ತನ್ನ ಸ್ಟಾರ್ಟ್ ಅಪ್ ಉದ್ಯಮಕ್ಕೆ ಗಂಡನನ್ನು ಕರೆದ ಪತ್ನಿ | ನನ್ನ ಪ್ಯಾಕೇಜ್ ಭರಿಸಲು ನಿಂಗೆ ಆಗತ್ತಾ ಅಂದವನಿಗೆ ಪತ್ನಿ ಕೊಟ್ಳು 1.5 ಕೋಟಿ ಸಂಬಳದ ಆಫರ್ !!

ಒಂದು ಕಾಲದಲ್ಲಿ ಕೈಯಲ್ಲಿ ಬರಿ ಪದವಿ ಹಿಡಿದು ಕೆಲಸಕ್ಕಾಗಿ ಅಲೆಯುತ್ತಿದ್ದ ಮಹಿಳೆಯೊಬ್ಬಳು ಇಂದು ಭಾರತ ಸೇರಿ ಹತ್ತಾರು ದೇಶಗಳಲ್ಲಿ ತನ್ನ ಕಂಪೆನಿಯ ಕಛೇರಿಗಳನ್ನ ತೆರಿದಿದ್ದಾಳೆ ಅಂದ್ರೆ ನಂಬ್ತೀರಾ? ತನ್ನ ಕಂಪೆನಿಯಲ್ಲಿ ಸ್ವಂತ ಗಂಡನಿಗೆ ಸುಮಾರು ಒಂದೂವರೆ ಕೋಟಿ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿದ್ದಾಳೆ ಎಂದರೆ ಆಶ್ಚರ್ಯ ಆಗುತ್ತದೆಯಾ? ಕೇವಲ ಸ್ಕ್ರ್ಯಾಪ್ ಕಾಗದಗಳನ್ನು ಬಳಸಿ ಸಾವಿರಾರು ಕೋಟಿ ಗಳಿಸುವುದರೊಂದಿಗೆ ಜಗತ್ತಿನ ಕೋಟ್ಯಾದೀಶ ಮಹಿಳೆಯರಲ್ಲಿ ಒಬ್ಬರಾದ ಈ ಭಾರತೀಯ ನಾರಿ ಯಾರು ಗೊತ್ತಾ? ಇಷ್ಟೊಂದು ಆದಾಯ ಗಳಿಸಲು ಆಕೆ ಪಟ್ಟ ಪಾಡೇನು ಎಂದು ತಿಳಿಯುವ ಕುತೂಹಲವೆ? ಹಾಗಾದ್ರೆ ಈ ಸ್ಟೋರಿ ನೋಡಿ.

ಹೌದು, ಆರಂಭದಲ್ಲಿ ಇವಳ ಕೈಯಲ್ಲಿ ಕೇವಲ ತಾನು ಪಡೆದ MBA ಪದವಿ ಮಾತ್ರವಿತ್ತು. ಕೆಲಸದ ಅನುಭವ ಇಲ್ಲವೆಂದು ಕಂಪೆನಿಗಳೆಲ್ಲವೂ ಕೆಲಸ ಕೊಡಲು ನಿರಾಕರಿಸಿ ಬಿಟ್ಟವು. ಉದ್ಯೋಗಕ್ಕಾಗಿ ಅಲೆದು ಅಲೆದು ಈಕೆ ಸೋತು ಸುಣ್ಣವಾಗಿದ್ದಳು. ಆದರೆ ಛಲ ಬಿಡದ ಈ ಮಹಿಳೆ ತಾನೆ ಸ್ವತಃ ನಿರಂತರವಾದ ಸಂಶೋಧನೆಯಲ್ಲಿ ತೊಡಗಿಕೊಂಡ್ಳು. 10 ತಿಂಗಳ ಸಂಶೋಧನೆಯಲ್ಲಿ ಆಕೆಯ ಅದೃಷ್ಟ ಕುಲಾಯಿಸಿಯೇ ಬಿಡ್ತು. ಆ ಕೂಡಲೆ ವಿದೇಶಗಳಿಗೆ ಹಾರಿ ಲಕ್ಷಾಂತರ ರೂಪಾಯಿ ಗಳಿಕೆಯ ದಾರಿಯನ್ನು ಕಂಡುಕೊಂಡು ಬಿಟ್ಟಳು ಈ ಛಲಗಾರ್ತಿ. ಬಳಿಕ ಮದುವೆಯೂ ಆದಳು. ಗಂಡನು ಕೂಡ ದುಡಿಮೆಯಲ್ಲಿ ಎತ್ತಿದ ಕೈ. ಒಮ್ಮೆ ಅವಳು ತನ್ನ ಪತಿಯನ್ನು ತನ್ನ ವ್ಯಾಪಾರಕ್ಕೆ ಸೇರಲು ಕೇಳಿಕೊಂಡಳು. ತನ್ನ ಸ್ವಂತ ದುಡಿಮೆಯಲ್ಲೇ 80ಲಕ್ಷದಷ್ಟು ಸಂಪಾದಿಸುತ್ತಿದ್ದ ಆತ ಸಾಧ್ಯವಾಗುವುದಿಲ್ಲ ಎಂದುಬ್ಬಿಟ್ಟ. ಆದರೆ ಈಕೆ ತನ್ನ ಗಂಡನಿಗೆ 1.5 ಕೋಟಿ ಸಂಬಳ ಕೊಟ್ಟು ಕೆಲಸಕ್ಕೆ ಆಹ್ವಾನಿಸಿಬಿಟ್ಟಳು!

ಅಷ್ಟಕ್ಕೂ ಯಾರು ಈ ಮಹಿಳೆ? ತನ್ನ ಗಂಡನಿಗೆ ಕೋಟಿಗಟ್ಟಲೆ ಸಂಬಳ ಕೊಟ್ಟು ದುಡಿಸುತ್ತಿದ್ದಾಳೆ ಎಂದರೆ ಈಕೆ ಮಾಡುತ್ತಿರುವ ಬ್ಯುಸಿನೆಸ್ ಆದರೂ ಏನು ಎಂದು ತಿಳಿಯುವ ಬಯಕೆಯೆ? ಈಕೆ ಬೇರೆ ಯಾರೂ ಅಲ್ಲ. ಈಕೆಯ ಹೆಸರನ್ನು ನೀವೂ ಕೇಳಿದ್ದೀರಿ. ವಿಶ್ವಬ್ಯಾಂಕ್‌ನ ಮಾಜಿ ಪ್ರಮುಖ ಅರ್ಥಶಾಸ್ತ್ರಜ್ಞೆಯಾಗಿ, ಥಿಂಕ್ ಟ್ಯಾಂಕ್ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್‌ನ (ಎನ್‌ಸಿಎಇಆರ್) ಮಹಾನಿರ್ದೇಶಕರಾಗಿ ಭಾರತದ ಕೀರ್ತಿಯನ್ನು ಎಲ್ಲೆಡೆ ಹಬ್ಬಿಸಿದ ಇಂತಹ ಸಾಧಕಿಯ ಹೆಸರನ್ನು ಯಾರಾದರೂ ಕೇಳದೆ ಇರುತ್ತಾರೆಯೇ? ಹೌದು, ಅವರೇ ನಮ್ಮ ಭಾರತದ ಮೂಲದ ಪೂನಂ ಗುಪ್ತಾ! ಇದೇ ಗುಪ್ತಾ, ಸದ್ಯ ಪ್ರಪಂಚದ ಮೇಲೆ ತಮ್ಮ ಛಾಪನ್ನು ಮೂಡಿಸಲು ಬಯಸುವಂತಹ ಅನೇಕರಿಗೆ ಸ್ಪೂರ್ತಿ ದಾಯಾಕರಾಗಿದ್ದಾರೆ.

ಪೂನಂ ಗುಪ್ತಾ ಎಸ್‌ಆರ್‌ಸಿಸಿ ದೆಹಲಿಯಿಂದ ಅರ್ಥಶಾಸ್ತ್ರದಲ್ಲಿ ಪದವಿ ಮಾಡಿ ನಂತರ ಹಾಲೆಂಡ್‌ನ ಮಾಸ್ಟ್ರಿಚ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ MBA ಪದವಿ ಮುಗಿಸಿದ್ದರು. ಆಕೆಗೆ ಅರ್ಹತೆ ಇತ್ತು. ಆದರೂ ಕೂಡ ಎಲ್ಲಾ ಕಡೆ ಉದ್ಯೋಗಕ್ಕಾಗಿ ಅಲೆದು ಸುಸ್ತಾಗಿದ್ದರು. ಕಾರಣ ಆಕೆಗೆ ಅನುಭವ ಇರಲಿಲ್ಲ, ಹಾಗಾಗಿ ಯಾರೂ ಕೂಡ ಉದ್ಯೋಗ ನೀಡಲು ಮುಂದಾಗಲಿಲ್ಲ. ಇಷ್ಟಕ್ಕೆ ಸುಮ್ಮನಾಗದ ಪೂನಂ ತಾನೇ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ನಿರ್ಧರಿಸಿದಳು. ನಂತರ ನಿರಂತರ ಸಂಶೋಧನೆಯಲ್ಲಿ ತೊಡಗಿದಳು.

