ಹೂವು ಕದಿಯಲು ನಾರಿಯ ವೇಷ ಧರಿಸಿದ ಖದೀಮ ಕಳ್ಳ | ಅಷ್ಟಕ್ಕೂ ಆ ಹೂವಿನಲ್ಲೇನಿತ್ತು ವಿಶೇಷತೆ?
ಕಾಯಕವೇ ಕಳ್ಳತನ ಆದರೆ ಅವರಿಗೆ ಏನಾದರೂ ಸರಿ ಒಟ್ಟಿನಲ್ಲಿ ಜೇಬಿನಲ್ಲಿ ಹಣ ತುಂಬಿದರೆ ಆಯ್ತು. ಹೌದು ಹಾಗೆಯೇ ಇಲ್ಲೊಬ್ಬ ಹೂವಿನ ಗಿಡಗಳನ್ನು ಕದ್ದು ಸಿಕ್ಕಿಬಿದ್ದಿದ್ದಾನೆ. ಹೌದು ಸದ್ಯ ಈತ ಕದ್ದಿರುವ ಹೂವಿನ ಗಿಡ ಸಾಮಾನ್ಯವಾದುದಲ್ಲ.
ವಿಲಾಸಿನಿ ಭಾಯಿ ಎಂಬುವವರು ಕಳೆದ ಕೆಲ ವರ್ಷಗಳಿಂದ ಅಂತೂರಿಯಮ್ ಹೂವಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ತಮ್ಮ ಮನೆಯಂಗಳದಲ್ಲಿ ಬೆಲೆಬಾಳುವ ವಿವಿಧ ಮಾದರಿಯ ಅಂತೂರಿಯಮ್ ಹೂವಿನ ಕುಂಡಗಳನ್ನು ಜೋಡಿಸಿಟ್ಟಿದ್ದರು. ಇದನ್ನು ಅರಿತುಕೊಂಡಿದ್ದ ಬಂಧಿತ ಆರೋಪಿ ವಿನೀತ್, ಮನೆಯಿಂದ ಸುಮಾರು 200 ಅಂತೂರಿಯಮ್ ಹೂಕುಂಡಗಳನ್ನು ಕದ್ದೊಯ್ದಿದ್ದಾನೆ.
ಸದ್ಯ ಬರೋಬ್ಬರಿ ಎರಡು ಲಕ್ಷ ರೂಪಾಯಿ ಮೌಲ್ಯದ ಅಂತೂರಿಯಮ್ ಹೂವಿನ ಗಿಡಗಳನ್ನು ಕದ್ದ 28ವರ್ಷದ ವಿನೀತ್ ಕ್ಲೀಟಸ್ ಎಂಬ ಆರೋಪಿಯನ್ನು ಕೇರಳದ ರಾಜ್ಯದ ಕೊಲ್ಲಂ ಚವರ ಗ್ರಾಮದ ಪುದುಕ್ಕಾಡ್ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆದರೆ ಆರೋಪಿ ವಿನೀತ್ ಅಂತೂರಿಯಮ್ ಹೂಕುಂಡಗಳನ್ನು ಕಳ್ಳತನ ನಡೆಸಲು ವಿಭಿನ್ನ ಆಲೋಚನೆ ಮಾಡಿದ್ದಾನೆ. ಯಾರಿಗೂ ಅನುಮಾನ ಬರಬಾರದೆಂದು ಮಹಿಳೆಯ ವೇಷ ತೊಟ್ಟು ಹೂಕುಂಡಗಳನ್ನು ಕಳ್ಳತನ ಮಾಡಿ ಹೊರ ಸಾಗಿಸಿದ್ದಾನೆ.
ಸದ್ಯ ಮುಂಜಾಗ್ರತೆಗೆಂದು ವಿಲಾಸಿನಿ ಭಾಯಿ ತಮ್ಮ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಕಳ್ಳತನ ಮಾಡುವ ದೃಶ್ಯ ಸೆರೆಯಾಗಿದೆ. ಕೂಡಲೇ ಅಂತೂರಿಯಮ್ ಹೂಕುಂಡಗಳು ಕಳ್ಳತನವಾಗಿರುವ ಬಗ್ಗೆ ವಿಲಾಸಿನಿ ಭಾಯಿ ಪೊಲೀಸ್ ದೂರು ನೀಡಿದ್ದಾರೆ ಅದರಂತೆ ಪೊಲೀಸರು ಸಿಸಿಟಿವಿ ಪರಿಶೀಲಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಈ ವೇಳೆ ಖದೀಮ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ತಂಡ ರಚಿಸಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಕದ್ದೊಯ್ದ ಹೂಕುಂಡಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮಾರಾಟ ಮಾಡಲು ಯತ್ನಿಸಿರುವುದಾಗಿ ಬಾಯ್ದಿಟ್ಟಿದ್ದಾನೆ ಎಂದು ನೆಯ್ಯಟಿಂಕರ ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾವ ರೀತಿ ಕಳ್ಳತನ ಮಾಡಿದರು ಒಂದಲ್ಲಾ ಒಂದು ರೀತಿಯಲ್ಲಿ ಕಳ್ಳ ಸಿಕ್ಕಿ ಬೀಳಲೇ ಬೇಕು. ಶಿಕ್ಷೆ ಅನುಭವಿಸಲೇ ಬೇಕು. ತಪ್ಪು ಮಾಡಿದಲ್ಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ.