Flight Ticket : ನಿಮ್ಮ ಫ್ಲೈಟ್​ ಲೇಟಾದ್ರೆ, ಕ್ಯಾನ್ಸಲ್​ ಆದ್ರೆ ನಿಮ್ಮ ರೈಟ್ಸ್ ಏನು?

ಸಾಮಾನ್ಯವಾಗಿ ಬಸ್ ಇಲ್ಲವೇ ರೈಲಿನಲ್ಲಿ ಪ್ರಯಾಣಿಸುವಾಗ ಏನಾದರು ಸಮಸ್ಯೆ ಉಂಟಾದರೆ ಕೂಡಲೇ ಸಂಬಂಧ ಪಟ್ಟ ಅಧಿಕಾರಿ ಇಲ್ಲವೇ ಸಾರಿಗೆ ಇಲಾಖೆಯ ಗಮನಕ್ಕೆ ತರುವುದು ಗೊತ್ತಿರುವ ವಿಚಾರವೇ!! ಆದರೆ ವಿಮಾನದಲ್ಲಿ ಪ್ರಯಾಣ ಬೆಳೆಸುವ ವೇಳೆ ವಿಮಾನ ರದ್ದುಗೊಳ್ಳುವ ಇಲ್ಲವೇ ವಿಮಾನ ತಡವಾಗಿ ಬಂದಲ್ಲಿ ಏನು ಮಾಡಬೇಕು ಎಂಬ ಮಾಹಿತಿ ನಿಮಗೆ ತಿಳಿದಿದೆಯೇ??

ವಿಮಾನದಲ್ಲಿ ಪ್ರಯಾಣ ಬೆಳೆಸಬೇಕು ಎಂಬುದು ಹೆಚ್ಚಿನವರ ಹೆಬ್ಬಯಕೆ. ಅದೇ ರೀತಿ ವಾರಕ್ಕೊಮ್ಮೆ ಕೆಲಸದ ನಿಮಿತ್ತ ವಿಮಾನಗಳಲ್ಲಿ ಪ್ರಯಾಣಿಸುವವರು ಕೂಡ ಇದ್ದಾರೆ. ಕೆಲವೊಮ್ಮೆ ವಾತಾವರಣದ ಬದಲಾವಣೆಯಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯ ಆಗುವ ಪ್ರಮೇಯವನ್ನು ಅಲ್ಲಗಳೆಯುವಂತಿಲ್ಲ. ಅದರಲ್ಲಿಯೂ ಮೋಡ ಮುಸುಕಿದ ವಾತಾವರಣ , ಹೆಚ್ಚು ಮೋಡಗಳು ಇದ್ದ ಸಂದರ್ಭ ಜೊತೆಗೆ ಕೆಟ್ಟ ಹವಮಾನಗಳಿದ್ದ ವೇಳೆ ಪ್ರತಿಕೂಲ ಹವಾಮಾನಕ್ಕೆ ಅನುಸಾರ ವಿಮಾನ ಹಾರಾಟಕ್ಕೆ ತಡೆ ಉಂಟಾಗಿ ವಿಮಾನ ಟೇಕ್ ಆಫ್ ಆಗಲು ತಡವಾಗುತ್ತದೆ.

