ಈ ದೇಶದ ರೆಸ್ಟೋರೆಂಟ್ ನಲ್ಲಿ ‘ಏಷ್ಯನ್ ನಾಚೋಸ್’ ಆಯ್ತು ಭಾರತದ ‘ಹಪ್ಪಳ’! ಇದರ ಬೆಲೆ ಕೇಳಿದ್ರೆ ನೀವೂ ದಂಗಾಗ್ತೀರ!!
ಇಂದು ಇಂಡಿಯನ್ ಫುಡ್ ವಿದೇಶಗಳಲ್ಲಿಯೂ ತುಂಬಾನೇ ಫೇಮಸ್ ಆಗ್ತಾ ಇವೆ. ದೋಸೆ, ಸಮೋಸಾ, ರೊಟ್ಟಿ, ಹಪ್ಪಳ, ಪಾಯಸಗಳನ್ನು ವಿದೇಶಿಗರು ಸಹ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಹೀಗಾಗಿಯೇ ವಿದೇಶಕ್ಕೆ ಹೋಗೋ ಭಾರತೀಯರು ಅಲ್ಲಿ ಇಂಡಿಯನ್ ರೆಸ್ಟೋರೆಂಟ್ಗಳಿಗಾಗಿ ಹುಡುಕಾಡ್ತಾರೆ. ಆದರೆ ವಿದೇಶಗಳಲ್ಲಿ ಈ ಫುಡ್ ಗಳಿಗೆ ಸ್ವಲ್ಪ ಹೆಚ್ಚಿಗೆಯೇ ಹಣವಿರುತ್ತದೆ. ಆದರೆ ಇಲ್ಲೊಂದು ದೇಶದಲ್ಲಿ ಭಾರತದ ಈ ತಿಂಡಿಯ ಬೆಲೆಯನ್ನು ನೀವು ಕೇಳೀದ್ರೆ ನಂಬೋದೋ ಬಿಡೋದೋ ಗೊತ್ತಾಗಲ್ಲ. ತಲೆ ತಿರುಗೋದು ಗ್ಯಾರೆಂಟಿ. ಹಾಗಾದ್ರೆ ಯಾವುದೀ ಆಹಾರ ಪದಾರ್ಥ? ಎಷ್ಟು ರೇಟ್ ಇರಬಹುದು ಅದಕ್ಕೆ? ಯಾವ ದೇಶದಲ್ಲಿ ಸಿಗುತ್ತೆ ಅಂತ ಯೋಚಿಸ್ತಿದೀರಾ?
ಮದುವೆ ಅಥವಾ ಸಮಾರಂಭಗಳಲ್ಲಿ ಊಟಕ್ಕೆ ಹಪ್ಪಳ ಇದ್ದರೇನೆ ಒಂದು ರುಚಿ. ಒಂದು ಹಪ್ಪಳ ಹಾಕಿದರೂ ಇನ್ನೊಂದು ಹಪ್ಪಳ ಹಾಕಿ ಎಂದು ಕೇಳಿ ಬಡಿಸಿಕೊಳ್ತೇವೆ. ಈ ಹಪ್ಪಳದ ಒಂದು ಪ್ಯಾಕಿಗೆ ಹೆಚ್ಚೆಂದರೆ 50 ರಿಂದ 100ರೂಪಾಯಿ ಇರಬಹುದು. ಅಷ್ಟೇ ಹಪ್ಪಳಗಳೂ ನಮಗೆ ಆ ಪ್ಯಾಕಿನಲ್ಲಿ ಸಿಗುತ್ತವೆ. ಸಂಜೆ ಹೊತ್ತು ಸಿಹಿ, ಹುಳಿಯನ್ನು ಈ ಹಪ್ಪಳಕ್ಕೆ ಸೇರಿಸಿ, ಮಸಾಲೆ ಹಾಕಿ ಪಾಪಡ್ ಎಂದೂ ಮಾರುತ್ತಾರೆ. ಇದನ್ನು ತಿನ್ನೋಕೆ ಇನ್ನೂ ಚಂದ. ಆದ್ರೆ ಇದೀಗ ವೈರಲ್ ಆಗುತ್ತಿರುವ ಈ ಪೋಸ್ಟ್ ನೋಡಿ. ಮಲೇಷಿಯಾದ ರೆಸ್ಟೋರೆಂಟ್ ನಮ್ಮ ಹಪ್ಪಳವನ್ನು ‘ಏಷ್ಯನ್ ನಾಚೋಸ್’ ಎಂದು ಮಾರುತ್ತಿದೆ. ಒಂದು ಏಷ್ಯನ್ ನಾಚೋಸ್ ಬೆಲೆ 25 ಮಲೇಷಿಯನ್ ರಿಂಗಿಟ್ಗಳು. ಅಂದರೆ ನಮ್ಮ ಲೆಕ್ಕದಲ್ಲಿ 500 ರೂಪಾಯಿಗಳು!!
