ಇಲ್ಲಿದೆ ನೋಡಿ ಎದೆ ಹಾಲಿನ ಬ್ಯಾಂಕ್! ಎಳೆಯ ಕಂದಮ್ಮಗಳ ಜೀವ ಉಳಿಸಲು ಸದ್ದಿಲ್ಲದೆ ಕೆಲಸ ಮಾಡುತ್ತಿದೆ ಈ ಸಂಸ್ಥೆ!

ವಿದೇಶಗಳಲ್ಲಿ ಕಾಣಿಸುತ್ತಿದ್ದ ಎದೆಹಾಲು ದಾನದ ಪರಿಕಲ್ಪನೆ, ಇದೀಗ ಭಾರತಕ್ಕೂ ಕಾಲಿಟ್ಟಿದೆ. ಮಗುವಿಗೆ ತಾಯಿಯ ಎದೆಹಾಲು ಅಮೃತಕ್ಕೆ ಸಮ. ಹುಟ್ಟಿದ ಮಗುವಿಗೆ ಇಂತಹ ಅಮೃತ ಪಾನವನ್ನು ಕೆಲವೊಮ್ಮೆ ಸರಿಯಾದ ಸಮಯಕ್ಕೆ ನೀಡಲು ಆಗುವುದಿಲ್ಲ. ಅದೆಷ್ಟೋ ನವಜಾತ ಶಿಶುಗಳು ಸಾವನ್ನಪ್ಪಿರುವುದನ್ನು ಕಂಡಿದ್ದೇವೆ. ಆದರೆ ಈ ಜಿಲ್ಲೆಯೊಂದರಲ್ಲಿ ಮಕ್ಕಳಿಗೆ, ಜೀವರಕ್ಷಕವಾಗಿರುವ ಎದೆಹಾಲನ್ನು ಪೂರೈಸುವ ಸದ್ದಿಲ್ಲದೆ ನಡೆಯುತ್ತಿದೆ.

ಹೌದು ಬೆಂಗಳೂರಿನ ನಿಯೋಲ್ಯಾಕ್ಟಾಲೈಫ್‌ ಸೈನ್ಸ್‌ ಲಿಮಿಟೆಡ್‌ ಎಂಬ ಸಂಸ್ಥೆಯ ಆಶ್ರಯದಲ್ಲಿ ಜಿಲ್ಲೆಯೊಳಗೆ ಕೆಲವು ಸ್ವಯಂಸೇವಾ ಸಂಸ್ಥೆಗಳು ಹೆಚ್ಚು ಎದೆಹಾಲು ಬರುವ ತಾಯಂದಿರಿಂದ ಸಂಗ್ರಹಿಸಿ ಪೂರೈಸುವ ಕೆಲಸವನ್ನು ಮಾಡುತ್ತಿವೆ. ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡೋ ಅಥವಾ ನಾನಾ ಕಾರಣಕ್ಕೆ ಎಳೆಯ ಕಂದಮಗಳಿಗೆ ಎದೆ ಹಾಲಿನ ಕೊರತೆ ಉಂಟಾಗುತ್ತದೆ. ಅಂತಹ ಮಕ್ಕಳ ಪ್ರಾಣ ಉಳಿಸಲು ಸಂಸ್ಥೆಯು ಈ ರೀತಿ ಕಾರ್ಯ ಮಾಡುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರವಾಗಿದೆ.

ಹಾಲನ್ನು ಎಲ್ಲಿಂದ ಸಂಗ್ರಹಿಸುತ್ತಾರೆ, ಹೇಗೆ ಸಂಗ್ರಹಿಸುತ್ತಾರೆ ಗೊತ್ತ? ತಾಯಿಯ ಎದೆಯಲ್ಲಿ ಉತ್ಪತ್ತಿಯಾಗುವ ಹಾಲನ್ನೆಲ್ಲಾ ಮಕ್ಕಳು ಕುಡಿಯುವುದಿಲ್ಲ. ಮಗು ಅಗತ್ಯವಿರುವಷ್ಟುಹಾಲನ್ನು ಕುಡಿದು ಉಳಿಯುವ ಹಾಲನ್ನು ತಾಯಂದಿರು ವ್ಯರ್ಥವಾಗಿ ಹೊರಹಾಕುತ್ತಾರೆ. ಅಂತಹ ತಾಯಂದಿರಿಂದ ಮಾತ್ರ ಹಾಲನ್ನು ಸಂಗ್ರಹಿಸಲಾಗುತ್ತದೆ.

ಹಾಗಂತ ಅಗತ್ಯಕ್ಕಿಂತ ಹೆಚ್ಚು ಎದೆಹಾಲು ಹೊಂದಿರುವ ತಾಯಿಯರೆಲ್ಲ ಹಾಲನ್ನು ದಾನ ನೀಡಲಾಗುವುದಿಲ್ಲ. ಎಚ್‌ಐವಿ ಸೋಂಕು, ಜ್ವರ ಅಥವಾ ಇನ್ನಿತರ ಗಂಭೀರ ಸಮಸ್ಯೆಗೆ ಒಳಗಾಗಿದ್ದರೆ ಹಾಲನ್ನು ದಾನವಾಗಿ ಕೊಡುವಂತಿಲ್ಲ. ತಜ್ಞರಿಂದ ಪರೀಕ್ಷೆಗೆ ಒಳಗಾಗಿ ಅನಂತರವೇ ಇನ್ನೊಂದು ಶಿಶುವಿಗೆ ಹಾಲನ್ನು ನೀಡಬಹುದು. ಮಗುವಿನ ಅಗತ್ಯಕ್ಕಿಂತ ಹೆಚ್ಚು ಹಾಲನ್ನು ಹೊಂದಿರುವ ತಾಯಂದಿರನ್ನು ಗುರುತಿಸಿ ಮೊದಲು ಅವರನ್ನು ಸಂದರ್ಶನ ಮಾಡಲಾಗುತ್ತದೆ. ಅವರ ರಕ್ತವನ್ನು ಪರೀಕ್ಷಿಸಿ ತಾಯಿಯ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ನಂತರ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು ಹಾಲನ್ನು ಸಂಗ್ರಹಿಸಲಾಗುತ್ತದೆ.

ಇಲ್ಲಿಂದ ಕಳುಹಿಸಿದ ಹಾಲನ್ನು ಸಂಸ್ಥೆಯವರು ಮತ್ತೊಮ್ಮೆ ಪರೀಕ್ಷಿಸಿ ಮಗು ಕುಡಿಯಲು ಯೋಗ್ಯವೇ ಎಂಬುದನ್ನು ಖಚಿತಪಡಿಸಿಕೊಂಡು ನೀಡಲಾಗುತ್ತದೆ. ಅಲ್ಲದೆ ಎದೆಹಾಲನ್ನು ನೀಡುವ ತಾಯಂದಿರಿಗೆ ಯಾವುದೇ ಗೌರವಧನವನ್ನು ನೀಡಲಾಗುವುದಿಲ್ಲ. ಅದರ ಬದಲಿಗೆ ಪೌಷ್ಠಿಕ ಆಹಾರವಾದ ಸೊಪ್ಪು, ತರಕಾರಿ, ಕಡಲೆಬೇಳೆ. ರವೆ, ಮೊಟ್ಟೆಯಂತ ಪದಾರ್ಥಗಳನ್ನು ಪ್ರತಿ ತಿಂಗಳು ನೀಡಲಾಗುವುದು. ಮೊಟ್ಟೆತಿನ್ನದವರಿಗೆ ಪರ್ಯಾಯವಾಗಿ ಬೇರೆ ಪದಾರ್ಥಗಳನ್ನು ನೀಡಲಾಗುತ್ತಿದೆ.

ಒಬ್ಬ ತಾಯಿ ತಮ್ಮ ಶಕ್ತಾನುಸಾರ ಹಾಲನ್ನು ನೀಡುವ ಸಾಮರ್ಥ್ಯ ಹೊಂದಿರುತ್ತಾರೆ. ಕೆಲವರು 50 ಮಿ.ಲೀ., 100 ಮಿ.ಲೀ., ಮತ್ತೆ ಕೆಲವರು 200 ಮಿ.ಲೀ.ವರೆಗೆ ಹಾಲನ್ನು ನೀಡುವರು. ಈ ತಾಯಂದಿರಿಂದ 6 ತಿಂಗಳವರೆಗಷ್ಟೇ ಎದೆಹಾಲನ್ನು ಸಂಗ್ರಹಿಸಲಾಗುತ್ತದೆ. ಆನಂತರ ತಾಯಿಯು ಸಾಮಾನ್ಯ ಆಹಾರ ಸೇವಿಸಲು ಆರಂಭಿಸುವುದರಿಂದ ಹಾಲು ಗಟ್ಟಿಯಾಗುತ್ತದೆ. ನವಜಾತ ಶಿಶುಗಳು ಈ ಹಾಲನ್ನು ಕುಡಿದು ಜೀರ್ಣಿಸಿಕೊಳ್ಳಲು ಶಕ್ತಿ ಇರುವುದಿಲ್ಲ. ಹಾಗಾಗಿ ನಿಗದಿತ ಸಮಯದ ಬಳಿಕ ಹಾಲು ಸಂಗ್ರಹವನ್ನು ನಿಲ್ಲಿಸಲಾಗುತ್ತದೆ.

