ಮುಟ್ಟಾದರೆ ದೇವಸ್ಥಾನಕ್ಕೆ ಬರಬಾರದು ಎಂದು ದೇವರು ಹೇಳಿದ್ದಾನಾ ? – ನಟಿಯೋರ್ವಳು ನೀಡಿದ್ಳು ವಿವಾದಾತ್ಮಕ ಹೇಳಿಕೆ!
ಭಾರತೀಯ ಸಂಸ್ಕೃತಿಯಲ್ಲಿ ಮುಟ್ಟಾದಾಗ ದೇವಸ್ಥಾನಗಳಿಗೆ ಪ್ರವೇಶಿಸುವಂತಿಲ್ಲ. ಅಷ್ಟೇ ಅಲ್ಲದೆ ಯಾವುದೇ ಕಾರ್ಯಕ್ರಮಗಳಲ್ಲು ಪಾಲ್ಗೊಳ್ಳುವಂತಿಲ್ಲ. ಈ ವಿಚಾರದ ಬಗ್ಗೆ ಈಗಾಗಲೇ ಅನೇಕ ಚರ್ಚೆಗಳು ನಡೆದಿವೆ ಮತ್ತು ನಡೆಯುತ್ತಲಿದೆ. ಅಂತೆಯೇ ತಮಿಳು ಚಿತ್ರರಂಗದ ನಟಿ ಐಶ್ವರ್ಯಾ ರಾಜೇಶ್ ಕೂಡ ಈ ಕುರಿತು ಅವರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ನಟಿ ಐಶ್ವರ್ಯಾ ರಾಜೇಶ್ ಅವರು ಕಣ್ಣ, ತಿಟ್ಟಂ ಇರಂಡು, ವಡ ಚೆನ್ನೈ, ಜಮುನಾ ಡ್ರೈವರ್ ಚಿತ್ರಗಳ ಮೂಲಕ ತೆರೆ ಮೇಲೆ ಕಾಣಿಸಿ, ಸಿನಿ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ತನ್ನ ನಟನೆಯಿಂದ ಐಶ್ವರ್ಯಾರವರು ಗಮನ ಸೆಳೆಯುವ ಮೂಲಕ ಅದೆಷ್ಟೋ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಇವರು ಹೇಳಿರುವ ವಿವಾದಾತ್ಮಕ ಹೇಳಿಕೆಯೊಂದು ಭಾರಿ ಗೊಂದಲ ಸೃಷ್ಟಿಸಿದೆ.
‘ದಿ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾದ ನಟಿ, ಈ ಸಿನಿಮಾವು ಮಹಿಳೆಯರಿಗೆ ಯಾವಾಗಲೂ ಏನು ಮಾಡಬೇಕೆನ್ನುವುದನ್ನು ತಿಳಿಸುತ್ತದೆ. ಮದುವೆಯ ನಂತರ ವಧು ಹೇಗೆ ವರ್ತಿಸಬೇಕು ಎಂದು ಸಮಾಜ ನಿರೀಕ್ಷಿಸುತ್ತದೆ ಎಂಬುದರ ಕುರಿತು ವಿವರಿಸುತ್ತದೆ ಎಂದಿದ್ದಾರೆ.
ಸಿನಿಮಾಗೆ ಕುರಿತಂತೆ ಮಾತನಾಡಿ, ಕೇರಳದ ಪ್ರಸಿದ್ಧ ದೇವಾಲಯವಾದ ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧದ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ದೇವರು ಎಲ್ಲ ಕಡೆಯೂ ಇದ್ದಾನೆ. ಪುರುಷ, ಸ್ತ್ರೀ ನಡುವೆ ಯಾವುದೇ ವ್ಯತ್ಯಾಸವಿಲ್ಲ” ಎಂದು ಅವರು ಹೇಳಿದ್ದಾರೆ. ಯಾರು ದೇವಾಲಯದ ಆವರಣವನ್ನು ಪ್ರವೇಶಿಸಬೇಕು ಅಥವಾ ಪ್ರವೇಶಿಸಬಾರದು ಎಂಬ ಬಗ್ಗೆ ಯಾವುದೇ ರೀತಿಯಲ್ಲಿ ದೇವರು ಜನರಿಗೆ ತಾರತಮ್ಯ ಮಾಡುವುದಿಲ್ಲ. ಇದೆಲ್ಲಾ ಬರೀ ಮಾನವ ನಿರ್ಮಿತ ಕಟ್ಟುಪಾಡುಗಳಷ್ಟೇ ಎಂದಿದ್ದಾರೆ.
ಶಬರಿಮಲೆಯ ಉದಾಹರಣೆಯನ್ನು ನೀಡಿದ ನಟಿ, ಶಬರಿಮಲೆ ದೇವಸ್ಥಾನದಲ್ಲಿ ಮಾತ್ರವಲ್ಲ, ಯಾವುದೇ ದೇವಾಲಯದಲ್ಲಿರುವ ಯಾವುದೇ ದೇವರು ಅಥವಾ ದೇವತೆಗಳು ಋತುಮತಿಯಾದ ಮಹಿಳೆಯರು ಪವಿತ್ರ ಸ್ಥಳವನ್ನು ಪ್ರವೇಶಿಸಿದರೆ ಅಸಮಾಧಾನಗೊಳ್ಳಲು ಸಾಧ್ಯವಿಲ್ಲ. ಅಲ್ಲಿ ಯಾವುದೇ ಭೇದ ಭಾವಗಳು ಸೃಷ್ಟಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಒಬ್ಬ ಭಕ್ತ ಪರಿಶುದ್ಧನಾಗಿರಲಿ ಅಥವಾ ಪರಿಶುದ್ಧನಲ್ಲವೇ ಎಂಬುದರ ಕುರಿತು ದೇವರು ಯಾವುದೇ ಕಾನೂನನ್ನು ರಚಿಸಿಲ್ಲ. ಯಾವುದೇ ದೇವಾಲಯದ ಆವರಣಕ್ಕೆ ಮುಟ್ಟಿನ ಮಹಿಳೆ ಪ್ರವೇಶಿಸುವುದನ್ನು ದೇವರು ಎಂದಿಗೂ ನಿಷೇಧಿಸುವುದಿಲ್ಲ. ಈ ಮಾನವ ನಿರ್ಮಿತ ನಿರ್ಬಂಧಗಳಿಗೂ ದೇವರಿಗೂ ಯಾವುದೇ ಸಂಬಂಧವಿಲ್ಲ, ನಾನು ಅದನ್ನೇ ನಂಬುತ್ತೇನೆ ಎಂದಿದ್ದಾರೆ ಐಶ್ವರ್ಯಾ ರಾಜೇಶ್.
ಅವರ ಮುಂಬರುವ ತಮಿಳಿನ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಕುರಿತು ಮಾತನಾಡಿ, ಇದು ಮಲಯಾಳಂ ಭಾಷೆಯ ಸಿನಿಮಾದ ರಿಮೇಕ್ ಆಗಿದ್ದು, ಸಿನಿಮಾವನ್ನು ಆರ್‌ಡಿಸಿ ಮೀಡಿಯಾದ ಬ್ಯಾನರ್‌ನಡಿಯಲ್ಲಿ ನೀಲ್ ಮತ್ತು ದುರುಗುರಾಮ್ ಚೌಧರಿ ಸಹಯೋಗದಲ್ಲಿ ನಿರ್ಮಿಸಿದ್ದಾರೆ. ಐಶ್ವರ್ಯಾ ರಾಜೇಶ್ ಮತ್ತು ರಾಹುಲ್ ರವೀಂದ್ರನ್ ಇದರಲ್ಲಿ ಮುಖ್ಯ ಪಾತ್ರ ನಟಿಸಿದ್ದಾರೆ.