ಕರಾವಳಿ ಕರ್ನಾಟಕದ ಜನತೆಗೆ ಗುಡ್ ನ್ಯೂಸ್! ಕಾಂಗ್ರೆಸ್ ಪಾರ್ಟಿ, ನಿಮಗಾಗಿ ಬಿಡುಗಡೆ ಮಾಡಲಿದೆ ಪ್ರತ್ಯೇಕ ಪ್ರಣಾಳಿಕೆ!
ಕಳೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಇಲ್ಲದೆ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಇದೀಗ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಶತಾಯಗತಾಯವಾಗಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಹೊದಲ್ಲಿ ಬಂದಲ್ಲಿ ಮತದಾರರನ್ನು ಸೆಳೆಯಲು ವಿವಿಧ ಆಫರ್ಗಳನ್ನು ಘೋಷಿಸುತ್ತಿದ್ದಾರೆ. ಉಚಿತ ವಿದ್ಯುತ್, ಉಚಿತ ಅಕ್ಕಿ, ಮಹಿಳೆಯರಿಗೆ ಪ್ರತ್ಯೇಕ ಬಜೆಟ್ ಆಯ್ತು, ಇದೀಗ ಕರಾವಳಿ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡುವತ್ತ ದೃಷ್ಟಿ ಹರಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದರೆ, ಸಿದ್ದರಾಮಯ್ಯ ಅವರು 10 ಕೆಜಿ ಉಚಿತ ಅಕ್ಕಿಯ ಆಫರ್ ನೀಡಿದ್ದಾರೆ. ನಾ ನಾಯಕಿ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬಜೆಟ್ ಬಗ್ಗೆ ಘೋಷಣೆ ಮಾಡಲಾಗಿದೆ. ಇದೀಗ ಕೋಮು ಸಂಘರ್ಷದಿಂದಲೇ ಅಪಕೀರ್ತಿಗೆ ಒಳಗಾಗಿರುವ ಕರಾವಳಿ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಡಾ.ಜಿ.ಪರಮೇಶ್ವರ ಘೋಷಣೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು. ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕರಾವಳಿ ಕರ್ನಾಟಕಕ್ಕೆ ವಿಶೇಷವಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್ ಪ್ರಾಣಾಳಿಕ ಸಮಿತಿಯು ಕರಾವಳಿ ಭಾಗದ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದೆ. ಬಿಜೆಪಿ ಕರಾವಳಿ ಜಿಲ್ಲೆಗಳಲ್ಲಿ ಸಾಮರಸ್ಯ ಹಾಳು ಮಾಡಿದೆ. ಕೋಮು ಸೌಹಾರ್ದತೆಯನ್ನು ನಾಶ ಮಾಡಿದೆ. ಆದರೆ ಇವೆಲ್ಲವನ್ನು ನಾವು ಮತ್ತೆ ಸ್ಥಾಪಿಸುತ್ತೇವೆ. ಜೊತೆಗೆ ನಮ್ಮ ಪ್ರಣಾಳಿಕೆಯಲ್ಲಿ ಇರಲಿದೆ ಎಂದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರ ವಿದ್ಯಾರ್ಥಿ ವೇತನವನ್ನೂ ನಿಲ್ಲಿಸಿದೆ. ಪಿಡಬ್ಲ್ಯುಡಿ ಇಲಾಖೆಯ 6.5 ಸಾವಿರ ಕೋಟಿ ಹಣ ಬಿಡುಗಡೆ ಆಗಿಲ್ಲ . ಎಸ್ ಸಿ ಮತ್ತು ಎಸ್ ಟಿ ಮೀಸಲಿಟ್ಟ ಹಣವನ್ನ ಬೇರೆ ಕಡೆ ಖರ್ಚು ಮಾಡಿದ್ದಾರೆ. ಇದೆಲ್ಲವನ್ನೂ ತಿಳಿಸಲು ಪ್ರಜಾಧ್ವನಿ ಆಯೋಜನೆ ಮಾಡಿದ್ದೇವೆ. ನಾಳೆ ಉಡುಪಿ ಮಂಗಳೂರಿನಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಯಲಿದೆ ಎಂದು ಜಿ.ಪರಮೇಶ್ವರ್ ಹೇಳಿದರು.