ಮಗುವಿನ ತಾಯಿ ಅನಾರೋಗ್ಯಕ್ಕೆ ಒಳಗಾದಾಗ, ತಾಯಿಗೆ ಎದೆ ಹಾಲು ಕೊರತೆ ಆದಾಗ, ಅನಾಥ ಮಕ್ಕಳು, ಅವಧಿ ಪೂರ್ವ ಜನಿಸಿದ ಮಗು ಹೆಚ್ಚಿನ ಸಮಯ ಆಸ್ಪತ್ರೆಯಲ್ಲಿ ಇರುವಾಗ ಒಟ್ಟಾರೆ ತನ್ನ ಹೆತ್ತ ತಾಯಿಯಿಂದ ಸೂಕ್ತ ಸಮಯಕ್ಕೆ ಹಾಲನ್ನು ಕುಡಿಯಲಾಗದ ಮಗುವಿಗೆ ಇದರ ಪ್ರಯೋಜನ ದೊರೆಯಲಿದೆ.

ಇದರ ಕುರಿತು ಮಾಹಿತಿ ಹಂಚಿಕೊಂಡ ಪರಸ್ಪರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ದೇವರಾಜು ಕೊಪ್ಪ ಅವರು ‘ ನಮ್ಮ ಸಂಸ್ಥೆ ಸೇರಿದಂತೆ ಜಿಲ್ಲೆಯೊಳಗೆ ಐದು ಸ್ವಯಂಸೇವಾ ಸಂಸ್ಥೆಗಳು ಎದೆಹಾಲು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿವೆ. ಮಗುವಿನ ಅಗತ್ಯಕ್ಕಿಂತ ಹೆಚ್ಚು ಹಾಲನ್ನು ಹೊಂದಿರುವ ತಾಯಂದಿರನ್ನು ಗುರುತಿಸಿ ಅವರನ್ನು ಪರೀಕ್ಷೆಗೊಳಪಡಿಸಿ ಆರೋಗ್ಯ ಸಮಸ್ಯೆಗಳಿಲ್ಲವೆಂದು ಖಚಿತಪಡಿಸಿಕೊಂಡ ಬಳಿಕ ಹಾಲನ್ನು ಸಂಗ್ರಹಿಸಲಾಗುತ್ತಿದೆ’ ಎಂದರು.

ಮುಂದೆ ಮಾತನಾಡಿ ‘ಬೇಡಿಕೆ ಒಂದೇ ಪ್ರಮಾಣದಲ್ಲಿ ಇರುವುದಿಲ್ಲ. ಕೆಲವೊಮ್ಮೆ ಹೆಚ್ಚು ಬೇಡಿಕೆ ಬಂದರೆ, ಕೆಲವು ತಿಂಗಳು ಬೇಡಿಕೆ ಇರುವುದಿಲ್ಲ. ಪ್ರತಿ ತಿಂಗಳು ಜಿಲ್ಲೆಯ ಎಲ್ಲಾ ಸಂಸ್ಥೆಗಳಿಂದ ಕನಿಷ್ಠ 200 ಲೀಟರ್‌ ಹಾಲನ್ನು ಬೆಂಗಳೂರಿನ ನಿಯೋಲ್ಯಾಕ್ಟಾಲೈಫ್‌ ಸೈನ್ಸ್‌ ಸಂಸ್ಥೆಗೆ ಪೂರೈಸಲಾಗುತ್ತಿದೆ. ನಿಯೋಲ್ಯಾಕ್ಟಾಲೈಫ್‌ ಸೈನ್ಸ್‌ ಸಂಸ್ಥೆಯವರು ತಿಂಗಳಿಗೆ ಒಮ್ಮೆ ಬಂದು ಡೀ-ಫ್ರೀಜರ್‌ನಲ್ಲಿ ಸಂಗ್ರಹಿಡಲಾಗುವ ಎದೆಹಾಲನ್ನು ಸಂಗ್ರಹಿಸಿಕೊಂಡು ಹೋಗುವರು. ಜಿಲ್ಲೆಯ ಸ್ವಯಂಸೇವಾ ಸಂಸ್ಥೆಗಳಿಂದ ತಿಂಗಳಿಗೆ 200 ಲೀಟರ್‌ನಷ್ಟುಎದೆಹಾಲು ಪೂರೈಸಲಾಗುತ್ತಿದೆ. ಒಮ್ಮೊಮ್ಮೆ ಇದು ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ’ ಎಂದು ಹೇಳಿದರು.

Leave A Reply

Your email address will not be published.