ರಾಜ್ಯ ಸರಕಾರದ ಹೊಸ ಮೀಸಲಾತಿ ಸೂತ್ರಕ್ಕೆ ಹೈಕೋರ್ಟ್ ಬ್ರೇಕ್! ಸರ್ಕಾರಕ್ಕೆ ಸಿಕ್ತು ಬಿಗ್ ರಿಲೀಫ್!
ರಾಜ್ಯದಲ್ಲಿ ಮೀಸಲಾತಿಯ ಕಾವು ಜೋರಾದ ಹಿನ್ನೆಲೆಯಲ್ಲಿ ಸರ್ಕಾರವು ಇದರಿಂದ ಪಾರಾಗಲು ಹೊಸ ಮೀಸಲಾತಿ ಪ್ರವರ್ಗಗಳನ್ನೇ ಸೃಷ್ಟಿಸಿ ಸಮುದಾಯಗಳ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತು. ಆದರೆ ಪಂಚಮಸಾಲಿ ಸಮುದಾಯ ಹೊಸ ಮೀಸಲಾತಿಯನ್ನು ತಿರಸ್ಕರಿಸಿ 2ಎ ಪ್ರವರ್ಗದಲ್ಲೇ ಮೀಸಲಾತಿ ನೀಡಬೇಕೆಂದು ಆಗ್ರಹಿಸಿತ್ತು. ಇದೇಗ ಕರ್ನಾಟಕ ಹೈಕೋರ್ಟ್ ಕೂಡ ಹೊಸ ಮೀಸಲಾತಿ ವರ್ಗಗಳಿಗೆ ಬ್ರೇಕ್ ಹಾಕುವಂತೆ ತಾಕೀತ ಮಾಡಿದೆ.
ರಾಜ್ಯದಲ್ಲಿ ಸರ್ಕಾರವು SC ಮತ್ತು ST ಸಮುದಾಯಗಳಿಗೆ ಕೆಲವು ತಿಂಗಳ ಹಿಂದೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಗೆ ಮಾಡಿತ್ತು. ಇದರ ಬೆನ್ನಲ್ಲೇ ಪಂಚಮಸಾಲಿ ಲಿಂಗಾಯತರು ಮತ್ತು ಒಕ್ಕಲಿಗರು ಸರ್ಕಾರದ ಬೆನ್ನು ಬಿದ್ದು ತಮಗೂ ಮೀಸಲಾತಿ ಹೆಚ್ಚಿಸಬೇಕು, 2ಎ ಮೀಸಲಾತಿ ನೀಡಬೇಕೆಂದು ಪಟ್ಟು ಹಿಡಿದಿದ್ದವು.
ಈ ಸಲುವಾಗಿ ರಾಜ್ಯ ಸರ್ಕಾರ ಚುನಾವಣೆ ಹಿನ್ನಲೆಯಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಡಿಸೆಂಬರ್ 29ರ ಸಂಪುಟ ಸಭೆಯಲ್ಲಿ ಚರ್ಚಿಸಿ ಈ ಎರಡೂ ಸಮುದಾಯಗಳಿಗೋಸ್ಕರ ಹೊಸದಾಗಿ 2ಸಿ, 2ಡಿ ಮೀಸಲಾತಿಯನ್ನು ಸೃಷ್ಟಿಸಿ ಮೀಸಲಾತಿ ಕೊಡುವುದಾಗಿ ಭರವಸೆ ನೀಡಿತ್ತು. ಇದೀಗ ಸರ್ಕಾರ ಜಾರಿಗೆ ತಂದಿದ್ದ ಪ್ರತ್ಯೇಕ ಮೀಸಲಾತಿಗೆ ಹೈಕೋರ್ಟ್ ಬ್ರೇಕ್ ಹಾಕಿದೆ. ರಾಜ್ಯ ಸರ್ಕಾರ ಹೊಸದಾಗಿ ಸೃಷ್ಟಿಸಿದ್ದ ಪ್ರವರ್ಗಗಳಿಗೆ ಹೈಕೋರ್ಟ್ ತಡೆ ನೀಡಿ ಯಥಾ ಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿದೆ.
ಸಂಪುಟ ಸಭೆಯಲ್ಲಿ ಸರ್ಕಾರ ಕೈಗೊಂಡ ಹೊಸ ಮೀಸಲಾತಿ ನಿರ್ಧಾರ ಪ್ರಶ್ನಿಸಿ ರಾಘವೇಂದ್ರ ಎನ್ನುವವರು ಹೈಕೋರ್ಟ್ ಮೆಟ್ಟಿಲೇರಿ ಪಿಐಎಲ್ ದಾಖಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಹೊಸ ಮೀಸಲಾತಿ ವರ್ಗಗಳಿಗೆ ಬ್ರೇಕ್ ಹಾಕಿದೆ. ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. ಇದನ್ನು ಆಯೋಗ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದು, ಸರ್ಕಾರ ಈ ವರದಿ ಪರಿಶೀಲಿಸಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವರದಿ ನೀಡಲು ಸ್ವಲ್ಪ ಕಾಲಾವಕಾಶ ನೀಡಬೇಕು. ಹೀಗಾಗಿ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು. ಇದನ್ನು ನ್ಯಾಯಾಲಯವು ಪುರಸ್ಕರಿಸಿ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿದೆ.
ಹೈಕೋರ್ಟ್ ನೀಡಿದ ತಡೆಯಾಜ್ಞೆ ಆದೇಶ ಸರ್ಕಾರವನ್ನು ಬೀಸೋ ದೊಣ್ಣೆಯಿಂದ ಪಾರು ಮಾಡಿದೆ ಎಂದೇ ಹೇಳಬಹುದು. ಯಾಕಂದ್ರೆ ಸರ್ಕಾರ ಇನ್ನೂ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ. ಹೀಗಾಗಿ ಮೀಸಲಾತಿ ಯಾವ ರೀತಿ ಹಂಚಿಕೆ ಆಗುತ್ತೆ ಎಂಬುದರ ಕಲ್ಪನೆ ಯಾರಲ್ಲೂ ಇಲ್ಲ. ಒಂದೊಮ್ಮೆ ಅಧಿಸೂಚನೆ ಪ್ರಕಟವಾಗಿದ್ದರೆ ಭಾರೀ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇತ್ತು.