ಪ್ರಧಾನಿ ಮೋದಿ ವಿರುದ್ಧದ ಬಿಬಿಸಿ ಸಾಕ್ಷ್ಯ ಚಿತ್ರಕ್ಕೆ ಗಣ್ಯಮಾನ್ಯರಿಂದ ಭಾರೀ ವಿರೋಧ! 302 ದಿಗ್ಗಜರಿಂದ ಬಿಬಿಸಿಗೆ ಪತ್ರ! ಅಷ್ಟಕ್ಕೂ ಏನಿದೆ ಆ ಡಾಕ್ಯುಮೆಂಟರಿಯಲ್ಲಿ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಬಿಬಿಸಿ ಸುದ್ದಿಸಂಸ್ಥೆ, ಬ್ರಿಟನ್ ಸರ್ಕಾರ ಸ್ಥಾಪಿಸಿದ ಸಂಸ್ಥೆ. ಈ ಸಂಸ್ಥೆ ಬ್ರಿಟನ್ ಸರ್ಕಾರಕ್ಕೇ ಬಿಸಿ ಮುಟ್ಟಿಸಿದ ಉದಾಹರಣೆಯೂ ಇದೆ. ಇದೀಗ ಬಿಬಿಸಿ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವರ ಕುರಿತಾಗಿ ಒಂದು ಡಾಕ್ಯುಮೆಂಟರಿ ಮಾಡಿದ್ದು, ಬಿಬಿಸಿ ವಾಹಿನಿ ಪ್ರಸಾರ ಮಾಡಿದ ಈ ಸಾಕ್ಷ್ಯ ಚಿತ್ರಕ್ಕೆ ಭಾರತ ಸೇರಿದಂತೆ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ. ಇದೀಗ ನಿವೃತ್ತ ಜಡ್ಜ್, ಸರ್ಕಾರಿ ಅಧಿಕಾರಿಗಳು, ರಾಯಭಾರಿಗಳು, ನಿವೃತ್ತ ಸೇನಾಧಿಕಾರಿಗಳು ಸಹಿ ಹಾಕಿ ಬಿಬಿಸಿಗೆ ಪತ್ರ ಬರೆದಿದ್ದಾರೆ.

ಹೌದು, ಪ್ರಧಾನಿ ಮೋದಿ ಅವರ ಕುರಿತಾದ ಅಪಪ್ರಚಾರವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಅದೂ ಕೂಡಾ ವಿಶ್ವ ಪ್ರಸಿದ್ದ ಮಾಧ್ಯಮ ಸಂಸ್ಥೆ ಬಿಬಿಸಿ ಮೂಲಕ! ಬಿಬಿಸಿ ಮೋದಿ ವಿರುದ್ಧ ನಿರ್ಮಾಣ ಮಾಡಿರುವ India the modi question ಎಂಬ ಡಾಕ್ಯುಮೆಂಟರಿ, ಇದೀಗ ಭಾರೀ ಸುದ್ದಿಯಲ್ಲಿದೆ. ಈ ಡಾಕ್ಯುಮೆಂಟರಿಯಲ್ಲಿ ಪ್ರಧಾನಿ ಮೋದಿ ಅವರ ಅವಹೇಳನ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇದರಲ್ಲಿ ಗೋದ್ರಾ ಗಲಭೆ, ಆರ್ಟಿಕಲ್ 370 ಸೇರಿದಂತೆ ಹಲವು ವಿವಾದಾತ್ಮಕ ಸಂಗತಿಗಳನ್ನು ಪ್ರಸ್ತಾಪ ಮಾಡಿದೆಯಂತೆ.

ಇದರ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ ಈ ಡಾಕ್ಯುಮೆಂಟರಿಯನ್ನ ನಿರ್ಮಾಣ ಮಾಡಿದ ಬಿಬಿಸಿ ಸಂಸ್ಥೆ, ತನ್ನ ನೀತಿಯನ್ನ ಈ ಸಾಕ್ಷ್ಯಚಿತ್ರದಲ್ಲಿ ಬಿಂಬಿಸಿದೆ. ಇದು ಕೇವಲ ಪ್ರಧಾನಿ ಮೋದಿ ಅವರ ಬಗ್ಗೆ ಅಪಪ್ರಚಾರ ಮಾಡೋದಕ್ಕಾಗಿ ನಿರ್ಮಿಸಿದ ಡಾಕ್ಯುಮೆಂಟರಿ. ಈ ಡಾಕ್ಯುಮೆಂಟರಿ ಪಕ್ಷಪಾತದ ನಿಲುವನ್ನ ಹೊಂದಿದೆ. ವಸ್ತು ನಿಷ್ಟತೆ ಇಲ್ಲ. ಎಲ್ಲಕ್ಕಿಂತಾ ಹೆಚ್ಚಾಗಿ ವಸಾಹತುಶಾಹಿ ನೀತಿಯ ಮನಸ್ಥಿತಿಯನ್ನ ಈ ಡಾಕ್ಯುಮೆಂಟರಿ ಬಿಂಬಿಸುತ್ತಿದೆ ಎಂದು ಹೇಳಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆಗಳಿಗೆ ಸಂಬಂಧಿಸಿ ‘ಬಿಬಿಸಿ’ ನಿರ್ಮಿಸಿರುವ ಸಾಕ್ಷ್ಯಚಿತ್ರಕ್ಕೆ ಇದೀಗ ನಿವೃತ್ತ ಜಡ್ಜ್​ಗಳು, ರಾಯಭಾರಿಗಳು, ಮಾಜಿ ಸೇನಾಧಿಕಾರಿಗಳು ಹಾಗೂ ಗಣ್ಯರ ವಲಯದಿಂದಲೂ ಭಾರೀ ವಿರೋಧ ವ್ಯಕ್ತವಾಗಿದೆ. ಸಾಕ್ಷ್ಯಚಿತ್ರವನ್ನು ಆಕ್ಷೇಪಿಸಿ ಸುಮಾರು 302 ಮಂದಿ ಗಣ್ಯರು ತಮ್ಮ ಸಹಿಯುಳ್ಳ ಪತ್ರ ಬಿಡುಗಡೆ ಮಾಡಿದ್ದು, ‘ಬಿಬಿಸಿ’ಯ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೋದಿ ಕುರಿತ ಸಾಕ್ಷ್ಯಚಿತ್ರವು ಬ್ರಿಟಿಷ್ ವಸಾಹತುಶಾಹಿ ಪುನರುತ್ಥಾನದ ಭ್ರಮೆಗಳಿಂದ ಕೂಡಿದೆ ಎಂದು ಅವರು ಟೀಕಿಸಿದ್ದಾರೆ.