ಹೌದು, ಭಾರತೀಯರ ನೆಚ್ಚಿನ ಹಪ್ಪಳ ಮಲೇಷಿಯನ್ ರೆಸ್ಟೋರೆಂಟ್ನಲ್ಲಿ ಏಷಿಯನ್ ನಾಚೋಸ್ ಎಂದು ಕರೆಯಲ್ಪಡುತ್ತಿದೆ. ಇದರ ಬೆಲೆ ಭರ್ತಿ 500 ರೂ. ಸಮಂತಾ ಎಂಬುವವರು ತಮ್ಮ ಟ್ವಿಟರ್ ಅಲ್ಲಿ ಈ ಪಾಪಡ್ನ ಫೋಟೋವನ್ನು ‘ಘೋರ ಅಪರಾಧ ನಡೆದಿದೆ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ಭಾರತದ ಹಪ್ಪಳವನ್ನು (Papad) ಏಷ್ಯನ್ ನ್ಯಾಚೋಸ್ ಎಂದು ಮಾರಾಟ ಮಾಡಿದ ಹೊಟೇಲ್ನ್ನು ‘ಸ್ನಿಚ್ ಬೈ ದಿ ಥೀವ್ಸ್’ ಎಂದು ಗುರುತಿಸಲಾಗಿದ್ದು. ಅಂದರೆ ಸರಿಸುಮಾರು ಇದರ ಬೆಲೆ ಕೇಳಿ ದೇಸಿಗಳು ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ.
ಈ ಪೋಸ್ಟ್ ಅನ್ನು 5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ಧಾರೆ. 9,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಭಾರತೀಯ ಹಪ್ಪಳಕ್ಕೆ ಯಾಕಿಷ್ಟು ಬೆಲೆ (Price) ಎಂದಿದ್ದಾರೆ. ಇನ್ನು ಕೆಲವರು ಮೆಣಸು ಹಾಕಿದ ಹೆಸರುಬೇಳೆ ಹಪ್ಪಳವನ್ನು ಅವರು ಬ್ಲ್ಯಾಕ್ ಸ್ಪಾಟೆಡ್ ನಾಚೋಸ್ ಎಂದು ಕರೆದರೂ ಅಚ್ಚರಿ ಏನಿಲ್ಲ ಎಂದು ತಮಾಷೆ ಮಾಡಿದ್ದಾರೆ.
ಇದೀಗ ತರತರಹದ ಕಮೆಂಟ್ ಗಳು ಬಂದಿದ್ದು ‘ನಾನಿಲ್ಲಿ ಎರಡು ರೂಪಾಯಿಗೆ ಮಸಾಲಾಪುಡಿ ಹಾಕಿದ ಹಪ್ಪಳ ತಿಂದು ಸಂತೃಪ್ತನಾಗಿದ್ದೇನೆ’ ಎಂದು ಒಬ್ಬರು ಹೇಳಿದ್ದಾರೆ. ‘ಮೆಕ್ಸಿಕನ್ನರು, ಭಾರತೀಯರು ಇದನ್ನು ನೋಡಿ ಸಾಕಷ್ಟು ಬೇಸರ ಮಾಡಿಕೊಂಡರೆ ಅಚ್ಚರಿ ಏನಿಲ್ಲ ಬಿಡಿ’ ಎಂದಿದ್ದಾರೆ ಮತ್ತೊಬ್ಬರು. ‘ಇದನ್ನು ನೋಡಿ ನಾವು ಮನೆಯಲ್ಲಿ ಹಪ್ಪಳವನ್ನು ನಾಚೋಸ್ ಎನ್ನಲು ಶುರು ಮಾಡಿದ್ದೇವೆ. ನನ್ನ ತಾಯಿಯೂ ಹಾಂ ತಗೋ ನಾಚೋಸ್ ಎನ್ನಲು ಕಲಿತಿದ್ದಾರೆ’ ಎಂದು ತಮಾಷೆ ಮಾಡಿದ್ದಾರೆ ಮಗದೊಬ್ಬರು.