ಕಡಿಮೆ ಪ್ರಮಾಣದ ಅಲ್ಕೋಹಾಲ್ ಸೇವನೆಯೂ ಕ್ಯಾನ್ಸರ್‌ಗೆ ಕಾರಣವಾಗುತ್ತೆ – WHO ಎಚ್ಚರಿಕೆ

ಎಣ್ಣೆ ಪ್ರಿಯರು ಒಮ್ಮೆಯಾದರೂ ಬಾರ್ ಗೆ ಎಂಟ್ರಿ ಕೊಡದೆ ಇದ್ದರೆ ಮನಕ್ಕೆ ಸಮಾಧಾನವೇ ಇರುವುದಿಲ್ಲ. ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!!.

 

ಕಂಠ ಪೂರ್ತಿ ಎಣ್ಣೆ ಕುಡಿದರೆ ವಾಸ್ತವ ಪ್ರಪಂಚದ ಆಗು ಹೋಗುಗಳ ಪರಿವೇ ಇರುವುದಿಲ್ಲ ಎನ್ನುವ ವಿಚಾರ ಗೊತ್ತಿರುವಂತದ್ದೆ!!!.. ಕುಡಿದ ಮತ್ತಿನಲ್ಲಿ ಮದ್ಯ ಪ್ರಿಯರು ಮಾಡುವ ಜಗಳ, ರಾದ್ದಂತ ಮಾಡಿಕೊಳ್ಳುವುದು ನೋಡಿರುತ್ತೇವೆ. ಅಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಕೆಲವೊಬ್ಬರು ಸ್ಪಲ್ಪ ಕುಡಿದರೆ ಏನು ತೊಂದರೆಯಾಗದು ಎಂದುಕೊಳ್ಳುತ್ತಾರೆ. ಆದರೆ ವಾಸ್ತವದ ಬಗ್ಗೆ ಕಡಿಮೆ ಪ್ರಮಾಣದ ಅಲ್ಕೋಹಾಲ್ ಸೇವನೆಯೂ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು WHO ಎಚ್ಚರಿಕೆ ಸೂಚಿಸಿದೆ.

ಧೂಮಪಾನ, ಮದ್ಯಪಾನ, ಅಮಲು ಪದಾರ್ಥಗಳ ಸೇವನೆ ಹೆಚ್ಚಿನವರ ಪಾಲಿಗೆ ಚಟವಾಗಿ ಪರಿಣಮಿಸುತ್ತದೆ. ಈ ಹವ್ಯಾಸಗಳು ಕೆಲವೊಮ್ಮೆ ಮಾರಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತದೆ ಎಂಬ ಮಾಹಿತಿ ಹೆಚ್ಚಿನವರಿಗೆ ತಿಳಿದಿಲ್ಲ. ಇನ್ನೂ ಕೆಲವರು ಗೊತ್ತಿದ್ದರೂ ನಮಗೇನು ಆಗದು ಎಂಬ ಭಂಡ ಧೈರ್ಯದಿಂದ ಈ ಹವ್ಯಾಸವನ್ನು ರೂಡಿಸಿಕೊಳ್ಳುತ್ತಾರೆ.

ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದ್ದು, ಮದ್ಯದ ಬಾಟಲ್‌ ಗಳಲ್ಲಿ ಈ ಬಗ್ಗೆ ಸೂಚನೆ ಹಾಕಿದ್ದರೂ ಕ್ಯಾರೇ ಎನ್ನದೆ ಕೆಲವೊಬ್ಬರು ನಾವೇನು ಹೆಚ್ಚು ಕುಡಿಯಲ್ಲ, ಕಡಿಮೆ ಕುಡಿದರೆ ಏನು ಆಗದು ಎಂದು ಮದ್ಯ ಸೇವನೆ ಮಾಡಿ ನಾವು ಮಾಡಿದ್ದೆ ಸರಿ ಅನ್ನೋ ವಾದ ಕೂಡ ಮಾಡುತ್ತಾರೆ. ಆದರೆ , WHO ಸ್ಪಲ್ಪ ಪ್ರಮಾಣದಲ್ಲಿ ಮದ್ಯ ಸೇವಿಸಿದರೂ ಕೂಡ ಇದು ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆ ಇದೆ ಎಂಬ ಆಘಾತಕಾರಿ ಮಾಹಿತಿಯನ್ನ ತಿಳಿಸಿದೆ.

