ಕುಡಿದ ಮತ್ತಿನಲ್ಲಿ ತನ್ನ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದ ವ್ಯಕ್ತಿ | ತಾನು ಬದುಕಿ, ತನ್ನ 2 ಸಹೋದರರನ್ನು ರಕ್ಷಿಸಿದ “ಧೀರ” ಬಾಲಕಿ
ಆಗ್ರಾ: ಪತ್ನಿಯೊಂದಿಗೆ ಜಗಳವಾಡಿ ತನ್ನ ನಾಲ್ವರು ಮಕ್ಕಳನ್ನು 30 ಅಡಿ ಎತ್ತರದ ಸೇತುವೆಯಿಂದ ಕಾಲುವೆಗೆ ಎಸೆದ ಆರೋಪದ ಮೇಲೆ 35 ವರ್ಷದ ವ್ಯಕ್ತಿಯನ್ನು ಮಂಗಳವಾರ ಬಂಧಿಸಲಾಗಿದೆ. ಈ ದುರ್ಘನೆಯಲ್ಲಿ ಈತನ 12 ವರ್ಷದ ಮಗಳು ಸುರಕ್ಷಿತವಾಗಿ ಈಜಿ, ತನ್ನ ಇಬ್ಬರು ಒಡಹುಟ್ಟಿದವರನ್ನು ರಕ್ಷಿಸಿದ್ದಾಳೆ. ಕೊನೆಯ ಮಗು ಐದು ವರ್ಷದ ಮಗು ಇನ್ನೂ ನೀರಿನಲ್ಲಿ ಮುಳುಗಿ ಕಾಣೆಯಾಗಿದೆ.
ಉತ್ತರ ಪ್ರದೇಶದ ಕಸ್ಗಂಜ್ ಜಿಲ್ಲೆಯ ಸಹವರ್ ಪೊಲೀಸ್ ವ್ಯಾಪ್ತಿಯ ಶೇಖಪುರ್ ಹುಂಡಾದಲ್ಲಿ ಈ ಘಟನೆ ನಡೆದಿದೆ. ಸೋಮವಾರ, ಆರೋಪಿ ಪುಷ್ಪೇಂದ್ರ ಕುಮಾರ್, ಕೌಟುಂಬಿಕ ಕಲಹದ ನಂತರ, ಗ್ರಾಮದಿಂದ 15 ಕಿಮೀ ದೂರದಲ್ಲಿರುವ ಆಕೆಯ ತಂದೆಯ ಮನೆಗೆ ತನ್ನ ಹೆಂಡತಿಯನ್ನು ಬಿಡಲು ಹೋಗಿದ್ದ. ಅಲ್ಲಿಂದ ಹಿಂತಿರುಗಿದ ನಂತರ, ಕುಮಾರ್ ತನ್ನ ಮಕ್ಕಳನ್ನು ಹತ್ತಿರದ ದೇಗುಲಕ್ಕೆ ಜಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ, ದಾರಿಯಲ್ಲಿ ಸೇತುವೆಯ ಬಳಿ ನಿಲ್ಲಿಸಿ ತನ್ನ ನಾಲ್ವರು ಮಕ್ಕಳಾದ ಸೋನು (13), ಪ್ರಭಾ (12), ಕಾಜಲ್ (8) ಮತ್ತು ಹೇಮಲತಾ (5) ಅವರನ್ನು 15 ಅಡಿ ಆಳದ ಕಾಲುವೆಗೆ ಎಸೆದಿದ್ದಾನೆ.