10 ತಿಂಗಳ ತೀವ್ರ ಸಂಶೋಧನೆಯ ನಂತರ ಅವಳು ಕೆಲವು ವಿಚಾರಗಳನ್ನು ಅರಿತಳು. ಅದೇನೆಂದರೆ ಮಾರುಕಟ್ಟೆಯಲ್ಲಿ ಉತ್ತಮ ಉತ್ಪನ್ನವನ್ನು ಮಾರಾಟ ಮಾಡುವ ಕಂಪನಿಗಳು ಟನ್ಗಟ್ಟಲೆ ಸ್ಕ್ರ್ಯಾಪ್ ಕಾಗದವನ್ನು ಎಸೆಯುತ್ತವೆ. ಅಲ್ಲದೆ, ಕಂಪನಿಗಳು ಈ ಕಾಗದವನ್ನು ವಿಲೇವಾರಿ ಮಾಡಲು ಕೋಟಿಗಟ್ಟಲೆ ಖರ್ಚು ಮಾಡುತ್ತವೆ. ಆದರೆ ಈ ತ್ಯಾಜ್ಯ ಕಾಗದವನ್ನು ಮರುಬಳಕೆ ಮಾಡಬಹುದು. ಅದು ಹೇಗೆ ಎಂಬುದನ್ನು ಅವಳು ತಿಳಿದಳು. ಇದಾದ ಬಳಿಕ ಅವಳ ಮೊದಲ ಕ್ಲೈಂಟ್ ಇಟಾಲಿಯನ್ ಕಂಪನಿ. ಅದರಿಂದ ಸ್ಕ್ರಾಪ್ ತರಿಸಿಕೊಂಡ ಪೂನಂ ಇದರ ಖರ್ಚನ್ನು ನಂತರ ಪಾವತಿಸುವುದಾಗಿ ತಿಳಿಸಿದ್ದಳು. ಇಟಾಲಿಯನ್ ಕಂಪೆನಿಗೆ ಇದು ಈಗಾಗಲೇ ಅನಿವಾರ್ಯ ಆದ್ದರಿಂದ ಅವರೂ ಒಪ್ಪಿಕೊಂಡರು. ಪೂನಂ ಮೊದಲೇ ಭಾರತದಲ್ಲಿ ಈ ಕುರಿತು ಖರೀದಿದಾರರನ್ನು ಕಂಡುಕೊಂಡಿದ್ದರಿಂದ ತನ್ನ ಮೊದಲ ಒಪ್ಪಂದದಲ್ಲಿ ಕಾಗದದ ಎರಡು ಕಂಟೈನರ್‌ಗಳಿಗೆ ಪ್ರತಿಯಾಗಿ 40 ಲಕ್ಷ ರೂಪಾಯಿ ಆದಾಯವನ್ನು ಗಳಿಸಿದಳು!

ನಂತರ ಆಕೆ ಇಟಲಿ, ಫಿನ್‌ಲ್ಯಾಂಡ್, ಸ್ವೀಡನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಕಂಪನಿಗಳಿಂದ ಸ್ಕ್ರ್ಯಾಪ್ ಪೇಪರ್ ಖರೀದಿಸಲು ಪ್ರಾರಂಭಿಸಿದಳು. ಬಳಿಕ ಪೂನಂ 2002 ರಲ್ಲಿ ಭಾರತದಿಂದ ಸ್ಕಾಟ್ಲೆಂಡ್‌ಗೆ ವಲಸೆ ಬಂದರು. 2004 ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ಪಿಜಿ ಪೇಪರ್ ಎಂಬ ಕಂಪನಿಯನ್ನು ನೋಂದಾಯಿಸಿದರು. ಅವಳ ಲಾಭ ಘಾತೀಯವಾಗಿ ಹೆಚ್ಚುತ್ತಿತ್ತು. ಅವಳ ಈ ಬ್ಯುಸಿನೆಸ್ ಪ್ರಯಾಣದಲ್ಲಿ ಪಾಲ್ಗೊಳ್ಳಲು ಒಬ್ಬ ಬಾಳ ಸಂಗಾತಿಯ ಅಗತ್ಯವಿತ್ತು. ಹಾಗಾಗಿ ಸ್ಕಾಟ್ಲೆಂಡ್‌ನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪುನೀತ್ ಎಂಬುವವರನ್ನು ವಿವಾಹವಾದರು.

