್‌ನಲ್ಲಿರುವ ಜಾನ್ಸನ್ ಅವರ ಮನೆಯಲ್ಲಿ ಹಲವಾರು ಮಿಲಿಯನ್ ಡಾಲರ್ ಹೂಡಿಕೆಯ ಅಗತ್ಯವಿದೆ. ಈ ವರ್ಷ ಅವರು ಸುಮಾರು 2 ಮಿಲಿಯನ್ ಡಾಲರ್ ವೆಚ್ಚ ಮಾಡುವ ಹಾದಿಯಲ್ಲಿದ್ದಾರೆ.
ಯವ್ವನವನ್ನು ಮರಳಿ ಪಡೆಯುತ್ತೇನೆಂಬ ಆಸೆಯಲ್ಲಿರುವ ಜಾನ್ಸನ್ ಅವರು ಇದಕ್ಕಾಗಿ ಕಟ್ಟುನಿಟ್ಟಿನ ದಿನಚರಿಯನ್ನು ಆಚರಿಸುತ್ತಿದ್ದಾರೆ. ಸಸ್ಯಹಾರಿ ಆಹಾರ ಕ್ರಮವನ್ನು ಮಾತ್ರ ರೂಡಿಸಿಕೊಂಡಿರುವ ಇವರು ದಿನಕ್ಕೆ ಕೇವಲ 1,977 ಕ್ಯಾಲೋರಿಗಳಷ್ಟು ಮಾತ್ರ ಆಹಾರ ಸೇವಿಸುತ್ತಾರೆ. ಬಳಿಕ ನಿತ್ಯವೂ ಒಂದು ಗಂಟೆ ವ್ಯಾಯಾಮ ಮಾಡುತ್ತಾರೆ. ಮಲಗಲು ಕೂಡ ಒಂದು ಸಮಯ ನಿಗದಿ ಮಾಡಿಕೊಂಡಿದ್ದು, ಬೆಳಗ್ಗೆ 5ಗಂಟೆಯ ಹೊತ್ತಿಗಾಗಲೇ ಎದ್ದು ಬಿಡುತ್ತಾರೆ. ನಂತರ ಬೆಳಿಗ್ಗೆಯ ಅಹಾರವಾಗಿ ಎರಡು ಡಜನ್ ಗಳಷ್ಟು ಸಪ್ಲಿಮೆಂಟ್ ಗಳನ್ನು, ಕ್ರಿಯೇಟೈನ್ ಮತ್ತು ಕಾಲಜನ್ ಪೆಪ್ಟೈಡ್ ಗಳ ಜೊತೆಗೆ ಹಸಿರು ತರಕಾರಿ ಅಥವಾ ಸೊಪ್ಪಿನ ರಸವನ್ನು ಕುಡಿಯುತ್ತಾರೆ.
ದಿನವಿಡೀ ಜಾನ್ಸನ್ ಶರೀರದ ಪ್ರಮುಖ ಅಂಶಗಳನ್ನು ಪರಿಶೀಲಿಸಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಅವರ ತೂಕ, ದೇಹದ ಕೊಬ್ಬು, ರಕ್ತದಲ್ಲಿನ ಗ್ಲೂಕೋಸ್ ಮಟ್ಟುಗಳು ಮತ್ತು ಹೃದಯ ಬಡಿತದ ವ್ಯತ್ಯಾಸಗಳನ್ನು ಪ್ರತೀ ದಿನ ಚೆಕ್ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಇವರು ರಾತ್ರಿ ನಿದ್ದೆಯಲ್ಲಿದ್ದಾಗ ಒಂದು ಯಂತ್ರವು, ಈತ ರಾತ್ರಿ ಕನಸಿನಲ್ಲಿ ಎಷ್ಟು ಬಾರಿ ಲೈಂಗಿಕ ಆಸತಕ್ತಿಗೆ ಒಳಗಾಗುತ್ತಾನೆ ಎಂಬುದನ್ನು ಪತ್ತೆ ಹಚ್ಚುತ್ತದೆ. ಆ ಕನಸುಗಳೆಲ್ಲವೂ ಯೌವ್ವನವಿದ್ದಾಗ ಕಂಡಂತೆ ಭಾಸವಾಗತ್ತದೆಯಂತೆ!
ಪ್ರಕೃತಿಯ ವಿರುದ್ಧ ನಡೆದ ಹಲವು ಪ್ರಯೋಗಗಳು ಮನು ಕುಲಕ್ಕೆ ಮಾರಕವಾದ ಹಲವು ನಿದರ್ಶನಗಳಿವೆ. ವೃದ್ಧಾಪ್ಯ ವಿಳಂಬವಾಗಬಹುದು, ಆದರೆ ನಿಧಾನವಾಗಿಯಾದರೂ ಆಯಸ್ಸು ಶಕ್ತಿ ಸಾಮರ್ಥ್ಯ ಎಲ್ಲವೂ ಕ್ಷಿಣಿಸುತ್ತಾ ಹೋಗುತ್ತದೆ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಆದರೂ ಮಾನವ ತನ್ನ ಪ್ರಯೋಗವನ್ನು ಮುಂದುವರಿಸುತ್ತಲೇ ಹೋಗಿದ್ದು, ತಾರುಣ್ಯಕ್ಕೆ ಸಂಬಂಧಿಸಿದ ಈ ಪ್ರಯೋಗ ಒಂದು ವೇಳೆ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ದೇಹ ಸೌಂದರ್ಯ ಹೆಚ್ಚಿಸಿಕೊಳ್ಳಲಿಕ್ಕೆ ಇದು ದೊಡ್ಡ ಮೈಲಿಗಲ್ಲಾಗುವುದರಲ್ಲಿ ಸಂಶಯವೇ ಇಲ್ಲವಾಗಿದೆ.