ವ್ಯಾಲಂಟೈನ್ ದಿನ ಬಾಯ್ ಫ್ರೆಂಡ್ ಜೊತೆ ಬರದಿದ್ರೆ ಕ್ಲಾಸಿಗೆ ನೋ ಎಂಟ್ರಿ | ಪ್ರೇಮಿಗಳ ದಿನಕ್ಕೆ ಆಫರ್ ಕೊಡ್ತು ಈ ಕಾಲೇಜು !
ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಆದರೆ ಫೆಬ್ರವರಿ ತಿಂಗಳು ಬಂತೆಂದರೆ ಸಾಕು ಪ್ರೇಮಿಗಳಲ್ಲಿ ಅದೇನೋ ಸಂಚಲನ. ಜೊತೆಗೆ ಆ ಸಂಭ್ರಮ ಒಂದು ವಾರಗಳ ಮುನ್ನವೇ ಶುರುವಾಗುತ್ತದೆ. ಕಾಲೇಜು ಹುಡುಗ, ಹುಡುಗಿಯರಲ್ಲಂತೂ ಈ ಸಂಭ್ರಮ ಇನ್ನೂ ಸದ್ದುಮಾಡುತ್ತದೆ. ಯಾಕೆಂದ್ರೆ ಎಲ್ಲರೂ ಒಟ್ಟಿಗೇ ಇರೋದ್ರಿಂದ ಸೆಲಬ್ರೇಷನ್ ಸ್ವಲ್ಪ ಜೋರಾಗೇ ಇರುತ್ತದೆ. ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೇಮಿಗಳ ದಿನ ಆಚರಿಸಲು ಎಲ್ಲೂ ಅವಕಾಶವಿಲ್ಲ. ಇದೀಗ ಇದಕ್ಕೆ ವಿರುದ್ಧ ಎಂಬಂತೆ ಕಾಲೇಜೊಂದು ಪ್ರೇಮಿಗಳ ದಿನ, ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ತಮ್ಮ ತಮ್ಮ ಬಾಯ್‌ಫ್ರೆಂಡ್ ಜೊತೆ ಕಾಲೇಜಿಗೆ ಬರಬೇಕೆಂದು ನೋಟೀಸ್ ಹೊರಡಿಸಿ ಸಾಕಷ್ಟು ಸುದ್ದಿಯಾಗುತ್ತಿದೆ!
ಒಡಿಶಾದ ಎಸ್‍ವಿಎಂ ಎಂಬ ಕಾಲೇಜು ಪ್ರೇಮಿಗಳ ದಿನದಂದು ಕಾಲೇಜಿನ ವಿದ್ಯಾರ್ಥಿನಿಯರು ಕನಿಷ್ಠ ಒಬ್ಬ ಬಾಯ್‌ಫ್ರೆಂಡ್ ಜೊತೆ ಬರದಿದ್ದರೆ ಕಾಲೇಜಿಗೆ ಪ್ರವೇಶವಿಲ್ಲ ಎಂದು ನೋಟೀಸ್ ಒಂದನ್ನು ಕಳುಹಿಸಿದೆ. ಈ ಸುದ್ದಿಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನೊಟೀಸ್ ನೋಡಿ ಪೋಷಕರು ದಂಗಾಗಿದ್ದಾರೆ. ಅರೇ! ಕಾಲೇಜೊಂದು ಹೀಗೆ ಮಾಡುತ್ತಾ ಅನ್ನಿಸ್ತಿದಿಯಾ? ಇಲ್ಲಿದೆ ನೋಡಿ ಅಸಲಿ ಸತ್ಯ. ಹೌದು ನೋಟಿಸ್ ಅನ್ನು ಸರಿಯಾಗಿ ಪರಿಶೀಲಿಸಿದಾಗ ನಿಜಾಂಶ ಹೊರಬಿದ್ದಿದೆ. ಬಹುಶಃ ಇದರ ಬೆನ್ನಲ್ಲೇ ನೋಟಿಸ್ ನೋಡಿ ಹೆದರಿದ್ದ ಹುಡುಗಿಯರಿಗೂ ಸಮಧಾನ ಆಗಿರಬಹುದೇನೋ!!