ಮುಂದೆ ಕಂಪನಿಯು ಉನ್ನತ ಮಟ್ಟದಲ್ಲಿಯೇ ಬೆಳೆಯುತ್ತಿತ್ತು‌. ಯತೇಚ್ಛಾದ ಲಾಭ ದೊರಕುತಿತ್ತು. ಈ ಸಮಯದಲ್ಲಿ ಪೂನಂಗೆ ತನ್ನ ಗಂಡ ಪುನೀತ್ ನನ್ನು ತನ್ನ ಬ್ಯುಸಿನೆಸ್ ವ್ಯವಹಾರಗಳಿಗೆ ಸೇರಿಕೊಳ್ಳೋಣ ಎಂಬ ಆಲೋಚನೆ ಬಂದಿದೆ. ಹಾಗಾಗಿ ಪುನೀತ್ ಗೆ ಈ ಉದ್ಯಮಕ್ಕೆ ಸೇರುವಂತೆ ಕೇಳಿಕೊಂಡಿದ್ದಾಳೆ. ಆದರೆ ಪುನೀತ್ ‘ನೋಡು ನನ್ನ ದುಡಿಮೆಯ ಪ್ಯಾಕೇಜ್ ಸುಮಾರು 80 ಲಕ್ಷದಷ್ಟಿದೆ. ನಿನ್ನೊಂದಿಗೆ ಕೈ ಜೋಡಿಸಿದರೆ ಏನೂ ಇಲ್ಲದಂತಾಗುತ್ತೆ. ನನ್ನನ್ನು ಯಾವುದಕ್ಕೂ ಕರೆಯಬೇಡ’ ಎಂದು ತಾಕೀತು ಮಾಡಿದ್ದಾನೆ. ಇಷ್ಟಕ್ಕೆ ಸುಮ್ಮನಿರದ ಪೂನಂ ಗುಪ್ತಾ ಗಂಡನ ಬಳಿ ಆರು ತಿಂಗಳ ಕಾಲ ಕಂಪನಿಯಲ್ಲಿ ತಾತ್ಕಾಲಿಕವಾಗಿ ಕೆಲಸಮಾಡಲು ಕೇಳಿಕೊಂಡಿದ್ದಾಳೆ. ಕೊನೆಗೆ ಇದಕ್ಕೆ ಒಪ್ಪಿ ಪುನೀತ್ 6 ತಿಂಗಳು ಕೆಲಸ ಮಾಡಿದರು. ಇದರಿಂದ ಸಂತೋಷ ಗೊಂಡ ಪುನೀತ್ ನಂತರವೂ ಮಡದಿಯೊಂದಿಗೇ ಕೆಲಸ ಮಾಡಲು ಒಪ್ಪಿಕೊಂಡರು. ಅಲ್ಲದೆ ಪೂನಂ, ತನ್ನ ಪತಿಗೆ 1.5 ಕೋಟಿ ಸಂಬಳ ನೀಡಿದರು. ನಂತರ ದಂಪತಿಗಳಿಬ್ಬರು ಸೇರಿ ತಮ್ಮ ವ್ಯಾಪಾರವನ್ನು ವಿಸ್ತರಿಸಿದರು. ಇದರಿಂದ ಅವರ ಕಂಪೆನಿ 1000 ಕೋಟಿ ಲಾಭದೊಂದಿಗೆ ಮುನ್ನಡೆಯಿತು.

ಮನೆಯ ಕಛೇರಿಯಿಂದಲೇ ಆರಂಭವಾದ ವ್ಯಾಪಾರ ವಹಿವಾಟು ಇಂದು ವಿಶ್ವವ್ಯಾಪಿಯಾಗಿದೆ. 2015 ರಿಂದ ಅವರ ಪ್ರಧಾನ ಕಛೇರಿಯನ್ನು ಸ್ಕಾಟ್ಲೆಂಡ್‌ನ ಗ್ರೀನಾಕ್‌ನಲ್ಲಿರುವ ಕಸ್ಟಮ್ ಹೌಸ್ ನಲ್ಲಿದೆ. ಈಗ ಅವರು PG ವರ್ಲ್ಡ್, SAPP ಹೋಲ್ಡಿಂಗ್ಸ್, SAPP ಇಂಟರ್ನ್ಯಾಷನಲ್, SAPP ಪ್ರಾಪರ್ಟಿ, ಎನ್ವಿಸೇಜ್ ಡೆಂಟಲ್ ಹೆಲ್ತ್, ಪುನವ್ ಸೇರಿದಂತೆ 9 ಕಂಪನಿ ಮತ್ತು ಭಾರತ, ಯುಎಸ್, ಚೀನಾ, ಸ್ವೀಡನ್, ಟರ್ಕಿ ಸೇರಿದಂತೆ 7 ದೇಶಗಳಲ್ಲಿ ಕಚೇರಿಗಳನ್ನು ಹೊಂದಿದ್ದಾರೆ. ಅಲ್ಲದೆ ಅವರು 60 ದೇಶಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿದ್ದಾರೆ. ಸದ್ಯ ಆಕೆಯ ವಾರ್ಷಿಕ ವಹಿವಾಟು 60 ಮಿಲಿಯನ್ ಡಾಲರ್ ಆಗಿದೆ!

Leave A Reply

Your email address will not be published.