‘ಫೇಸ್ ಬುಕ್ ನಲ್ಲೆ’ಗೋಸ್ಕರ ಸ್ವಂತ ಹೆಂಡತಿಗೇ ವಿಷ ಉಣಿಸಿದ ಭೂಪ!

Share the Article

ಸಾಮಾಜಿಕ ಜಾಲತಾಣಗಳು ಕೆಲವೊಮ್ಮೆ ಸೃಷ್ಟಿಸುವ ಅವಾಂತರಗಳು ಕೆಲವರ ಬದುಕನ್ನೇ ಹಾಳುಗೆಡವುತ್ತವೆ. ಇಂತಹ ಎಷ್ಟೋ ಘಟನೆಗಳು ಪ್ರತಿದಿನ ಘಟಿಸುತ್ತಲೇ ಇರುತ್ತವೆ. ಇದೀಗ ಅಂತಹುದೇ ಪ್ರಕರಣ ಬೆಳಕಿಗೆ ಬಂದಿದ್ದು ಗಂಡನೇ ತನ್ನ ಸ್ವಂತ ಹೆಂಡತಿಯನ್ನು ಕೊಲ್ಲಲು ಯತ್ನಿಸಿದ ಘಟನೆ ನಡೆದಿದೆ.

ತನ್ನ ಫೇಸ್‍ಬುಕ್ ಸುಂದರಿಗಾಗಿ ಪತಿ ಮಹಾಶಯನೊಬ್ಬ ತನ್ನ ಪತ್ನಿಗೆ ವಿಷವಿಟ್ಟ ವಿಲಕ್ಷಣ ಘಟನೆಯೊಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಕಾನಗಮಾಕಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುಮಾರು 9 ವರುಷಗಳ ಹಿಂದೆ ಈ ದಂಪತಿಗಳಿಬ್ಬರೂ ಮದುವೆಯಾಗಿದ್ದರು. ನಂತರದ ದಿನಗಳಲ್ಲಿ ತುಂಬಾ ಅನ್ಯೋನ್ಯತೆಯಿಂದ ಸಂಸಾರ ಸಾಗಿಸುತ್ತಿದ್ದರು. ಆಗದರೆ ಕೆಲವು ಸಮಯದ ಹಿಂದೆ ಫೇಸ್‍ಬುಕ್‍ನಲ್ಲಿ ಈ ಪತಿ ಮಹಾಶಯನಿಗೆ ಯುವತಿಯೊಬ್ಬಳ ಪರಿಚಯವಾಗಿದೆ. ಇದು ಪ್ರೇಮಕ್ಕೆ ತಿರುಗಿ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದಾರೆ. ಈ ಪರಿಚಯವು ಇದೀಗ ತನ್ನ ಪತ್ನಿಯನ್ನೇ ಕೊಲ್ಲುವ ಹಂತಕ್ಕೆ ಕರೆದೊಯ್ದಿದೆ.

ಪತ್ನಿಯನ್ನು ಹೇಗಾದರೂ ದೂರಮಾಡಬೇಕೆಂದು ಯೋಚಿಸಿದ ಪತಿ ಮಹಾಶಯನು ಉಪಾಯವೊಂದನ್ನು ಹುಡುಕಿ ಹೆಂಡತಿಯನ್ನು ತವರು ಮನೆಗೆ ಕರೆದೊಯ್ದಿದ್ದಾನೆ. ಬಳಿಕ ಈ ಭೂಪ ತವರು ಮನೆಯಲ್ಲಿಯೇ ಪತ್ನಿಗೆ ವಿಷ ಉಣಿಸಿದ್ದಾನೆ. ಪರಿಣಾಮ ತೀವ್ರ ಅಸ್ವಸ್ಥತೆಯ ಪತ್ನಿ ಆಶಾರಾಣಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದು, ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್ ಬುಕ್ ಸುಂದರಿಗಾಗಿ ತನ್ನ ಹೆಂಡತಿಯನ್ನೇ ಕೊಲ್ಲಲು ಹೊರಟ ಗಂಡನೀಗ ಪೋಲೀಸರ ಅತಿಥಿಯಾಗಿದ್ದಾನೆ.

Leave A Reply