ಕೊಯಿಲ ಗೋಶಾಲೆಯಲ್ಲಿ ಆಹಾರದ ಕೊರತೆಯಿಂದ ಯಾವುದೇ ಜಾನುವಾರುಗಳು ಸತ್ತಿಲ್ಲ -ಸ್ಪಷ್ಟನೆ
ಕಡಬ: ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದಲ್ಲಿ ಸಾಕಾಲಾಗುತ್ತಿರುವ ಮಲೆನಾಡ ಗಿಡ್ಡ ತಳಿಯ ಆರು ಕರುಗಳು ಹವಾಗುಣದ ವೈಪರೀತ್ಯದಿಂದ ಕಳೆದ ಕೆಲವು ದಿನಗಳ ಹಿಂದೆ ಸಾವನಪ್ಪಿದೆ. ಆಹಾರದ ಕೊರತೆಯಿಂದ ಅಲ್ಲ ಎಂದು ಅಲ್ಲಿನ ಉಪನಿರ್ದೆಶಕ ಡಾ. ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ಜಾನುವಾರುಗಳ ಸಾವು ಪ್ರಕರಣ ಸಂಬಂಧಪಟ್ಟಂತೆ ಆಹಾರದ ಕೊರತೆಯಿಂದ ಜಾನುವಾರುಗಳ ಸಾವಾಗುತ್ತಿದೆ ಎನ್ನುವ ಸಾರ್ವಜನಿಕ ವಲಯದಲ್ಲಿದ್ದ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಕಳೆದ 4 ವರ್ಷಗಳಿಂದ ಮಲೆನಾಡ ಗಿಡ್ಡ ತಳಿಗಳ ಗೋವುಗಳನ್ನು ಉತ್ಪನ್ನ ನಿರೀಕ್ಷಿಸದೆ ಸಂರಕ್ಷಣೆಯ ಉದ್ದೇಶದಿಂದ ಸಾಕಲಾಗುತ್ತಿದೆ. 200 ಗೋವುಗಳನ್ನು ಸಾಕುವ ಸಾಮಥ್ಯವಿದೆ ಆದರೆ ಕರು , ದನ ಸೇರಿದಂತೆ 700 ಗೋವುಗಳನ್ನು ಸಾಕಲಾಗುತ್ತಿದೆ. ಈ ಹಿಂದೆ ಗೋವಿನ ಆಹಾರವನ್ನು ಸರಬರಾಜು ಮಾಡುತ್ತಿದ್ದ ಕಂಪೆನಿಯ ಟೆಂಡರ್ ಅವದಿ ಮುಗಿದಿದೆ. ಹೊಸ ಟೆಂಡರ್ ಪ್ರಕ್ರಿಯೆಯ ತಾಂತ್ರಿಕ ತೊಂದರೆಯಿಂದ ಆಹಾರ ಸರಬರಾಜಿನಲ್ಲಿ ಕಳೆದ ನಾಲ್ಕು ದಿನಗಳಿಂದ ವಿಳಂಭವಾಗಿದೆ.
ಈ ಮದ್ಯೆ ಮಂಗಳವಾರದಿಂದ ಕೆಎಮ್‌ಎಫ್ ನಿಂದ ಆಹಾರವನ್ನು ತರಿಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ಮುಂದಿನ ಟೆಂಡರ್ ಮೂಲಕ ಆಹಾರ ಸರಬರಾಜು ಮಾಡುವ ತನಕ ಮುಂದುವರಿಯಲಿದೆ. ಆಹಾರದ ಕೊರತೆಯಾದ ನಾಲ್ಕು ದಿನದಲ್ಲಿ ಯಾವುದೇ ಜಾನುವಾರು ಸಾವನಪ್ಪಿಲ್ಲ. ಹವಮಾನದ ವೈಪರೀತ್ಯದಿಂದ ಕೆಲವೊಂದು ಗೋವುಗಳು ಆಶಕ್ತವಾಗಿದೆ. ಅಲ್ಲದೆ ಗೋವುಗಳ ಸಂಖ್ಯೆ ಸಾಮರ್ಥ್ಯಕ್ಕಿಂತ ಹೆಚ್ಚಾದ ಕಾರಣ ಚಿಕ್ಕ ಕರುಗಳಿಗೆ ದನಗಳು ತುಳಿಯುತ್ತಿರುವುದರಿಂದ ಗಾಯಗಳಾಗುತ್ತದೆ. ಇಂತಹ ಗೋವುಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗುತ್ತಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನಪ್ಪಿದೆ. ಸಾವನಪ್ಪಿದ ಗೋವುಗಳ ಕಾನೂನು ಪ್ರಕಾರ ಮಹಜರು ನಡೆಸಲಾಗಿದೆ. ಕಳೆದ ಎರಡು ವರ್ಷಗಳಿಂದ ಗೋವು ಮಾರಾಟದ ಟೆಂಡರ್ ಪ್ರಕ್ರಿಯೆ ನಡೆಯದ ಕಾರಣ ಗೋವುಗಳ ಸಂಖ್ಯೆ ಹೆಚ್ಚಾಗಿದೆ. ಆದರೂ ಗೋವುಗಳ ಗೋ ಆಹಾರವಲ್ಲದೆ ಕೇಂದ್ರದ ಜಾಗದಲ್ಲಿರುವ ಗುಡ್ಡಗಳಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಜಾನುವಾರುಗಳನ್ನು ಮೇಯಲು ಬಿಡಲಾಗುವುದು. ನಾಟಿ ಮಾಡಲಾದ ಮೇವನ್ನು ನೀಡಲಾಗುವುದು ಎಂದು ತಿಳಿಸಿದರು.
ಕಳೆದ ಒಂದು ತಿಂಗಳಿಂದ ಆಹಾರದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಆಹಾರದ ಕೊರತೆಯಾದ ಕಾರಣ ಎಂಟು ಕರುಗಳು ಸಾವನಪ್ಪಿದೆ. ಅಲ್ಲದೆ ಆಹಾರದ ಕೊರತೆಯಿಂದ ಹಾಲುಣಿಸುವ ದನಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗಿದೆ ಎನ್ನುವ ವದಂತಿ ಸಾರ್ವಜನಿಕ ವಲಯದಲ್ಲಿ ಹರಡಿತ್ತು.