ರಾಜ್ಯದಲ್ಲಿ ಕಾಂಗ್ರೇಸಿಗೂ ಹಿಡಿಯಿತು ‘ಉಚಿತ ಕೊಡುಗೆಯ ಗೀಳು’! ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ
ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಗಳೆಲ್ಲವು ತಾವು ಅಧಿಕಾರಕ್ಕೆ ಬಂದರೆ ಜನರಿಗೆ ಯಾವೆಲ್ಲಾ ಸೌಲಭ್ಯಗಳನ್ನು ನೀಡುತ್ತೇವೆಂದು ಘೋಷಣೆ ಮೊಳಗಿಸುತ್ತವೆ. ಅದಲ್ಲದೆ ಇತ್ತೀಚಿಗಂತೂ ‘ಉಚಿತ ಕೊಡುಗೆ’ಗಳು ಸಾಕಷ್ಟು ಸದ್ಧು ಮಾಡುತ್ತಿವೆ. ದೆಹಲಿಯಲ್ಲಿನ ಕೇಜ್ರಿವಾಲ್ ಸರ್ಕಾರ ಈ ಸಂಪ್ರದಾಯವನ್ನು ಆರಂಭಿಸಿತು. ಆದರಿಂದು ಹೆಚ್ಚಿನ ಪಾರ್ಟಿಗಳು ಗೆಲುವಿಗಾಗಿ ಉಚಿತ ಕೊಡುಗೆಗಳ ಮಂತ್ರವನ್ನು ಪಠಿಸುತ್ತಿರುವುದು ವಿಪರ್ಯಾಸ. ಸದ್ಯ ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ, ಇದೇ ಹಾದಿ ಹಿಡಿದಿದೆ ಎಂದರೆ ಆಶ್ಚರ್ಯವಾಗುತ್ತದೆ.
ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 200 ಯೂನಿಟ್ ವರೆಗೂ ನೀವ್ಯಾರೂ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ! ಹೌದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ಪ್ರತೀ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ ಉಚಿತ ವಿದ್ಯುತ್ ನೀಡುವ ಘೋಷಣೆ ಮಾಡಿ ಮುಖಂಡರಿಂದ ಬಿತ್ತಿ ಫಲಕ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಡಿ ಕೆ ಶಿವಕುಮಾರ್ ‘ಇದು ಬಿ ರಿಪೋರ್ಟ್ ಬರೆಯುವ ಸರ್ಕಾರ. ಮಂಚ, ಲಂಚದ ಸರ್ಕಾರ. 40 ಪರ್ಸೆಂಟ್ ಕಮಿಷನ್ ಸರ್ಕಾರ. ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ, ಮಂತ್ರಿ ಹುದ್ದೆಗೆ 100 ಕೋಟಿ ರೂ., ಮಠಗಳ ಅನುದಾನಕ್ಕೆ 40 ಪರ್ಸೆಂಟ್, ಮೊಟ್ಟೆಗಳಿಗೆ 30 ಪರ್ಸೆಂಟ್ ಸರ್ಕಾರ. ಬರೀ ತಾನು ನುಂಗುವುದು ಬಿಟ್ಟರೆ ಜನರಿಗೇನು ಮಾಡಿಲ್ಲ. ಇದು ದೇಶದಲ್ಲಿ ಬರೀ ಕೋಮು ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಅಷ್ಟೇ’ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ವಚನ ಕೊಟ್ಟರು, ಆದರೆ ಯಾರಿಗಾದರೂ ಡಬಲ್ ಆಗಿದೆಯಾ? ನಿಮ್ಮ ಎಲ್ಲಾ ಸಾಲಗಳನ್ನು ಮನ್ನಾ ಮಾಡುತ್ತೇವೆ ಅಂತ ಹೇಳಿದ್ರು, ಯಾರದ್ದಾದರೂ ಸಾಲ ಮನ್ನಾ ಆಯ್ತಾ? ಆಪರೇಷನ್ ಕಮಲ ಮಾಡಿ ನಿಮ್ಮ ಜಿಲ್ಲೆಯ ಮೂವರನ್ನು ಕರೆದುಕೊಂಡು ಸರ್ಕಾರ ಮಾಡಿದರು. ಇವರು ನಿಮಗೇನಾದರೂ ಹೇಳಿದ್ರಾ? ಇದೀಗ ಬಿಜೆಪಿಯ ಪಾಪಾದ ಪುರಾಣ ನಾವು ಬಿಡುಗಡೆ ಮಾಡಿದ್ದೇವೆ ಎಂದು ಕಿಡಿಕಾರಿದರು.
ಮೀಸಲಾತಿ ವಿಚಾರದಲ್ಲಿ ಯಾವ್ಯಾವ ನಾಟಕ ಆಡುತ್ತಿದ್ದಾರೆಂದು ನೀವೆ ನೋಡುತ್ತಿದ್ದೀರಿ. ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನ ಮಾಡುವುದೇ ಅವರ ಮೂಲ ಉದ್ದೇಶ. ಅವರು ಅಸೆಂಬ್ಲಿ ನಡೆಯುವಾಗಲೂ ಕೂಡಾ ನಿಮಗೆ ವಚನ ನೀಡಲು ಹೋಗುತ್ತಾರೆ. ಆದರೆ ಒಂದನ್ನೂ ಮಾಡುವುದಿಲ್ಲ. 3 ವರ್ಷದಿಂದ ಅವರ ಪಾಪದ ಕೊಡ ತುಂಬಿದೆ. ಅವರ ಪಾಪಕ್ಕೆ ಈ ಸಲ ತಕ್ಕ ಉತ್ತರವನ್ನು ಜನ ನೀಡುತ್ತಾರೆ ಎಂದು ಗುಡುಗಿದರು.
ನಿಮ್ಮ ಸೇವೆ ಮಾಡಲು, ನಿಮಗೆ ಬಲಿಷ್ಠ ಸರ್ಕಾರವನ್ನು ನೀಡಲು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿ. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಪ್ರಣಾಳಿಕೆ ಕೊಡಬೇಕು ಎಂಬುದು ಪ್ರಿಯಾಂಕಾ ಗಾಂಧಿಯವರ ಯೋಜನೆ. ಈ ಹಾದಿಯಲ್ಲಿ ನಾವೂ ನಡೆಯುತ್ತೇವೆ. ಪ್ರತಿ ಪಂಚಾಯಿತಿಯಿಂದ ಇಬ್ಬರು ಹೆಣ್ಣು ಮಕ್ಕಳು ಬರಬೇಕು. ಎಲ್ಲದರಲ್ಲೂ ಭಾಗವಹಿಸಬೇಕು. ಕುವೆಂಪು, ಶಿಶುನಾಳ ಶರೀಫ, ಬಸವಣ್ಣ ಕಂಡ ಕರ್ನಾಟಕ ನಿರ್ಮಾಣ ಆಗಬೇಕು. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಡಿಕೆಶಿ ಮನವಿ ಮಾಡಿದರು.