ಕೆಲವೊಮ್ಮೆ ಹವಾಮಾನ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದರೆ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗುತ್ತದೆ. ಈ ರೀತಿಯ ಪರಿಸ್ಥಿತಿ ಎದುರಾದ ವೇಳೆ ಪ್ರಯಾಣಿಕರಿಗೆ ಹೋಗಬೇಕಾದ ಸ್ಥಳಕ್ಕೆ ನಿರೀಕ್ಷಿಸಿದಂತೆ ತಲುಪಲು ಆಗದೇ ಸಮಸ್ಯೆ ತಲೆದೋರುತ್ತದೆ. ಕೆಲವೊಮ್ಮೆ ತುರ್ತು ಸಂದರ್ಭದಲ್ಲಿ ಪ್ರಯಾಣಿಕರಿಗೆ ವಿಮಾನ ರದ್ದು ಮಾಡುವುದರಿಂದ ಹೆಚ್ಚು ತೊಂದರೆ ಉಂಟಾಗಬಹುದು. ಅದರಲ್ಲಿಯೂ ಗಂಟೆಗಳ ವ್ಯತ್ಯಯವಾಗಿದ್ದರೆ ಪರವಾಗಿಲ್ಲ ಆದರೆ, ದಿನಕ್ಕೆ ಒಂದೋ ಇಲ್ಲವೇ ಎರಡು ವಿಮಾನ ಹಾರಾಟವಿದ್ದ ವೇಳೆ ಈ ರೀತಿ ತೊಡಕು ಉಂಟಾದಲ್ಲಿ ಪ್ರಯಾಣಿಕರಿಗೆ ಇದರಿಂದ ದೊಡ್ಡ ಮಟ್ಟದಲ್ಲಿ ಕಿರಿಕಿರಿ ಉಂಟಾಗುವುದರಲ್ಲಿ ಸಂಶಯವಿಲ್ಲ. ಹಾಗಾದ್ರೆ, ಈ ರೀತಿ ಸಮಸ್ಯೆ ಎದುರಾದರೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಮಾಹಿತಿ ನಿಮಗಾಗಿ.

2019 ರಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯವು ಈ ನಿಟ್ಟಿನಲ್ಲಿ ಚಾರ್ಟರ್ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಹೇಳಿರುವ ಮಾಹಿತಿಯಲ್ಲಿ ಅಡಕವಾಗಿರುವ ಅಂಶಗಳು ಹೀಗಿವೆ.
ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ವಿಮಾನ ರದ್ದತಿಯ ಕುರಿತಾದ ಮಾಹಿತಿಯನ್ನು ವಿಮಾನ ಹಾರಾಟದ ನಿಗದಿ ಪಡಿಸಿದ ಸಮಯಕ್ಕಿಂತ 2 ವಾರಗಳ ಮುಂಚಿತವಾಗಿಯೇ ನೀಡುತ್ತವೆ. ಈ ರೀತಿ ವಿಮಾನ ಹಾರಾಟದ ವ್ಯತ್ಯಯ ಉಂಟಾದರೆ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ಮತ್ತೊಂದು ವಿಮಾನವನ್ನು ಏರ್ಪಡಿಸುತ್ತದೆ. ಇಲ್ಲವಾದಲ್ಲಿ ಪ್ರಯಾಣಿಕರಿಗೆ ಮರುಪಾವತಿ ವ್ಯವಸ್ಥೆ ಮಾಡಬೇಕಾಗುತ್ತದೆ. ಮರುಪಾವತಿಯು ಪ್ರಯಾಣಿಕರ ಸೇವಾ ಶುಲ್ಕ, ವಿಮಾನ ನಿಲ್ದಾಣ ಅಭಿವೃದ್ಧಿ ಶುಲ್ಕ ಮತ್ತು ಸೇವಾ ತೆರಿಗೆಯನ್ನು ಹೊಂದಿರುತ್ತದೆ.

24 ಗಂಟೆಗಳ ಮುಂಚಿತವಾಗಿ ವಿಮಾನಯಾನ ಕಂಪನಿಯು ಪ್ರಯಾಣಿಕರಿಗೆ ವಿಮಾನ ರದ್ದತಿಯ ಮಾಹಿತಿ ನೀಡದಿದ್ದ ಸಂದರ್ಭದಲ್ಲಿ ಪರಿಹಾರ ನೀಡಬೇಕಾಗುತ್ತದೆ. ಒಂದು ವೇಳೆ ನೀವು ಪ್ರಯಾಣಿಸುವ ವಿಮಾನವು ರದ್ದು ಮಾಡುವ ಮೊದಲು 24 ಗಂಟೆಗಳ ಮೊದಲೇ ಈ ಬಗ್ಗೆ ನಿಮಗೆ ಮಾಹಿತಿ ನೀಡಬೇಕಾಗುತ್ತದೆ. ವಿಮಾನದ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ನಡುವಿನ ಸಮಯವನ್ನು ಬ್ಲಾಕ್ ಸಮಯ ಎನ್ನಲಾಗುತ್ತದೆ. ಉದಾಹರಣೆಗೆ, ಬ್ಲಾಕ್ ಸಮಯ 2:30 ಗಂಟೆಯಾಗಿದ್ದಲ್ಲಿ ವಿಮಾನ ಹಾರಾಟ ತಡವಾದರೆ, ಪ್ರಯಾಣಿಕರಿಗೆ 2 ಗಂಟೆ ತಡವಾದರೆ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಬೇಕು.

ಒಂದು ವೇಳೆ ಹವಾಮಾನದಲ್ಲಿ ವ್ಯತ್ಯಯವಿದ್ದು ಹಾರಾಟಕ್ಕೆ ಪೂರಕ ವಾತಾವರಣವಿಲ್ಲದೇ ಇದ್ದಲ್ಲಿ ವಿಮಾನ ಯಾನ ಸಂಸ್ಥೆಯು ಪ್ರಯಾಣಿಕರಿಗೆ ತಂಗಲು ವ್ಯವಸ್ಥೆ ಮಾಡಿಕೊಡಬೇಕಾಗುತ್ತದೆ.ಅಂದರೆ ಹೋಟೆಲ್ ಗಳಲ್ಲಿ ಮುಂದಿನ ವಿಮಾನ ಹಾರಾಟದವರೆಗೆ ಪ್ರಯಾಣಿಕರಿಗೆ ಉಳಿದುಕೊಳ್ಳಲು ವಸತಿ ಸೌಕರ್ಯವನ್ನು ಕಲ್ಪಿಸಬೇಕು. ಒಂದು ವೇಳೆ ಪ್ರಯಾಣಿಕರು ತುರ್ತಾಗಿ ತೆರಳಬೇಕಾದ ಸಂದರ್ಭದಲ್ಲಿ ಅದಕ್ಕೆ ಅನ್ಯ ಮಾರ್ಗದ ಮೂಲಕ ಬೇರೆ ವಿಮಾನಗಳಲ್ಲಿ ಕಳುಹಿಸುವ ವ್ಯವಸ್ಥೆ ಮಾಡಬೇಕಾಗುತ್ತದೆ. ಇದು ಸಾಧ್ಯವಿಲ್ಲವೆಂದಾದರೆ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿಯನ್ನು ಮಾಡಬೇಕು.

ನಗದು ರೂಪದಲ್ಲಿ ವಿಮಾನಯಾನ ಸಂಸ್ಥೆಯು ಹಣದ ರೂಪದಲ್ಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಬುಕ್ ಮಾಡುವ ಸಂದರ್ಭದಲ್ಲಿ ಈ ಮೊತ್ತವನ್ನು 1 ವಾರದ ಒಳಗಾಗಿ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೇ, ಒಂದು ವೇಳೆ ಬೆಳಿಗ್ಗಿನ 8ರಿಂದ ಗಂಟೆಯ ನಡುವೆ ವಿಮಾನ ಟೇಕ್ ಆಫ್ ಆಗಬೇಕಾದ ವಿಮಾನ ನಿಗದಿತ ಸಮಯಕ್ಕಿಂತ ತಡವಾದರೆ, ಅಂದರೆ 6 ಗಂಟೆಗಿಂತ ಹೆಚ್ಚಿನ ಸಮಯ ವಿಳಂಬ ಉಂಟಾದರೆ ವಿಮಾನಯಾನ ಸಂಸ್ಥೆಯು ಊಟ, ಉಪಹಾರದ ವ್ಯವಸ್ಥೆ ಮಾಡಬೇಕಾಗುತ್ತದೆ.ಈ ನಿಗದಿತ ಸಮಯವು ಹಾರಾಟದ ಬ್ಲಾಕ್ ಸಮಯವನ್ನು ಅವಲಂಬಿತವಾಗಿರುತ್ತದೆ.

Leave A Reply

Your email address will not be published.