ಅಲ್ಕೋಹಾಲ್ ಕ್ಯಾನ್ಸರ್‌ಗೆ ಹೇಗೆ ಕಾರಣವಾಗುತ್ತದೆ?
ಆಲ್ಕೋಹಾಲ್ ಸೇವಿಸಿದಾಗ ದೇಹವು (Body) ಅದನ್ನು ಅಸಿಟಾಲ್ಡಿಹೈಡ್ ಎಂಬ ರಾಸಾಯನಿಕವಾಗಿ ಪರಿವರ್ತಿಸುವುದಲ್ಲದೆ ಅಸಿಟಾಲ್ಡಿಹೈಡ್ ನಮ್ಮ ಜೀವಕೋಶಗಳಿಗೆ ಹಾನಿ ಮಾಡುವ ಸಾಧ್ಯತೆ ಇದ್ದು ಜೊತೆಗೆ ಈ ಹಾನಿಯನ್ನು ಸರಿಪಡಿಸದಂತೆ ಜೀವಕೋಶಗಳನ್ನು ಸ್ಥಗಿತಗೊಳಿಸಲುಬಹುದು.

ಅತಿ ಕಡಿಮೆ ಪ್ರಮಾಣದ ಅಲ್ಕೋಹಾಲ್ ಸೇವನೆ ಕೂಡ ಕರುಳಿನ ಕ್ಯಾನ್ಸರ್‌(Bowel cancer)ಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಎಚ್ಚರಿಕೆ ನೀಡಿದೆ. ಈ ಮೂಲಕ ಕಡಿಮೆ ಮದ್ಯಪಾನ ಮಾಡುವುದರಿಂದ ಆರೋಗ್ಯಕ್ಕೆ (Health) ಯಾವುದೇ ರೀತಿ ತೊಂದರೆಯಿಲ್ಲ ಎಂದು ಅಂದಾಜಿಸುವವರ ಮಾತನ್ನು ವಿಶ್ವ ಆರೋಗ್ಯ ಸಂಸ್ಥೆಯು ಅಲ್ಲಗಳೆದಿದ್ದು, ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್‌ನಲ್ಲಿ ಈ ಹೇಳಿಕೆಯನ್ನು ಪ್ರಕಟಿಸಲಾಗಿದೆ.

ಅತಿ ಕಡಿಮೆ ಪ್ರಮಾಣದ ಆಲ್ಕೋಹಾಲ್ ಸೇವನೆಯೂ ಆರೋಗ್ಯದ ಮೇಲೆ ಗಂಭೀರ ಸ್ವರೂಪದ ಪ್ರಭಾವ ಬೀರಲು ಕಾರಣವಾಗುವ ಜೊತೆಗೆ ಕ್ಯಾನ್ಸರ್‌ಗೂ ಕಾರಣವಾಗಲಿದೆ ಎಂದು ತಿಳಿಸಿದೆ. ಕರುಳಿನ ಕ್ಯಾನ್ಸರ್ ಮತ್ತು ಸ್ತ್ರೀ ಸ್ತನ ಕ್ಯಾನ್ಸರ್‌ನಂತಹ ಸಾಮಾನ್ಯವಾದವುಗಳನ್ನು ಒಳಗೊಂಡಂತೆ ಅಲ್ಕೊಹಾಲ್ ಕನಿಷ್ಠ ಏಳು ವಿಧದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಆಲ್ಕೋಹಾಲ್ ಈಸ್ಟ್ರೊಜೆನ್ ಮತ್ತು ಇನ್ಸುಲಿನ್‌ನಂತಹ ಕೆಲವು ಹಾರ್ಮೋನ್‌ಗಳ ಮಟ್ಟವನ್ನು ಏರಿಸುತ್ತದೆ. ಹಾರ್ಮೋನುಗಳು ರಾಸಾಯನಿಕ ಸಂದೇಶವಾಹಕಗಳಾಗಿದ್ದು ಹಾಗೂ ಹೆಚ್ಚಿನ ಮಟ್ಟಗಳು ಜೀವಕೋಶಗಳನ್ನು ಹೆಚ್ಚಾಗಿ ವಿಭಜಿಸುವ ಸಂಭವವಿದೆ. ಇದು ಕ್ಯಾನ್ಸರ್ ಕೋಶಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಹೆಚ್ಚಿಸುತ್ತದೆ.

