ನಡು ಬೀದಿಯಲ್ಲಿ ಪೋಲೀಸ್ ಕಾನ್‌ಸ್ಟೆಬಲ್‌ನನ್ನು ಚಾಕುವಿನಿಂದ ಇರಿದು ಕೊಂದ ಕಳ್ಳ! ಮೈ ನಡುಗಿಸುವ ಕೃತ್ಯಕ್ಕೆ ಕಾರಣವೇನು ಗೊತ್ತಾ?
ವಿಭಿನ್ನವಾದ ಐಡಿಯಾಗಳೊಂದಿಗೆ ಪೋಲಿಸರು ಕಳ್ಳರನ್ನು ಹಿಡಿಯುವಂತಹ ಪ್ರಕರಣಗಳು ಇತ್ತೀಚೆಗೆ ಸಾಕಷ್ಟು ಸುದ್ಧಿಯಲ್ಲಿರುತ್ತವೆ. ಆದರೆ ನಡುರಸ್ತೆಯಲ್ಲಿ ಎಲ್ಲರ ಕಣ್ಣೆದುರೇ ಕಳ್ಳನೊಬ್ಬ ಪೊಲೀಸ್ ಅಧಿಕಾರಿಗೆ ಇರಿದು, ಆತ ಮೃತಪಟ್ಟ ದಾರುಣ ಘಟನೆಯೊಂದು ಇತ್ತೀಚೆಗೆ ನಡೆದಿದೆ.
ಹೌದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಭಾನುವಾರ ನಡೆದ ಘಟನೆ ಇಡೀ ನಗರವನ್ನೇ ನಡುಗಿಸಿದೆ. ಮೊಬೈಲ್ ಫೋನ್ ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಹಿಡಿದಿದ್ದರು. ಆದರೆ ಕಳ್ಳ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ 12 ಬಾರಿ ಅವರಿಗೆ ಚಾಕುವಿನಿಂದ ಇರಿದಿದ್ದಾನೆ.
ಜನವರಿ 4 ರಂದು ಕೊಳೆಗೇರಿಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರು ಅನೀಶ್ ಎಂಬಾತ ತನ್ನ ಗಂಡನ ಮೊಬೈಲ್ ಫೋನ್ ಕದ್ದಿದ್ದಾನೆ ಹಾಗೂ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಕೇಸ್ ಗೆ ಸಂಬಂಧಿಸಿದಂತೆ ಆರೋಪಿಯನ್ನು ಹುಡುಕಲು ಶಂಭು ಎಂಬ ಪೋಲೀಸ್ ಕಾನ್ ಸ್ಟೇಬಲ್ ಮಹಿಳೆ ಜತೆಗೆ ಮಾರುಕಟ್ಟೆ ಸ್ಥಳಕ್ಕೆ ಬಂದಿದ್ದರು. ಅಲ್ಲಿ ಅನೀಶ್‌ನನ್ನು ಕಂಡ ಮಹಿಳೆ ಪೋಲೀಸಿಗೆ ತೋರಿಸಿದ್ದಾಳೆ. ಕೂಡಲೆ ಪೊಲೀಸ್ ಕಾನ್‌ಸ್ಟೆಬಲ್ ಆತನನ್ನು ಹಿಡಿದು, ಕದ್ದಿದ್ದ ಮೊಬೈಲ್ ಫೋನ್‌ನನ್ನು ವಶಪಡಿಸಿಕೊಂಡಿದ್ದರು.
ಬಳಿಕ ಅನೀಶ್‌ನನ್ನು ಪೊಲೀಸ್ ಠಾಣೆಗೆ ಎಳೆದೊಯ್ಯುವ ವೇಳೆ, ತನ್ನ ಅಂಗಿಯ ಹಿಂದೆ ಅಡಗಿಸಿಕೊಂಡಿದ್ದ ಚಾಕುವನ್ನು ಹೊರಗೆ ತೆಗೆದು ಪೊಲೀಸ್ ಕಾನ್‌ಸ್ಟೆಬಲ್‌ಗೆ ಇರಿಯಲು ಆರಂಭಿಸಿದ್ದಾನೆ. ಶಂಭು ದಯಾಳ್ ಅವರ ಕುತ್ತಿಗೆ, ಎದೆ, ಹೊಟ್ಟೆ ಹಾಗೂ ಹಿಂಬದಿಗೆ ಮನಬಂದಂತೆ ಚುಚ್ಚಿದ್ದಾನೆ.
ಇಷ್ಟೆಲ್ಲಾ ನಡೆದರೂ ಜನರ ಗುಂಪು ಮೂಕಪ್ರೇಕ್ಷರಾಗಿತ್ತೇ ಹೊರತು, ಪೊಲೀಸ್ ಸಿಬ್ಬಂದಿಯನ್ನು ರಕ್ಷಿಸುವ ಗೋಜಿಗೆ ಹೋಗಲಿಲ್ಲ. ಕೊನೆಗೆ ಅನೀಶ್ ಪೋಲಿಸರನ್ನು ದೂರ ತಳ್ಳಿ ಅಲ್ಲಿಂದ ಓಡಿಹೋಗಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಬೇರೆ ಪೊಲೀಸರು ಅನೀಶ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಕು ಇರಿತದಿಂದ ಗಂಭೀರ ಗಾಯಗೊಂಡು ನರಳುತ್ತಿದ್ದ ರಾಜಸ್ಥಾನದ ಸಿಕಾರ್ ಪ್ರದೇಶ ಮೂಲದವರಾದ ಪೋಲೀಸ್ ಕಾನ್ ಸ್ಟೇಬಲ್ ಶಂಭು ದಯಾಳ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಘನಶ್ಯಾಮ್ ಬನ್ಸಾಲ್ ತಿಳಿಸಿದ್ದಾರೆ.