ಮತ್ತೊಮ್ಮೆ ಬಿಬಿಸಿಯು ಬಣ್ಣ ಬಣ್ಣದ ಋಣಾತ್ಮಕತೆಯನ್ನು ಬಿತ್ತಲು ಹೊರಟಿದೆ. ಭಾರತದ ಬಗ್ಗೆ ಅದಕ್ಕಿರುವ ತಪ್ಪುಕಲ್ಪನೆಗಳು ಸಾಕ್ಷ್ಯಚಿತ್ರದ ರೂಪದಲ್ಲಿ ಹೊರಹೊಮ್ಮಿದೆ. ಬ್ರಿಟಿಷ್ ವಸಾಹತುಶಾಹಿಯು ಒಡೆದು ಆಳುವ ನೀತಿಯನ್ನು ಅನುಸರಿಸಿತ್ತು. ಇದೀಗ ಮತ್ತೆ ಬ್ರಿಟಿಷ್ ರಾಜ್ ಸ್ಥಾಪಿಸಲು ಮುಂದಾಗಿದೆ. ಹಿಂದೂ-ಮುಸ್ಲಿಮರನ್ನು ವಿಭಜಿಸುವ ಮೂಲಕ ಬ್ರಿಟಿಷ್ ರಾಜ್ ನೀತಿ ಅನುಸರಿಸಲು ಮುಂದಾಗಿದೆ ಎಂದು ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಬಿಸಿ ವಾಸ್ತವತೆಯನ್ನು ತೋರಿಸಿಲ್ಲ. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪು ಇದೆ. ಸುಪ್ರೀಂ ಕೋರ್ಟ್ ಈ ಕುರಿತು ಸುದೀರ್ಘ ವಿಚಾರಣೆ ನಡೆಸಿ ಮೋದಿಗೆ ಕ್ಲೀನ್ ಚಿಟ್ ನೀಡಿದೆ. ಆದರೆ ಮೋದಿ ವಿರೋಧಿಗಳ ಹೇಳಿಕೆಯನ್ನೇ ಸಾಕ್ಷ್ಯವಾಗಿ ಪರಿಗಣಿಸಿ ಈ ಸಾಕ್ಷ್ಯ ಚಿತ್ರ ತಯಾರಿಸಲಾಗಿದೆ. ಬ್ರಿಟಿಷರ ಒಡೆದು ಒಳುವ ನೀತಿಯನ್ನು ಈ ಹಿಂದೆ ಭಾರತದಲ್ಲಿ ಮಾಡಲಾಗಿತ್ತು. ಇದೀಗ ಬಿಬಿಸಿ ಮೂಲಕ ಬ್ರಿಟಿಷರು ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಪ್ರಧಾನಿ ಮೋದಿ ಬಗ್ಗೆ ಬಿಬಿಸಿ ಮಾಡಿರೋ ಈ ಡಾಕ್ಯುಮೆಂಟರಿ, ಬ್ರಿಟನ್ ದೇಶದಲ್ಲೇ ಆಕ್ರೋಶದ ಅಲೆ ಎಬ್ಬಿಸಿದೆ. ಪ್ರಜಾಪ್ರಭುತ್ವ ಇರುವ ಭಾರತ ದೇಶದಲ್ಲಿ ಪ್ರಜೆಗಳಿಂದಲೇ ಆಯ್ಕೆಯಾದ ಒಬ್ಬ ವ್ಯಕ್ತಿ ಬಗ್ಗೆ ಅವಹೇಳನ ಮಾಡೋದು ಸರಿಯಲ್ಲ ಅಂತಾ ಬ್ರಿಟನ್ನ ಸಂಸದ ಲಾರ್ಡ್ ರೆಮಿ ರೇಂಜರ್ ಸಿಟ್ಟಾಗಿದ್ದಾರೆ. ಬಿಬಿಸಿ ಪಕ್ಷಪಾತಿ ವರದಿಗಾರಿಕೆ ಮಾಡ್ತಿದೆ ಅಂತಾ ಚಾಟಿ ಬೀಸಿದ್ದಾರೆ. ಭಾರತದ ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡ್ತಿದ್ದೀರಿ, ಕೋಟ್ಯಂತರ ಭಾರತೀಯರಿಗೆ ಬೇಸರ ಮೂಡಿಸಿದ್ದೀರಿ ಎಂದು ಲಾರ್ಡ್ ರೆಮಿ ಹೇಳಿದ್ದಾರೆ. ಗಲಭೆ, ಜೀವ ಹಾನಿಯನ್ನು ಖಂಡಿಸಲೇ ಬೇಕು, ಜೊತೆಗೆ ಬಿಬಿಸಿ ಮಾಡಿರುವ ಪಕ್ಷಪಾತಿ ವರದಿಗಾರಿಕೆಯನ್ನೂ ಖಂಡಿಸಬೇಕು ಅಂತಾ ರೆಮಿ ಟ್ವೀಟ್ ಮಾಡಿದ್ದಾರೆ.

BBC ತಯಾರಿಸಿರುವ india the modi question ಡಾಕ್ಯುಮೆಂಟರಿಯನ್ನ 2 ಭಾಗಗಳಲ್ಲಿ ನಿರ್ಮಾಣ ಮಾಡಲಾಗಿದೆ. ಅಂದರೆ ಸಿರೀಸ್ ರೀತಿ ಬಿಡುಗಡೆ ಮಾಡಲಾಗಿದೆ. ತಮಾಷೆ ಅಂದ್ರೆ, ಈ ಡಾಕ್ಯುಮೆಂಟರಿಯನ್ನ ಭಾರತದಲ್ಲಿ ನೋಡೋಕೆ ಸಾಧ್ಯವೇ ಇಲ್ಲ! ಬಿಬಿಸಿ ಭಾರತೀಯರಿಗೆ ಡಾಕ್ಯುಮೆಂಟರಿ ನೋಡೋಕೆ ಅವಕಾಶವನ್ನೇ ಕೊಟ್ಟಿಲ್ಲ. ಈ ಡಾಕ್ಯುಮೆಂಟರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ಕುರಿತು ಇರುವ ಧೋರಣೆಯನ್ನ ಬಿಂಬಿಸಲಾಗಿದೆಯಂತೆ.

