ಟೆಕ್ ಕಂಪೆನಿಗಳಲ್ಲಿ ಶುರುವಾಯ್ತು ಉದ್ಯೋಗಿಗಳ ವಜಾ ಪರ್ವ! ಕಾರಣವೇನು ಗೊತ್ತಾ?
ಇತ್ತೀಚೆಗಂತೂ ಹಲವು ಟೆಕ್ ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡುವುದರೊಂದಿಗೆ ಸಾಕಷ್ಟು ಸುದ್ಧಿಯಲ್ಲಿವೆ. ಗೂಗಲ್ ಆಲ್ಫಾಬೆಟ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್ ನಂತಹ ದೊಡ್ಡ ಕಂಪನಿಗಳು ಕೂಡ ಸುಮಾರು 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಘೋಷಿಸಿವೆ. ಆರ್ಥಿಕ ಹಿಂಜರಿತ ಸದ್ಯ ಐಟಿ ಕಂಪನಿಗಳ ಉದ್ಯೋಗಿಗಳಿಗೆ ದೊಡ್ಡ ಹೊಡೆತ ನೀಡಿದೆ. ಪ್ರಪಂಚದಾದ್ಯಂತದ ಅನೇಕ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡುತ್ತಿವೆ.
ಪ್ರತಿ ದಿನ ಒಂದಲ್ಲ ಒಂದು ಕಂಪನಿ ತನ್ನ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಕೈಗೊಳ್ಳುತ್ತಿದೆ. ಕೆಲ ಕಂಪನಿಗಳು ಉದ್ಯೋಗಿಗಳಿಗೆ ಹಿಂಬಡ್ತಿ ನೀಡಿವೆ. ಮಾಹಿತಿ ಒಂದರ ಪ್ರಕಾರ ಭಾರತದಲ್ಲಿ ಮತ್ತು ಜಾಗತಿಕವಾಗಿ ಪ್ರತಿದಿನ 3000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದು ಚಿಂತಿಸುವ ವಿಷ್ಯವಾಗಿದೆ. ಮುಂದಿನ ದಿನಗಳಲ್ಲಿ ಇದ್ರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪ್ರಮುಖ ಟೆಕ್ ಕಂಪನಿಗಳು ಇನ್ನಷ್ಟು ಉದ್ಯೋಗಿಗಳನ್ನು ವಜಾಗೊಳಸುವ ಸಂಭವ ಹೆಚ್ಚಿದೆ.
ಜನವರಿ (January) 2023 ರಿಂದ ಇಲ್ಲಿಯವರೆಗೆ 166 ಟೆಕ್ (Tech ) ಕಂಪನಿಗಳು 65,000 ಕ್ಕೂ ಹೆಚ್ಚು ಉದ್ಯೋಗಿ (employee) ಗಳನ್ನು ವಜಾಗೊಳಿಸಿವೆ. ಮೈಕ್ರೋಸಾಫ್ಟ್ (Microsoft) ನ 10,000 ಉದ್ಯೋಗಿಗಳನ್ನು ತೆಗೆದುಹಾಕುವ ಮೊದಲು ಅಮೆಜಾನ್ 1000 ಭಾರತೀಯ ಉದ್ಯೋಗಿಗಳನ್ನು ಒಳಗೊಂಡಂತೆ ಜಾಗತಿಕವಾಗಿ ಒಟ್ಟು 18000 ಉದ್ಯೋಗಿಗಳನ್ನು ವಜಾಗೊಳಿಸಿದೆ ಅಂದ್ರೆ ನಂಬಲಾರದ ವಿಚಾರ.
ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಲು ಕಾರಣ ಹಾಗೂ ಯಾರಿಗೆ ಹೆಚ್ಚು ಅಪಾಯ ಎಂಬುದನ್ನು ನಾವು ನೋಡೋದಾದ್ರೆ, ಮೊದಲನೇಯದಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಿಗೆ ತೊಂದರೆ ಹೆಚ್ಚು ಎನ್ನಲಾಗಿದೆ. ಆರ್ಥಿಕ ವಿಶ್ಲೇಷಕರ ಪ್ರಕಾರ, ಕಂಪನಿಗಳು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತದೆ. ಈಗ ಟೆಕ್ ಕಂಪನಿಗಳ ಆರ್ಥಿಕ ಸ್ಥಿತಿ ಹದಗೆಡುತ್ತಿದೆ. ಹಾಗಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡ ಉದ್ಯೋಗಿಗಳನ್ನು ಟೆಕ್ ಕಂಪನಿ ಕೈ ಬಿಡ್ತಿದೆ.
