ಇಂದು ಮತ್ತೆ ರಿಲೀಸ್ ಆಗುತ್ತಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾ! ರಿ ರಿಲೀಸ್ ಆಗುತ್ತಿರುವ ಹಿಂದಿನ ಉದ್ದೇಶವೇನು ಗೊತ್ತಾ!

ಕಾಶ್ಮೀರಿ ಪಂಡಿತರ ವಲಸೆ ಹಾಗೂ ಹತ್ಯೆಗೆ ಸಂಬಂಧಿಸಿದ ವಿಷಯ ಇಟ್ಟುಕೊಂಡು ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾವು ವಿವೇಕ್ ಅಗ್ನಿ ಹೋತ್ರಿಯವರ ನಿರ್ದೇಶನದಲ್ಲಿ ಮೂಡಿಬಂದಿತ್ತು. ಈ ಚಿತ್ರವು ಜನರ ಮನ್ನಣೆಗೆ ಪಾತ್ರವಾಗಿದ್ದು ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. ಅಲ್ಲದೆ ಕಳೆದ ವರ್ಷ ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಈ ಸಿನೆಮಾ ಇದೀಗ ಮತ್ತೆ ರಿ ರಿಲೀಸ್ ಆಗುತ್ತಿದೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್​​’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ಮೊದಲ ದಿನ ಕೇವಲ 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಈ ಚಿತ್ರ ನಂತರದ ದಿನಗಳಲ್ಲಿ ಬಾಕ್ಸ್ ಆಫೀಸ್ ಉಡೀಸ್ ಮಾಡಿತು. ಈ ಮೂಲಕ ಸಿನಿಮಾ ಸಾಕಷ್ಟು ಸದ್ದು ಮಾಡಿತು. ಈಗ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ ರೀ ರೀಲೀಸ್ ಆಗುತ್ತಿದೆ. ‘ಪಠಾಣ್​’ ಸಿನಿಮಾ ಜತೆಗೆ ಈ ಚಿತ್ರ ಸ್ಪರ್ಧೆ ನೀಡುತ್ತಿದೆ ಅನ್ನೋದು ವಿಶೇಷ.

ನಿರ್ದೇಶಕ ವಿವೇಕ್ ಅವರು ಇದರ ಕುರಿತು ಮಾತನಾಡಿ ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆಗಿ, ಟಿವಿಯಲ್ಲೂ ಪ್ರಸಾರವಾಗಿ, ಓಟಿಟಿಯಲ್ಲೂ ಇರುವ ಈ ಸಿನಿಮಾವನ್ನು ಇಂದು ಮತ್ತೆ ಬಿಡುಗಡೆ ಮಾಡುತ್ತಿರುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ. ಇದು ಕಾಶ್ಮೀರ ಪಂಡಿತರ ಹತ್ಯೆಯ ಹಿನ್ನೆಲೆಯಾಗಿಟ್ಟುಕೊಂಡು ತಯಾರಾದ ಸಿನಿಮಾ. ಆ ಹತ್ಯೆ ನಡೆದು ಇಂದಿಗೆ 33 ವರ್ಷಗಳು. ಆ ಗೌರವಾರ್ಥವಾಗಿ ಸಿನಿಮಾ ರಿಲೀಸ್ ಮಾಡುತ್ತಿರುವುದಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ.

ಕಾಶ್ಮೀರ ಪಂಡಿತರ ನರಮೇಧ ನಡೆದು ಜನವರಿ 19ಕ್ಕೆ 33 ವರ್ಷಗಳು ಆಗುತ್ತಿವೆ. ಇಂತಹ ಕರಾಳ ಅಧ್ಯಾಯವನ್ನು ಮತ್ತೊಮ್ಮೆ ಜನರಿಗೆ ನೆನಪಿಸಬೇಕು. ನರಹತ್ಯೆಯಲ್ಲಿ ಹತರಾದ ಕಾಶ್ಮೀರ ಪಂಡಿತರಿಗೆ ಗೌರವವನ್ನು ಸೂಚಿಸುವುದಕ್ಕಾಗಿ ಇಂದು ಮತ್ತೆ ದಿ ಕಾಶ್ಮೀರ್ ಫೈಲ್ಸ್ ತೆರೆಯ ಮೇಲೆ ಇರಲಿದೆ. ವಿವೇಕ್ ಅಗ್ನಿಹೋತ್ರಿ ಅವರ ನಿರ್ದೇಶನದಲ್ಲಿ ಮೂಡಿಬಂದ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮೊದಲಾದವರು ನಟಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರು ಸದ್ಯ ‘ದಿ ವ್ಯಾಕ್ಸಿನ್ ವಾರ್​’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ.

Leave A Reply

Your email address will not be published.