ಬಾಲಿವುಡ್‌ಗೆ ಹೊರಟ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ! ಯಾವ ಸಿನೆಮಾದಲ್ಲಿ ನಟಿಸಲಿದ್ದಾರೆ, ನಿರ್ದೇಶಕರು ಯಾರು ಗೊತ್ತಾ?

ಕಾಂತಾರ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾಗಿ, ನ್ಯಾಷನಲ್ ಲೆವೆಲ್ ಅಲ್ಲಿ ಎಲ್ಲರೂ ಗುರುತಿಸುವಂತೆ ಮಿಂಚಿದ ನಟಿ ಸಪ್ತಮಿ ಗೌಡ. ‘ಪಾಪ್‌ಕಾರ್ನ್‌ ಮಂಕಿ ಟೈಗರ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಪ್ತಮಿ ಕೇವಲ ಎರಡು ಸಿನೆಮಾ ಮಾಡುವುದರ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಇದೀಗ ಸಪ್ತಮಿ ಗೌಡ ಅವರಿಗೆ ಬಂಪರ್ ಆಫರ್ ಬಂದಿದ್ದು ಬಾಲಿವುಡ್‌ನಲ್ಲಿ ನಟಿಸುವ ಚಾನ್ಸ್ ಸಿಕ್ಕಿದೆ.

ಕಳೆದ ವರ್ಷ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮಾಡಿ, ಹವಾ ಎಬ್ಬಿಸಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸಲಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರು ಈ ಬಾರಿ ಕೊರೊನಾ ವ್ಯಾಕ್ಸಿನ್ ಕುರಿತು ಸಿನಿಮಾ ಮಾಡಲಿದ್ದು, ಅದಕ್ಕೆ ‘ದಿ ವ್ಯಾಕ್ಸಿನ್‌ ವಾರ್’ ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾದ ಒಂದು ಮುಖ್ಯ ಪಾತ್ರದಲ್ಲಿ ನಟಿ ಸಪ್ತಮಿ ಗೌಡ ನಟಿಸುವುದು ಖಚಿತವಾಗಿದೆ.

ಸದ್ಯ ಲಕ್ನೌ ಶೆಡ್ಯೂಲ್‌ ಮುಗಿಸಿರುವ ವಿವೇಕ್ ಅಗ್ನಿಹೋತ್ರಿ, ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಶೂಟಿಂಗ್ ಆರಂಭಿಸಲಿದ್ದಾರೆ. ಆಗ ಸಪ್ತಮಿ ಗೌಡ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವನ್ನು ಪಲ್ಲವಿ ಜೋಶಿ ನಿರ್ಮಾಣ ಮಾಡುತ್ತಿದ್ದು, ಅವರೇ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಅನುಪಮ್ ಖೇರ್, ನಾನಾ ಪಾಟೇಕರ್, ದಿವ್ಯಾ ಸೇಠ್ ಮುಂತಾದವರು ನಟಿಸುತ್ತಿದ್ದಾರೆ.

ವಿವೇಕ್ ಅವರಿಗೆ ದಕ್ಷಿಣ ಭಾರತ ಸಿನಿಮಾ, ಉತ್ತರ ಭಾರತದ ಸಿನಿಮಾ ಅನ್ನೋ ಭೇದವಿಲ್ಲವಂತೆ. ಅಂತ ಮಿತಿಗಳನ್ನು ಒಡೆದು ಹಾಕಿ ಇಂಡಿಯನ್ ಸಿನಿಮಾ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ‘ನಾನು ಇಂಡಿಯನ್ ಸಿನಿಮಾ ಮಾಡುತ್ತಿದ್ದೇವೆ. ಅದಕ್ಕಾಗಿ ಸರಿಯಾದ ಕಲಾವಿದರ ಆಯ್ಕೆಯನ್ನು ಮಾಡಿಕೊಳ್ಳುತ್ತಿದ್ದೇವೆ…’ ಎಂದಿದ್ದಾರೆ ವಿವೇಕ್. ‘ದಿ ವ್ಯಾಕ್ಸಿನ್‌ ವಾರ್’ ಸಿನಿಮಾವು ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಆಗಸ್ಟ್ 15ರಂದು ತೆರೆಗೆ ಬರಲಿದೆ.

ಸಿನೆಮಾ ಕಥೆ ಕುರಿತು ಮಾತನಾಡಿದ ಅಗ್ನಿಹೋತ್ರಿ ‘ವ್ಯಾಕ್ಸಿನ್ ಕುರಿತಂತೆ ಸಂಶೋಧನೆ ಶುರು ಮಾಡಿದ್ದೇನೆ. ವ್ಯಾಕ್ಸಿನ್ ತಯಾರಿಸಿದ ವಿಜ್ಞಾನಿಗಳ ಬಗ್ಗೆ ತಿಳಿದುಕೊಳ್ಳಲಾಗಿದೆ. ಈ ವ್ಯಾಕ್ಸಿನ್ ತಯಾರಿಕೆಯಲ್ಲಿ ನಮ್ಮ ವಿಜ್ಞಾನಿಗಳ ಶ್ರಮ, ತ್ಯಾಗ ಬಗ್ಗೆ ಈ ಸಿನಿಮಾದಲ್ಲಿ ಹೇಳಲಿದ್ದೇವೆ. ನಾವು ಅತಿವೇಗದ, ಅಗ್ಗದ ಮತ್ತು ಸುರಕ್ಷಿತವಾದ ಲಸಿಕೆಯನ್ನು ತಯಾರಿಸುವ ಮೂಲಕ ಮಹಾಶಕ್ತಿಗಳ ವಿರುದ್ಧ ಗೆದ್ದಿದ್ದೇವೆ. ಪ್ರತಿಯೊಬ್ಬ ಭಾರತೀಯನು ತನ್ನ ದೇಶದ ಬಗ್ಗೆ ಹೆಮ್ಮೆ ಪಡುವಂತಹ ಈ ಕಥೆಯನ್ನು ಹೇಳಬೇಕಿದೆ. ಇದು ನಮಗೆ ತಿಳಿದಿರದ ಜೈವಿಕ ಯುದ್ಧದ ಬಗ್ಗೆ ಭಾರತದ ಮೊದಲ ಶುದ್ಧ ವಿಜ್ಞಾನ ಸಿನಿಮಾವಾಗಿದೆ’ ಎಂದರು.

ಮಾಧ್ಯಮವೊಂದಕ್ಕೆ ಸಪ್ತಮಿ ಗೌಡ ನಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ವಿವೇಕ್ ಅಗ್ನಿಹೋತ್ರಿ, ನಾನು ಕಾಂತಾರ ಸಿನಿಮಾವನ್ನು ನೋಡಿದ್ದೆ. ಅದರಲ್ಲಿ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಅವರ ನಟನೆಯು ನನಗೆ ತುಂಬ ಇಷ್ಟವಾಗಿತ್ತು. ಹಾಗಾಗಿ, ಅವರನ್ನು ಸಿನಿಮಾಕ್ಕೆ ನಮ್ಮ ಆಯ್ಕೆ ಮಾಡಬೇಕು ಎಂದು ನಿರ್ಧರಿಸಿದೆ. ನಾನು ಈ ಬಗ್ಗೆ ಸಪ್ತಮಿಗೆ ಕರೆಮಾಡಿ, ಅಪ್ರೋಚ್ ಮಾಡಿದೆ. ಕೂಡಲೇ ಅವರು ನಟಿಸಲು ಒಪ್ಪಿಕೊಂಡರು. ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ ನೀಡಿದೆ’ ಎಂದು ಹೇಳಿದ್ದಾರೆ.

Leave A Reply

Your email address will not be published.