Vehicle Registration : ವಾಹನ ಸವಾರರೇ ನಿಮಗೊಂದು ಮಹತ್ವದ ಸುದ್ದಿ | 15 ವರ್ಷಕ್ಕಿಂತ ಹಳೆಯ ವಾಹನಗಳ ಕುರಿತು ಬಂತು ಮತ್ತೊಂದು ಮಾಹಿತಿ
ಕೇಂದ್ರ ಸರ್ಕಾರ ವಾಹನ ಗುಜರಿ ನೀತಿಯನ್ನು ಕಳೆದ ವರ್ಷ ಪ್ರಕಟಿಸಿದೆ. ಈ ನಡುವೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಇತ್ತೀಚೆಗಷ್ಟೇ, ಈ ವಿಚಾರವನ್ನು ಪ್ರಸ್ತಾಪಿಸಿದ್ದು, 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲಾಗುವ ಕುರಿತು ಮಾಹಿತಿ ನೀಡಿದ್ದರು. ಇದರ ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಹಾಗೂ ಖರೀದಿ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿತ್ತು. ಇದೀಗ, ಕೇಂದ್ರದಿಂದ ಸವಾರರಿಗೆ ಬಿಗ್ ಶಾಕ್ ಎದುರಾಗುವ ಸಾಧ್ಯತೆ ದಟ್ಟವಾಗಿದ್ದು 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳ ನೋಂದಣಿ ರದ್ದು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಶ್ವದ ಹವಾಮಾನ ಬದಲಾವಣೆ ಸಮಸ್ಯೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಹಲವು ಕ್ರಮಗಳಲ್ಲಿ ವಾಹನಗಳ ಮಾಲಿನ್ಯ ನಿಗ್ರಹಿಸುವುದು ಒಂದಾಗಿದೆ. ಭಾರತ ಈ ನಿಟ್ಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಹಂತ ಹಂತವಾಗಿ ನಿಲ್ಲಿಸಿ ಎಲೆಕ್ಟ್ರಿಕ್ ವಾಹನಗಳನ್ನು ಸಂಪೂರ್ಣವಾಗಿ ತರುವ ಯೋಜನೆ ಜಾರಿಗೆ ತರಲು ಮುಂದಾಗಿದೆ. ಕಳೆದ ನವೆಂಬರ್ ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಅವರು, 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳನ್ನು ಗುಜರಿಯಾಗಿ ಪರಿವರ್ತಿಸಲಾಗುವ ಕುರಿತು ಮಾಹಿತಿ ನೀಡಿದ್ದು ಗೊತ್ತಿರುವ ವಿಷಯವೇ!
ಇದಕ್ಕೆ ಸಂಬಂಧಿಸಿದ ನೀತಿಯನ್ನು ರಾಜ್ಯಗಳಿಗೆ ಕಳುಹಿಸಲಾಗಿದ್ದು ‘ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಕಡತಕ್ಕೆ ಸಹಿ ಕೂಡ ಮಾಡಲಾಗಿದೆ. ಇದರ ಅಡಿಯಲ್ಲಿ 15 ವರ್ಷಕ್ಕಿಂತ ಹಳೆಯದಾದ ಭಾರತ ಸರ್ಕಾರದ ಎಲ್ಲಾ ವಾಹನಗಳನ್ನು ಜಂಕ್ ಆಗಿ ಪರಿವರ್ತಿಸಲಾಗಲಿದ್ದು ಈ ನೀತಿಯನ್ನು ಎಲ್ಲಾ ರಾಜ್ಯಗಳಿಗೂ ರವಾನಿಸಲಾಗಿದ್ದು ಇದನ್ನು ಅಳವಡಿಸಿಕೊಳ್ಳಬೇಕು” ಎಂದು ಸಚಿವ ನಿತಿನ್ ಗಡ್ಕರಿಯವರು ಸೂಚನೆ ನೀಡಿದ್ದರು.
ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸಲು, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಮೋಟಾರು ವಾಹನ ಕಾಯ್ದೆಯಲ್ಲಿ ತಿದ್ದುಪಡಿಯ ಅಧಿಸೂಚನೆಯನ್ನು ಹೊರಡಿಸಿದೆ. ಹೀಗಾಗಿ 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ಸರ್ಕಾರಿ ವಾಹನಗಳ ನೋಂದಣಿಯನ್ನು ಕಡ್ಡಾಯವಾಗಿ ರದ್ದುಗೊಳಿಸಲಾಗುತ್ತದೆ. ನೋಂದಣಿಯನ್ನು ನವೀಕರಿಸಿದ (15 ವರ್ಷಗಳ ನಂತರ) ವಾಹನಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಎಲ್ಲಾ ಹಳೆಯ ವಾಹನಗಳನ್ನು ನೋಂದಾಯಿತ ಸ್ಕ್ರ್ಯಾಪ್ ಕೇಂದ್ರದಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ.
ಕೇಂದ್ರ ಸರ್ಕಾರದ ವಾಹನಗಳು, ರಾಜ್ಯ ಸರ್ಕಾರದ ವಾಹನಗಳು, ಕೇಂದ್ರಾಡಳಿತ ಪ್ರದೇಶಗಳ ವಾಹನಗಳು, ನಿಗಮಗಳ ವಾಹನಗಳು, ರಾಜ್ಯ ಸಾರಿಗೆಯ ವಾಹನಗಳು, ಪಿಎಸ್ಯುಗಳ ವಾಹನಗಳು (ಸಾರ್ವಜನಿಕ ವಲಯದ ಉದ್ಯಮಗಳು) ಮತ್ತು ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ವಾಹನಗಳು 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ವಾಹನಗಳನ್ನು ರದ್ದುಗೊಳಿಸಬೇಕಾಗುತ್ತದೆ. ಈ ಹೊಸ ಆದೇಶವು ಏಪ್ರಿಲ್ 1, 2023 ರಿಂದ ಅನ್ವಯವಾಗುತ್ತದೆ. ಆದರೆ, ಸೇನೆಯ ವಾಹನಗಳು ಇದರಲ್ಲಿ ಸೇರ್ಪಡೆಯಾಗುವುದಿಲ್ಲ ಎಂಬುದನ್ನು ಗಮನಿಸಬೇಕು.
ಕಳೆದ ವರ್ಷ ನವೆಂಬರ್ನಲ್ಲಿ ರಸ್ತೆ ಸಾರಿಗೆ ಸಚಿವಾಲಯವು ಕರಡು ಪ್ರತಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ 15 ವರ್ಷಗಳ ಹಳೆಯ ವಾಹನಗಳನ್ನು ರದ್ದುಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಈ ನಿಯಮವನ್ನು ನಿಗಮಗಳು ಮತ್ತು ಸಾರಿಗೆ ಇಲಾಖೆಯ ಬಸ್ಗಳು ಮತ್ತು ವಾಹನಗಳಿಗೂ ಅನ್ವಯವಾಗಲಿದೆ ಎನ್ನಲಾಗಿತ್ತು. ಈ ಬಳಿಕ ಸರ್ಕಾರವು 30 ದಿನಗಳಲ್ಲಿ ಕರಡು ಕುರಿತು ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಕೋರಿದ್ದು. ಈಗ ಸರ್ಕಾರ ಈ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.