ಯಾಕಂದ್ರೆ ಇದರ ಕುರಿತು ಸ್ಪಷ್ಟೀಕರಣ ನೀಡಿದ ಸಂಸ್ಥೆ, ಕಾಲೇಜು ಈ ರೀತಿ ನೋಟೀಸ್ ಕಳುಹಿಸಿಲ್ಲ. ಇದು ಕಿಡಿಗೇಡಿ ವಿದ್ಯಾರ್ಥಿಗಳ ಕಿತಾಪತಿ ಎಂಬುದನ್ನು ಸಾಬೀತು ಪಡಿಸಿದೆ. ನಂತರ ಇದೊಂದು ಕಾಲೇಜಿನ ಹೆಸರಿನಲ್ಲಿ ಕಳುಹಿಸಲಾಗಿರುವ ನಕಲಿ ನೊಟೀಸ್ ಎಂಬುದು ಗೊತ್ತಾಗಿದೆ. ಇದರಿಂದ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ. ಇನ್ನೂ ವಿಚಿತ್ರ ಎಂದರೆ ಈ ನೊಟೀಸ್‌ನಲ್ಲಿ ಕಾಲೇಜಿನ ಪ್ರಾಂಶುಪಾಲರ ಸಹಿ ಕೂಡ ಇದೆ. ಆದರೆ ಇದು ಕೂಡ ನಕಲಿ ಎಂಬುದು ಗೊತ್ತಾಗಿದೆ.
ಕಾಲೇಜಿನ ವಿದ್ಯಾರ್ಥಿನಿಯರೆಲ್ಲಾ ಕನಿಷ್ಠ ಪ್ರೇಮಿಗಳ ದಿನದಂದು ಒಬ್ಬ ಬಾಯ್‌ಫ್ರೆಂಡ್ ಜೊತೆ ಕಾಲೇಜಿಗೆ ಬರಬೇಕು. ಬಾಯ್‌ಫ್ರೆಂಡ್ ಜೊತೆ ಬರುವ ವಿದ್ಯಾರ್ಥಿನಿಯರನ್ನು ಮಾತ್ರ ಕಾಲೇಜಿನ ಒಳಗೆ ಬಿಡಲಾಗುವುದು. ಇದನ್ನು ಭದ್ರತಾ ಉದ್ದೇಶಕ್ಕಾಗಿ ಮಾಡಲಾಗುತ್ತಿದೆ, ಒಂಟಿಯಾಗಿ ಬಂದ ಹುಡುಗಿಯರಿಗೆ ಕಾಲೇಜು ಆವರಣಕ್ಕೆ ಪ್ರವೇಶ ನೀಡುವುದಿಲ್ಲ. ಜೊತೆಗೆ ಖಚಿತಪಡಿಸಲು ಹುಡುಗಿಯು ತಮ್ಮ ಗೆಳೆಯನ ಜೊತೆಗಿರುವ ಫೋಟೋವನ್ನು ತೋರಿಸಬೇಕು ಎಂದು ನಕಲಿ ನೋಟಿಸ್‍ನಲ್ಲಿ ಇದೆ. ಸದ್ಯ ಈ ನೋಟಿಸ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ರಸವತ್ತಾದಾ ಕಮೆಂಟ್ ಗಳೂ ಬರುತ್ತಿವೆ. ಕಾಲೇಜು ಪ್ರಿನ್ಸಿಪಾಲ್ ಸಹಿ ಜೊತೆ ಬಂದ ಈ ನಕಲಿ ನೊಟೀಸ್ ನೋಡಿ ಕಾಲೇಜಿನ ವಿದ್ಯಾರ್ಥಿನಿಯರು ಮಾತ್ರವಲ್ಲದೇ ಪೋಷಕರು ಕೂಡ ಶಾಕ್ ಆಗಿದ್ದಂತೂ ಸತ್ಯ.
ನೋಟಿಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಭಯ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಮಾತನಾಡಿ, ಈ ನೋಟಿಸ್ ನಕಲಿಯಾಗಿದ್ದು, ತಮ್ಮ ವರ್ಚಸ್ಸಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಕಿಡಿಗೇಡಿಗಳು ಈ ರೀತಿಯ ನೋಟಿಸ್‍ನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದರು. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.