ಈ ಘಟನೆಯ ಸಂದರ್ಭ ತನ್ನ ಸಾಹಸ ಮತ್ತು ಧೈರ್ಯ ಪ್ರದರ್ಶನ ತೋರಿಸಿದ್ದು ಹಿರಿ ಮಗಳು ಪ್ರಭಾ. ಈಕೆ ಈಜಿ ತನ್ನ ಜೀವ ಉಳಿಸಿದ್ದು ಮಾತ್ರವಲ್ಲದೆ ತನ್ನ ಕಿರಿಯ ಸಹೋದರನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ತನ್ನ ಸಹೋದರಿ ಕಾಜಲ್ ಅನ್ನು ಸುರಕ್ಷಿತವಾಗಿ ಕರೆತಂದಿದ್ದಾಳೆ,
ಒಮ್ಮೆ ದಡಕ್ಕೆ ಬಂದ ನಂತರ, ಅವಳು ಮುಳುಗುತ್ತಿದ್ದ ತನ್ನ ಅಣ್ಣ ಸೋನುವನ್ನು ಕೂಗಿ, ನಂತರ ಸೇತುವೆಯ ಕಾಲಮ್ ಅನ್ನು ಹಿಡಿದಿಟ್ಟುಕೊಳ್ಳಲು ಅವನಿಗೆ ಹೇಳಿದಳು. ನಂತರ ಅವಳು ಕಿರುಚಲು ಪ್ರಾರಂಭಿಸಿದಳು ಮತ್ತು ದಾರಿಹೋಕರತ್ತ ಕೈ ಬೀಸಿದ್ದಾಳೆ.
ಮೂವರು ಮಕ್ಕಳ ಸ್ಥಿತಿ ಸ್ಥಿರವಾಗಿದ್ದು, ನಾಪತ್ತೆಯಾಗಿರುವ ಕಿರಿಯ ಮಗು ಹೇಮಲತಾ ಅವರ ಪತ್ತೆಗೆ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಘಟನೆಯನ್ನು ವಿವರಿಸಿದ ಸೋನು, “ಜಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ ನಮ್ಮ ತಂದೆ ರಿಕ್ಷಾ ತಂದಿದ್ದರು, ಹಾಗಾಗಿ ನಾವು ಖುಷಿಯಿಂದ ಇದ್ದೆವು. ನಂತರ ನಮ್ಮನ್ನು ಒಂದು ಸೇತುವೆಯ ಮೇಲೆ ನಿಲ್ಲಿಸಿ, ನಂತರ ಕಾಲುವೆಯ ಹತ್ರ ಕರೆದುಕೊಂಡು ಹೋಗಿ ಬೇಲಿಯ ಮೇಲೆ ಕುಳಿತುಕೊಳ್ಳುವಂತೆ ಹೇಳಿದರು. ನಾನು ಆಗ ಕಾಲುವೆಯ ಆಳ ಕೇಳಿದಾಗ, ಕೂಡಲೇ ನಮ್ಮನ್ನು ಒಬ್ಬೊಬ್ಬರಾಗಿ ಕೆಳಗೆ ತಳ್ಳಿದ್ದಾರೆ” ಎಂದು ಹೇಳಿದಳು.
ಗ್ರಾಮದ ಕಾವಲುಗಾರ ಚೋಬ್ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ ಪುಷ್ಪೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 363 (ಅಪಹರಣ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸಹಾವರ್ನ ಎಸ್ಎಚ್ಒ ಸಿದ್ಧಾರ್ಥ ತೋಮರ್, “ತನಿಖೆಯ ಸಮಯದಲ್ಲಿ, ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಮದ್ಯದ ಅಮಲಿನಲ್ಲಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ, ಅವನನ್ನು ಜೈಲಿಗೆ ಕಳುಹಿಸಲಾಗಿದೆ” ಎಂದು ಹೇಳಿದ್ದಾರೆ. ಇಷ್ಟು ಮಾತ್ರವಲ್ಲಿ ಈ ಸಂದರ್ಭದಲ್ಲಿ ಪ್ರಭಾಳನ್ನು “ನಿಜವಾದ ಹೀರೋ” ಎಂದು ಎಲ್ಲರೂ ಗುಣಗಾನ ಮಾಡಿದ್ದಾರೆ.