Hindu god photo on beer bottle: ಬಿಯರ್ ಬಾಟಲಿ ಮೇಲೆ ಹಿಂದೂ ದೇವರ ಫೋಟೋ | ಫೋಟೋ ತೆಗೆಯಲು ಹಿಂದೂ ಸಂಘಟನೆಗಳಿಂದ ಒತ್ತಾಯ
ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡುವ ವಸ್ತುಗಳ ಚಿತ್ರ ಇಲ್ಲವೇ ಫೋಟೊ ಇರುವ ವಸ್ತುಗಳ ಮೇಲೆ ನಿಷೇಧ ಹೇರಲಾಗಿದ್ದರು ಕೂಡ ಕೆಲ ಕಿಡಿಗೇಡಿಗಳ ಕೃತ್ಯದಿಂದ ಇಲ್ಲವೇ ಕಂಪನಿಗಳ ನಡೆಯಿಂದ ಸಾಮಾನ್ಯ ಜನರಲ್ಲಿ ಗೊಂದಲ ಆಕ್ರೋಶ ವ್ಯಕ್ತವಾಗುವುದು ಸಹಜ.
ಬ್ರಿಟನ್‌ನಲ್ಲಿ ಬ್ರೂಯಿಂಗ್ ಕಂಪನಿಯ ಬಿಯರ್ ಬಾಟಲಿಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಬಿಯೆನ್ ಮಂಗರ್ ಹೆಸರಿನ ಕಂಪನಿಯು ತನ್ನ ಬಿಯರ್ ಬಾಟಲಿಗಳ ಮೇಲೆ ಹಿಂದೂ ದೇವತೆಯ ಚಿತ್ರವನ್ನು ಮುದ್ರಿಸಿದ್ದು ಸದ್ಯ ಈ ವಿಚಾರ ಮುನ್ನೆಲೆಗೆ ಬಂದಿರುವ ಹಿನ್ನೆಲೆ ಕಂಪನಿಯ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಕಂಪನಿಯು ತನ್ನ ಉತ್ಪನ್ನವನ್ನು ಹಿಂಪಡೆಯಬೇಕೆಂದು ಹಿಂದೂ ಸಮುದಾಯವು ಒತ್ತಾಯ ಹೇರಿದೆ. ಬ್ರಿಟನ್‌ನಲ್ಲಿರುವ ಹಿಂದೂಗಳು ಹಾಗೂ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸುವ ಸಾಮಾಜಿಕ ವೇದಿಕೆಯಾದ ಇನ್‌ಸೈಟ್ ಯುಕೆ ಈ ಬಗ್ಗೆ ಮಾಹಿತಿ ನೀಡಿದೆ.
ಮದ್ಯವನ್ನು ತಯಾರಿಸುವ ಬಿಯೆನ್ ಮಂಗರ್ ಹೆಸರಿನ ಕಂಪನಿಯ ವಿರುದ್ಧ ಇನ್ಸೈಟ್ ಯುಕೆ ಪ್ರತಿಭಟಿಸಿದ್ದು, ಕಂಪನಿಯು ಮಾರುಕಟ್ಟೆಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ. ಇನ್ಸೈಟ್ ಯುಕೆ ಈ ವಿಷಯದ ಬಗ್ಗೆ ಬಿಯರ್ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದು ಜೊತೆಗೆ ಇದರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ ಹೇರಿದೆ.
ಬಿಯರ್ ಬಾಟಲ್ ಮೇಲೆ ದೇವರ ಫೋಟೋ ಹಾಕುವುದನ್ನು ವಿರೋಧಿಸಿ ಬ್ರಿಟನ್ ನ ಹಿಂದೂ ಸಮುದಾಯವೂ ಪ್ರತಿಭಟನೆ ನಡೆಸುತ್ತಿದ್ದು, ಬಿಯರ್ ಬಾಟಲ್ ಮೇಲಿನ ವಿವಾದಾತ್ಮಕವಾದ ಹಾಗೂ ಅವಹೇಳನಕಾರಿ ಲೇಬಲ್ ಅನ್ನು ತೆಗೆದುಹಾಕುವಂತೆ ಅಲ್ಲಿ ನೆಲೆಸಿರುವ ಹಿಂದೂಗಳು ಕಂಪನಿಗೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಬಿಯರ್ ಬಾಟಲಿಯಿಂದ ಚಿತ್ರವನ್ನು ತೆಗೆಯದೆ ಇದ್ದಲ್ಲಿ, ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ.