ನೀವು ಸಿಕ್ಸ್ ಪ್ಯಾಕ್ ‘ಗಾಂಧಿ’ ನೋಡಿದ್ದೀರಾ? ಹಾಗಾದ್ರೆ ಇಲ್ಲಿ ಉದ್ಘಾಟನೆಗೆ ರೆಡಿಯಾಗಿದ್ದಾರೆ ನೋಡಿ ನಮ್ಮ ಮಾರ್ಡನ್ ರಾಷ್ಟ್ರ ಪಿತ!
ಭಾರತದಲ್ಲಿ ಸದ್ಯ ಎಲ್ಲಿ ನೋಡಿದರೂ ಗಣ್ಯಮಾನ್ಯ ವ್ಯಕ್ತಿಗಳ ಪ್ರತಿಮೆಯ ನಿರ್ಮಾಣ, ಸ್ಥಾಪನಾ ಕಾರ್ಯಗಳು ಇತ್ತೀಚೆಗೆ ಭರದಿಂದ ಸಾಗುತ್ತಿರುತ್ತದೆ. ಪ್ರತೀ ದಿನ ಒಂದಿಲ್ಲೊಂದು ಪ್ರತಿಮೆ ಅನಾವರಣ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅದರಲ್ಲೂ ರಾಷ್ಟ್ರ ಪಿತ ಮಹಾತ್ಮಗಾಂಧೀಜಿಯವರ ಪ್ರತಿಮೆಯೇ ಹೆಚ್ಚೆನ್ನಬಹುದು. ಆದರೆ ಇದೀಗ ಈ ರಾಷ್ಟ್ರ ಪಿತರ ಪ್ರತಿಮೆಯೊಂದು ಸಿಕ್ಸ್ ಪ್ಯಾಕ್ ಪಡೆದುಕೊಂಡು ಸಾಕಷ್ಟು ಸುದ್ಧಿಯಾಗುತ್ತಿದೆ.
ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಗಾಂಧೀಜಿಗೆ ಯಾವುದೇ ಕಾರಣಕ್ಕೂ ಅವಮಾನ ಆಗದಂತೆ ದೇಶದಲ್ಲಿ ನಿಗಾವಹಿಸಲಾಗುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವಾಗ ಸ್ವಲ್ಪ ಎಡವಟ್ಟು ಆದರೂ ಅದನ್ನು ತಿರಸ್ಕಾರ ಮಾಡಿ, ಬೇರೊಂದು ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ. ಆದರೆ, ಹಾಸನದ ಎಂ.ಜಿ. ರಸ್ತೆಯಲ್ಲಿ ಸಿಕ್ಸ್ ಪ್ಯಾಕ್ ಹೊಂದಿದ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಅಳವಡಿಸಿ ವಿಕೃತಿ ಮೆರೆಯಲಾಗಿದೆ ಎಂದು ಸ್ಥಳೀಯ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ನಗರದ ಎಂ.ಜಿ. ರಸ್ತೆಯ ಬಳಿಯಲ್ಲಿನ ಗಾಂಧಿ ಭವನದ ಬಳಿ ನಿರ್ಮಿಸಲಾದ ಸುಮಾರು ೨೦ ಅಡಿ ಎತ್ತರದ ಗಾಂಧಿ ಪ್ರತಿಮೆಯನ್ನು ವಿಕೃತವಾಗಿ ನಿರ್ಮಿಸಲಾಗಿದೆ. ಗಾಂಧಿ ಪ್ರತಿಮೆಯಲ್ಲಿ ಸಿಕ್ಸ್ ಪ್ಯಾಕ್ ಅಳವಡಿಕೆ ಮಾಡಿದ್ದು, ಮಾಡ್ರನ್ ಗಾಂಧಿ ಎಂದು ಹೇಳಾಗುತ್ತಿದೆ. ೩ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರೋ ಗಾಂಧಿ ಭವನದ ಮುಂದೆ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಗಾಂಧಿ ಭವನದ ಆವರಣದಲ್ಲಿ ನಿರ್ಮಿಸಲಾಗಿರು ದಂಡಿ ಮಾರ್ಚ್ ಕಲಾಕೃತಿ ಹಾಗು ಮಹಾತ್ಮ ಗಾಂಧಿ ಪ್ರತಿಮೆಗಳು ವಿಕೃತವಾಗಿವೆ. ವಿಕೃತ ಕಲಾಕೃತಿ ನಿರ್ಮಾಣಕ್ಕೆ ಕಲಾವಿದನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಇನ್ನು ಗಾಂಧೀಜಿ ಪ್ರತಿಮೆಯಲ್ಲಿ ದೇಹದ ತಲೆ ಭಾಗ ಹಾಗೂ ದೇಹದ ಇತರೆ ಭಾಗಗಳಿಗೆ ತಾಳೆಯೇ ಇಲ್ಲದಂತೆ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ಬೇಕಾಬಿಟ್ಟಿಯಾಗಿ ಕಲಾಕೃತಿಗಳನ್ನ ಅನನುಭವಿ ಕಲಾವಿದರು ನಿರ್ಮಿಸಿದ್ದಾರೆ. ಕೂಡಲೆ ಮಹಾತ್ಮ ಗಾಂಧಿ ಮೂರ್ತಿ ಸರಿಮಾಡಲು ಜನರ ಆಗ್ರಹ ಮಾಡಿದ್ದಾರೆ. ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಬೇಕಿರುವ ಗಾಂಧಿ ಭವನದ ಮುಂದೆ ಇಂತಹ ವಿಕೃತ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ಕೂಡಲೇ ಇಂತಹ ಪ್ರತಿಮೆ ತೆರವುಗೊಳಿಸಿ ಅಥವಾ ಪ್ರತಿಮೆ ಸರಿಪಡಿಸಿ ಎಂದು ಆಗ್ರಹಿಸಿದ್ದಾರೆ.