ಹುಟ್ಟಿದ ಒಂದೇ ದಿನಕ್ಕೆ ಕಂದನನ್ನು 3ನೇ ಮಹಡಿಯಿಂದ ಎಸೆದ ತಾಯಿ, ಮಗು ಸಾವು
ಮಗು ಎಂದರೆ ದೇವರಿಗೆ ಸಮಾನ ಎನ್ನುವ ನಂಬಿಕೆ. ಆದರೆ ಇತ್ತೀಚಿಗೆ ಪಾಪ, ಕರುಣೆ, ನಂಬಿಕೆ, ವಿಶ್ವಾಸ ಇವುಗಳಿಗೆ ಬೆಲೆಯೇ ಇಲ್ಲದಂತೆ ಆಗಿದೆ. ಮನಸ್ಸು ಕಲ್ಲಾದಾಗ ತಮ್ಮನ್ನು ತಾವು ದಂಡಿಸುವುದು ನೋಡಿದ್ದೇವೆ. ಆದರೆ ಏನು ಅರಿಯದ ಹುಟ್ಟಿ ಒಂದೇ ದಿನವಾಗಿದ್ದ ಮಗುವನ್ನು ತಾಯಿಯೊಬ್ಬಳು ಮೂರನೇ ಮಹಡಿಯಲ್ಲಿದ್ದ ತನ್ನ ಮನೆಯ ವಾಶ್ ರೂಮ್‌ನ ಕಿಟಕಿಯಿಂದ ಎಸೆದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.
ಮದುವೆಯಾಗದೇ ಗರ್ಭ ಧರಿಸಿದ್ದ ಈಕೆ, ಸೋಮವಾರ ತನ್ನ ಮನೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಳು . ಆದರೆ, ಸಮಾಜವನ್ನು ಎದುರಿಸುವ ಭಯದಿಂದ ಮಗುವನ್ನು ಮಹಡಿಯಿಂದ ಎಸೆದು ಕೊಂದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.
“ಪೊಲೀಸರು ಸ್ಥಳಕ್ಕೆ ಬಂದಾಗ, ಸ್ಥಳೀಯ ಜನರು ಮಗುವನ್ನು ನೋಯ್ಡಾದ ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಿದ್ದ ವಿಚಾರ ಗೊತ್ತಾಗಿತ್ತು. ಕೂಡಲೇ ಪೊಲೀಸರು ಆಸ್ಪತ್ರೆಗೆ ತಲುಪಿದ್ದಾರೆ. ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು ಎಂದು ತಿಳಿಸಿದ್ದಾರೆ. ಮಗುವಿನ ಮೃತದೇಹವನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಆಕೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಆಕೆಯನ್ನು ಬಂಧನ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈ ಅಂಬೇ ಅಪಾರ್ಟ್‌ಮೆಂಟ್ ಆವರಣದಲ್ಲಿ ನವಜಾತ ಶಿಶು ರಕ್ತದ ಮಡುವಿನಲ್ಲಿ ಬಿದ್ದಿರುವ ಬಗ್ಗೆ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿತ್ತು ಎಂದು ಪೊಲೀಸ್ ಉಪ ಆಯುಕ್ತ (ಪೂರ್ವ) ಅಮೃತಾ ಗುಗುಲೋತ್ ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಪೊಲೀಸರು ಮಗು ಪತ್ತೆಯಾದ ಸ್ಥಳದ ಸುತ್ತಮುತ್ತಲಿನ ಹಲವಾರು ಮನೆಗಳನ್ನು ಪರಿಶೀಲನೆ ಮಾಡಿದ್ದರು. “ಈ ವೇಳೆ ಒಂದು ಮನೆಯನ್ನು ಪರಿಶೀಲಿಸಿದಾಗ, ಕಸದ ಬುಟ್ಟಿಯಲ್ಲಿ ರಕ್ತದ ಕುರುಹುಗಳನ್ನು ನಾವು ಕಂಡುಕೊಂಡಿದ್ದೇವೆ. ನಾವು ಮನೆಯ ನಿವಾಸಿಗಳನ್ನು ವಿಚಾರಣೆಗೆ ಒಳಪಡಿಸಿದೆವು. ಈ ವೇಳೆ 20 ವರ್ಷದ ಮಹಿಳೆಯೊಬ್ಬರು ತಪ್ಪೊಪ್ಪಿಕೊಂಡರು, ”ಎಂದು ಡಿಸಿಪಿ ತಿಳಿಸಿದ್ದಾರೆ .
ನೋಯ್ಡಾದ ಖಾಸಗಿ ಕಂಪನಿಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದು ಮದುವೆಯಾಗದೇ ಮಗು ಹೆತ್ತ ಕಾರಣದಿಂದ ಎದುರಾಗುವ ಸಾಮಾಜಿಕ ಕಳಂಕಕ್ಕೆ ಭಯಪಟ್ಟು ಈ ಕೃತ್ಯ ಎಸಗಿರುವುದಾಗಿದೆ.
ಘಟನಾ ಸ್ಥಳಕ್ಕೆ ಕ್ರೈಂ ತಂಡ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಮತ್ತು 201 (ಸಾಕ್ಷ್ಯದ ಕಣ್ಮರೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಮಹಿಳೆ ವೈದ್ಯಕೀಯ ನಿಗಾದಲ್ಲಿದ್ದು, ಆಕೆಯನ್ನು ಬಿಡುಗಡೆ ಮಾಡಿದ ನಂತರ ಬಂಧಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿದು ಬರಬೇಕಿದೆ.