ಚಂದ್ರನ ಮೇಲೆ ಕಾಲಿರಿಸಿದ 2ನೇ ಗಗನಯಾನಿಗೆ, 93ನೇ ವಯಸ್ಸಿನಲ್ಲಿ 4ನೇ ಮದುವೆ!
ಗಗನಯಾನಿ ನೀಲ್ ಆರ್ಮ್‌ಸ್ಟ್ರಾಂಗ್ ಜೊತೆ, ಬಜ್ ಆಲ್ಡ್ರಿನ್ ಅವರು ಭೂಮಿಯ ಏಕೈಕ ಸ್ವಾಭಾವಿಕ ಉಪಗ್ರಹ ಚಂದ್ರನ ಅಂಗಳದಲ್ಲಿ ಕಾಲಿಟ್ಟು, ಚಂದ್ರನ ಮೇಲೆ ಕಾಲಿರಿಸಿದ ಎರಡನೇ ಗಗನ ಯಾತ್ರಿ ಎಂದು ಇತಿಹಾಸ ಬರೆದಿದ್ದರು. ಇದೀಗ ಈ ಗಗನಯಾನಿ ಆಲ್ಡ್ರಿನ್, ಮತ್ತೊಂದು ಅಚ್ಚರಿಯ ಸುದ್ದಿ ನೀಡಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.
ಹೌದು ಬಜ್ ಆಲ್ಡ್ರಿನ್, ತಮ್ಮ 93ನೇ ಇಳಿ ವಯಸ್ಸಿಗೆ ಆಂಕಾ ಫೌರ್ ಜೊತೆ ವಿವಾಹವಾಗಿದ್ದು ಸಾಕಷ್ಟು ಸುದ್ದಿಯಾಗಿದ್ದಾರೆ. ವಿವಾಹ ಕುರಿತು ಟ್ವೀಟ್ ಮಾಡಿರುವ ಬಜ್ ಆಲ್ಡ್ರಿನ್, ಪತ್ನಿ ಡಾ. ಅಂಕಾ ಫೌರ್ ಅವರೊಂದಿಗಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ತಿಳಿಸಿದ್ದಾರೆ.
ಆಲ್ಡ್ರಿನ್ ಅವರಿಗೆ ಇದು ನಾಲ್ಕನೇ ವಿವಾಹ. ಮೂವರು ಪತ್ನಿಯರಿಗೆ ವಿಚ್ಛೇದನ ನೀಡಿದ್ದಾರೆ. ʼಅಪೋಲೊ-11 ಮಿಷನ್ʼ ಗಗನಯಾನದಲ್ಲಿ ಜಗತ್ತಿನ ಇತಿಹಾಸದಲ್ಲೇ ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟ ಮೂವರು ಗಗನಯಾನಿಗಳ ಪೈಕಿ ಈಗ ಉಳಿದಿರುವ ಏಕೈಕ ಸದಸ್ಯರಾಗಿದ್ದಾರೆ ಆಲ್ಡ್ರಿನ್!
ಆಲ್ಡ್ರಿನ್ ಅವರಿಗೆ ನೆಟ್ಟಿಗರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅನೇಕರು ಆಲ್ಡ್ರಿನ್ ದಾಂಪತ್ಯ ಜೀವನಕ್ಕೆ ಶುಭಹಾರೈಸಿದರೆ, ಇನ್ನೂ ಕೆಲವರು ಮಾಜಿ ಗಗನಯಾನಿಯ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
ಅಲ್ಲದೆ ನನ್ನ 93ನೇ ಹುಟ್ಟುಹಬ್ಬದಂದು ಮತ್ತು ಲಿವಿಂಗ್ ಲೆಜೆಂಡ್ಸ್ ಆಫ್ ಏವಿಯೇಷನ್‌ನಿಂದ ನಾನು ಗೌರವಿಸಲ್ಪಟ್ಟ ದಿನದಂದು ಬಹುಕಾಲದ ಪ್ರೀತಿ ಡಾ. ಆಂಕಾ ಫೌರ್ ಜೊತೆ ವಿವಾಹವಾಗಿದ್ದೇನೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಮಾಜಿ ಗಗನಯಾತ್ರಿ ಟ್ವೀಟ್‌ನಲ್ಲಿ ಬರೆದುಕೊಂಡು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.