ಐಟಿ ಕ್ಷೇತ್ರದ ದೈತ್ಯ ವಿಪ್ರೋ ಇತ್ತೀಚೆಗೆ 400 ಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದೆ. ಫುಡ್ ಡೆಲಿವರಿ ಆಪ್ ಸ್ವಿಗ್ಗಿ 380 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮೆಡಿಬಡ್ಡಿ ಡಿಜಿಟಲ್ ಹೆಲ್ತ್ ಕೇರ್ ಕಂಪನಿಯು ತನ್ನ ಒಟ್ಟು ಕಾರ್ಯಕ್ಷೇತ್ರದ ಉದ್ಯೋಗಿಗಳಲ್ಲಿ 200 ಜನರನ್ನು ವಜಾಗೊಳಿಸಿದೆ. ಓಲಾ 200 ಉದ್ಯೋಗಿಗಳನ್ನು, ಡಂಜೊ ಒಟ್ಟು ಉದ್ಯೋಗಿಗಳಲ್ಲಿ ಶೇಕಡಾ 3ರಷ್ಟು ಜನರನ್ನು ಮತ್ತು ಸೋಫೋಸ್ 450 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಆದರೆ ಕಂಪೆನಿಗಳು ಯಾಕೆ ಈ ರೀತಿ ಉದ್ಯೋಗಿಗಳನ್ನು ತೆಗೆಯುವ ಪರ್ವ ನಡೆಸುತ್ತಿವೆ ಎಂದು ನೋಡುವುದಾದರೆ
ಕೊರೊನಾ ಸಂದರ್ಭದಲ್ಲಿ ಹೆಚ್ಚಿನ ಉದ್ಯೋಗಿಗಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಇದ್ರಿಂದ ಕೆಲಸಕ್ಕೆ ತೊಂದರೆಯಾಗ್ತಿತ್ತು. ಕೆಲಸಕ್ಕೆ ಯಾವುದೇ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಅನೇಕ ಕಂಪನಿಗಳು ಹೆಚ್ಚುವರಿ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದವು. ಇದಾದ್ಮೇಲೆ ಲಾಕ್ ಡೌನ್ ಘೋಷಣೆಯಾಯ್ತು. ಲಾಕ್ ಡೌನ್ ವೇಳೆ ಜನರು ಮನೆಯಿಂದಲೇ ಕೆಲಸ ಶುರು ಮಾಡಿದ್ದರು. ಆ ವೇಳೆ ಡಿಜಿಟಲ್ ಮಾರ್ಕೆಟಿಂಗ್ ಹೆಚ್ಚಾಯ್ತು. ಅದ್ರ ಕೆಲಸಕ್ಕಾಗಿ ಅನೇಕ ಕಂಪನಿಗಳು ಅಗತ್ಯಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಂಡವು.
ಆದ್ರೀಗ ಪರಿಸ್ಥಿತಿ ಬದಲಾಗಿದೆ. ಮಾರುಕಟ್ಟೆ ಕುಸಿಯುತ್ತಿದೆ. ಉದ್ಯೋಗಿಗಳು ಕಂಪನಿಗೆ ಹೊಣೆಯಾಗ್ತಿದ್ದಾರೆ. ಸಮತೋಲನ ಕಾಯ್ದುಕೊಳ್ಳಲು ಕಂಪನಿಗಳು ಹೆಚ್ಚುವರಿ ಉದ್ಯೋಗಿಗಳನ್ನು ವಜಾ ಮಾಡ್ತಿವೆ. ಜೊತೆಗೆ ಜಾಗತಿಕ ಆರ್ಥಿಕ ಹಿಂಜರಿತ ಹಿಂಬಡ್ತಿಗೆ ದೊಡ್ಡ ಕಾರಣ ಎಂದು ಪರಿಗಣಿಸಲಾಗಿದೆ. ಕೊರೊನಾ ಮಹಾಮಾರಿ ವಿಶ್ವದ ಆರ್ಥಿಕತೆಯನ್ನು ನಾಶ ಮಾಡಿತ್ತು. ಈಗ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಮತ್ತೆ ಏರಿಳಿತವಾಗ್ತಿದೆ. ಈ ಯುದ್ಧ ಚೀನಾ, ಬ್ರಿಟನ್, ಅಮೆರಿಕ, ಭಾರತ ಮತ್ತು ಜಪಾನ್‌ನ ಮೇಲೂ ಹೆಚ್ಚಿನ ಪ್ರಭಾವ ಬೀರಿದೆ ಎನ್ನುತ್ತಾರೆ ತಜ್ಞರು.