ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ | ಹೆಚ್ಚಿನ ವಿವರ ಇಲ್ಲಿದೆ

ಹೆಣ್ಣು ನಾಲ್ಕು ಗೋಡೆಯ ಕಟ್ಟುಪಾಡಿಗೆ ಅಷ್ಟೆ ಸೀಮಿತ ಎಂಬಂತ ಕಾಲ ಒಂದಿತ್ತು. ಇದೀಗ ಕಾಲ ಬದಲಾಗಿದೆ. ಹೆಣ್ಣು ಗಂಡಿನ ಭೇದದ ನಡುವೆ ಎಲ್ಲ ಕ್ಷೇತ್ರದಲ್ಲಿ ಕೂಡ ಮಹಿಳೆ ತನ್ನ ಪ್ರತಿಭೆ ಅನಾವರಣಗೊಳಿಸಿ ತಮ್ಮ ಪಾರುಪತ್ಯ ಕಾಯ್ದುಕೊಂಡಿದ್ದಾರೆ. ಮಹಿಳೆಯರ ಸಬಲೀಕರಣ ಉತ್ತೇಜಿಸುವ ಉದ್ದೇಶದಿಂದ ಅನೇಕ ಸಂಘ ಸಂಸ್ಥೆಗಳು ನೆರವಾಗುತ್ತಿವೆ. ಇದೀಗ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ  ಹೊಲಿಗೆ ಯಂತ್ರ ವಿತರಣೆ (Free Sewing Machine) ಯೋಜನೆಯಡಿ ಬಡ ಕುಟುಂಬದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಲಾಗುತ್ತಿದೆ.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ  ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮಕ್ಕಾಗಿ  ಅರ್ಹ ಅಭ್ಯರ್ಥಿಗಳಿಂದ ಸೇವಾಸಿಂಧು (Seva Sindhu)  ತಂತ್ರಾಂಶದ ಮೂಲಕ ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ  ಬಗ್ಗೆ ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಅರ್ಜಿದಾರರು ಹೊಲಿಗೆ ಯಂತ್ರ ತರಬೇತಿ ಪಡೆದ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ. ವಯೋಮಿತಿ ಪರಿಗಣನೆ ಮಾಡಿದರೆ, 18 ರಿಂದ 55 ವರ್ಷದೊಳಗಿರಬೇಕಾಗುತ್ತದೆ. ಇದರ ಜೊತೆಗೆ ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

ಅರ್ಹ ಹಿಂದುಳಿದ ವರ್ಗಗಳ ಮಹಿಳೆಯರು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ 2023ರ ಫೆಬ್ರವರಿ 20 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ ಮತ್ತು ಇದರ ಉಪ ಸಮುದಾಯಗಳು ಹೊರತುಪಡಿಸಿದ ಸಮುದಾಯಗಳಿಗೆ ಸೇರ್ಪಟ್ಟವರಾಗಿರಬೇಕು. ಇದರ ಜೊತೆಗೆ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98,000 ರೂ.ಗಳು ಹಾಗೂ ಪಟ್ಟಣ ಪ್ರದೇಶದವರಿಗೆ 1,20,000 ರೂ.ಗಳ ಒಳಗಿರಬೇಕು.

ಈ ಯೋಜನೆ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆಯಲು ನಿಗಮದ ಸಹಾಯವಾಣಿ ಸಂಖ್ಯೆ: 080-22374832, 805077004 & 6, 7090400100/ 7090400900 ಅಥವಾ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಸಂಪರ್ಕಿಸಬಹುದು. ಕಚೇರಿ ದೂರವಾಣಿ ಸಂಖ್ಯೆ: 08472-278635ಗೆ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‍ಸೈಟ್‍ನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

Leave A Reply

Your email address will not be published.