ಆಲ್ಕೋಹಾಲ್ ಬಾಯಿ ಮತ್ತು ಗಂಟಲಿನ ಜೀವಕೋಶಗಳು ಹಾನಿಕಾರಕ ರಾಸಾಯನಿಕಗಳನ್ನು ಹೀರಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುವ ಜೊತೆಗೆ ಇದು ಕ್ಯಾನ್ಸರ್-ಉಂಟುಮಾಡುವ ವಸ್ತುಗಳು ಜೀವಕೋಶದೊಳಗೆ ಪ್ರವೇಶಿಸಲು ಹಾಗೂ ಹಾನಿಯನ್ನು ಉಂಟುಮಾಡಲು ಕಾರಣವಾಗುತ್ತದೆ. ಹೀಗೆ ಒಟ್ಟು ಮೂರು ರೀತಿಯಲ್ಲಿ ಅಲ್ಕೋಹಾಲ್ ಸೇವನೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎನ್ನಲಾಗಿದೆ. ಬಿಯರ್, ವೈನ್ ಇಲ್ಲವೇ ಮದ್ಯ ಎಲ್ಲಾ ರೀತಿಯ ಅಲ್ಕೊಹಾಲ್ ಯುಕ್ತ ಪಾನೀಯಗಳು ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ.

ಆಲ್ಕೋಹಾಲ್‌ ಸೇವಿಸದೇ ಇರುವುದರಿಂದ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಕಡಿಮೆ. ಹಾಗೆಂದು ಹೆಚ್ಚು ಅಲ್ಕೋಹಾಲ್ ಸೇವಿಸುವುದರಿಂದಲು ಕೂಡ ಕ್ಯಾನ್ಸರ್ ಬರುವ ಅಪಾಯವು ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ತಿಳಿಸಲಾಗಿದೆ. WHOನ ಇತ್ತೀಚಿನ ಮಾಹಿತಿ ಅನುಸಾರ, ಅರ್ಧದಷ್ಟು ಆಲ್ಕೋಹಾಲ್ ಆಟ್ರಿಬ್ಯೂಟಬಲ್ ಕ್ಯಾನ್ಸರ್‌ಗಳು ಲಘು ಮತ್ತು ಮಧ್ಯಮ ಪ್ರಮಾಣದ ಅಲ್ಕೋಹಾಲ್ ಸೇವನೆಯಿಂದ ಉಂಟಾಗುತ್ತದೆ ಎಂಬುದನ್ನು ಖಚಿತಪಡಿಸಿದೆ.

ಯುರೋಪಿಯನ್ ಯೂನಿಯನ್ ದೇಶಗಳಲ್ಲಿ ಕ್ಯಾನ್ಸರ್ ಸಾವಿಗೆ ಪ್ರಮುಖ ಕಾರಣವಾಗಿದ್ದು, ಆಲ್ಕೋಹಾಲ್‌ ಸೇವನೆಯ ಬಳಿಕ ವಿವಿಧ ರೀತಿಯ ಕ್ಯಾನ್ಸರ್‌ಗಳಿಂದ ಉಂಟಾಗಿ ಸಾವಿನ ದವಡೆಗೆ ಸಿಲುಕುವ ಪ್ರಮಾಣ ಹೆಚ್ಚು ಎನ್ನಲಾಗಿದೆ.

Leave A Reply

Your email address will not be published.