ಮಂಗಳೂರು : ಗಾಂಜಾ ಪ್ರಕರಣ, 2 ವೈದ್ಯರು ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ಅಮಾನತು
ಇತ್ತೀಚೆಗಷ್ಟೇ ಕರಾವಳಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ನಡೆಯುತ್ತಿದ್ದ ಗಾಂಜಾ ದಂಧೆಯನ್ನು ಬಯಲು ಮಾಡುವಲ್ಲಿ ಕಡಲ ತಡಿ ಮಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದರು. ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರು ಸೇರಿ ಕೆಲ ಪೆಡ್ಲರ್ ಗಳು ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದು, ಹಲವರನ್ನು ವಶಕ್ಕೆ ಪಡೆದ ಬೆನ್ನಲ್ಲೇ ಇದೀಗ ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದೆ.
ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ ಅತ್ತಾವರ, ಕೆ.ಎಂ.ಸಿ ಮಣಿಪಾಲ, ದೇರಳಕಟ್ಟೆಯ ಗಾಂಜಾ ಪ್ರಕರಣದಲ್ಲಿ ಇಬ್ಬರು ವೈದ್ಯರು ಮತ್ತು 7 ವೈದ್ಯಕೀಯ ವಿದ್ಯಾಥಿಗಳ ವಿರುದ್ಧ ಆರೋಪದ ಬೆನ್ನಲ್ಲೇ ಕೆ.ಎಂ.ಸಿ. ಆಸ್ಪತ್ರೆ ಆಡಳಿತ ಮಂಡಳಿ . ಎಲ್ಲರನ್ನೂ ಅಮಾನತು ಮಾಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಅತ್ತಾವರದ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ.ಸಮೀರ್ ಮತ್ತು ಉಡುಪಿಯ ಮಣಿಪಾಲ ಕೆಎಂಸಿ ಮೆಡಿಕಲ್ ಸರ್ಜನ್ ಡಾ.ಮಣಿಮಾರನ್ ಮುತ್ತು ಅವರನ್ನು ಕಕರ್ತವ್ಯದಿಂದ ಅಮಾನತು ಮಾಡಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಾದ ಡಾ.ಕಿಶೋರಿಲಾಲ್, ಡಾ.ನದೀಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ(26), ಡಾ.ರಿಯಾ ಚಡ್ಡ(22), ಡಾ.ಇರಾ ಬಾಸಿನ(23), ಡಾ.ಕ್ಷಿತಿಜ್ ಗುಪ್ತ(25), ಡಾ.ಹರ್ಷಕುಮಾರ್ ವಿ.ಎಸ್. ಅವರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ರವರಿಗೆ ಕೆಎಂಸಿ ಡೀನ್ ಉನ್ನಿಕೃಷ್ಣನ್ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.