2002ರಲ್ಲಿ ಗುಜರಾತ್ನಲ್ಲಿ ಸಂಭವಿಸಿದ ಗೋಧ್ರೋತ್ತರ ಗಲಭೆ ಕುರಿತ ಮಾಹಿತಿ ಇದ್ಯಂತೆ. ಎಲ್ಲಕ್ಕಿಂತಾ ಹೆಚ್ಚಾಗಿ ಈ ಗಲಭೆಯಲ್ಲಿ ಮೋದಿ ಅವರ ಪಾತ್ರದ ಉಲ್ಲೇಖ ಇದ್ಯಂತೆ. ಈ ಗಲಭೆ ನಡೆದಾಗ ಮೋದಿ ಅವರು ಗುಜರಾತ್ನ ಮುಖ್ಯಮಂತ್ರಿ ಆಗಿದ್ದರು. ಇನ್ನು ಗಲಭೆ ನಂತರ ನಡೆದ ತನಿಖೆಗಳ ಬಗ್ಗೆ ಕೂಡಾ ಡಾಕ್ಯುಮೆಂಟರಿಯಲ್ಲಿ ಉಲ್ಲೇಖ ಇದ್ಯಂತೆ.. ಇದಲ್ಲದೆ ಮೋದಿ ಅವರು ಪ್ರಧಾನಿ ಆದ ಮೇಲೆ ಕೈಗೊಂಡ ಆರ್ಟಿಕಲ್ 370 ರದ್ದತಿ ನಿರ್ಧಾರದ ಬಗ್ಗೆಯೂ ಪ್ರಸ್ತಾಪ ಇದೆ ಅಂತಾ ಖುದ್ದಾಗಿ ಬಿಬಿಸಿ ಸಂಸ್ಥೆಯೇ ಹೇಳಿದೆ.

ನಮ್ಮ ದೇಶದಲ್ಲಿ ದೂರದರ್ಶನ ಇರುವಂತೆ ಬ್ರಿಟನ್ ದೇಶದಲ್ಲಿ ಬಿಬಿಸಿ ಇದೆ. ಇದನ್ನ ಬ್ರಿಟನ್ ಸರ್ಕಾರವೇ ಸ್ಥಾಪನೆ ಮಾಡಿದೆ. ಜನರು ಕೊಡುವ ನೋಂದಣಿ ಶುಲ್ಕದಿಂದ ಈ ಸಂಸ್ಥೆ ನಡೆಯುತ್ತೆ. ಜನರ ಬಳಿ ಎಷ್ಟು ನೋಂದಣಿ ಶುಲ್ಕ ವಸೂಲಿ ಮಾಡಬೇಕು ಅಂತಾ ಬ್ರಿಟನ್ ಸರ್ಕಾರ, ಬ್ರಿಟನ್ನ ಸಂಸತ್ತು ನಿರ್ಧಾರ ಮಾಡುತ್ತೆ. ಆದ್ರೆ ಬಿಬಿಸಿ ಮೇಲೆ ಸರ್ಕಾರದ ನಿಯಂತ್ರಣ ಇಲ್ಲ. ಬಿಬಿಸಿಗೆ ಸಂಪಾದಕೀಯ ಸ್ವಾತಂತ್ರ ಇದೆ. ಎಷ್ಟರ ಮಟ್ಟಿಗೆ ಅಂದ್ರೆ, ಬಿಬಿಸಿ ಸುದ್ದಿ ಸಂಸ್ಥೆ ಬ್ರಿಟನ್ ಸರ್ಕಾರದ ವಿರುದ್ಧವೇ ಸುದ್ದಿ ಮಾಡುತ್ತೆ!

Leave A Reply

Your email address will not be published.