ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ ಟಾಟಾ ಮೋಟಾರ್ಸ್ ನ ಪಂಚ್ ಎಲೆಕ್ಟ್ರಿಕ್ ಕಾರು! ಬಜೆಟ್ ಬೆಲೆಯೊಂದಿಗೆ ರಸ್ತೆಗಿಳಿಯಲಿದೆ

ಭಾರತದಲ್ಲಿ ಹೊಸ ಕಾರುಗಳ ಅಬ್ಬರ ಸಖತ್ ಜೋರಾಗಿಯೇ ನಡೆಯುತ್ತಿದೆ. ಪ್ರತಿ ದಿನ ಒಂದೊಂದು ಕಂಪೆನಿಯೂ ತನ್ನ ಹೊಸ ವಿನ್ಯಾಸದ ಕಾರುಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಇದೀಗ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಪಂಚ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ.

ಹೊಸ ಇವಿ ಕಾರು 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳ್ಳಲಿದೆ. ಸದ್ಯ ಮಾರುಕಟ್ಟೆಯಲ್ಲಿ ಪಂಚ್ ಕಾರು ಮಾದರಿಯು ಪೆಟ್ರೋಲ್ ವೆರಿಯೆಂಟ್ ನಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 5.99 ಲಕ್ಷದಿಂದ ರೂ. 9.54 ಲಕ್ಷ ಬೆಲೆ ಹೊಂದಿದೆ. ಹೀಗಾಗಿ ಹೊಸದಾಗಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಆವೃತ್ತಿಯು ಆರಂಭಿಕವಾಗಿ ಬ್ಯಾಟರಿ ಪ್ಯಾಕ್ ಆಯ್ಕೆಗೆ ಅನುಗುಣವಾಗಿ ರೂ. 9 ಲಕ್ಷದಿಂದ ರೂ. 14 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

ಹೊಸ ಪಂಚ್ ಇವಿ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಬಿಡುಗಡೆಯಾದ ಟಿಯಾಗೋ ಇವಿ ಕಾರಿನಲ್ಲಿರುವಂತೆ ಜಿಪ್ ಟ್ರಾನ್ ತಂತ್ರಜ್ಞಾನ ಪ್ರೇರಿತ ಎರಡು ಮಾದರಿಯ ಬ್ಯಾಟರಿ ಆಯ್ಕೆಗಳನ್ನು ಪಡೆದುಕೊಳ್ಳಬಹುದಾಗಿದೆ. ಹೊಸ ಕಾರಿನ ಆರಂಭಿಕ ವೆರಿಯೆಂಟ್ ನಲ್ಲಿ 19.2kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದಲ್ಲಿ ಟಾಪ್ ಎಂಡ್ ವೆರಿಯೆಂಟ್ ನಲ್ಲಿ 24kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಬಹುದಾಗಿದೆ. ಈ ಮೂಲಕ ಇದು ಪ್ರತಿ ಚಾರ್ಜ್ ಗೆ 250 ಕಿ.ಮೀ ನಿಂದ 320 ಕಿ.ಮೀ ಮೈಲೇಜ್ ನೀಡಬಹುದಾಗಿದೆ.

ಜೊತೆಗೆ ಹೊಸ ಕಾರು ಎಂಟ್ರಿ ಲೆವಲ್ ಇವಿ ಕಾರುಗಳಲ್ಲಿಯೇ ಅತಿ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದ್ದು, ಹೊಸ ಕಾರಿನಲ್ಲಿ IP67 ಮಾನದಂಡಗಳನ್ನು ಪೂರೈಸಿರುವ ಎಲೆಕ್ಟ್ರಿಕ್ ಬ್ಯಾಟರಿ ಮತ್ತು ಮೋಟಾರ್ ಜೋಡಿಸಲಾಗಿದೆ. ಇದು ಧೂಳು ಮತ್ತು ತುಕ್ಕು ನಿರೋಧಕ ವೈಶಿಷ್ಟ್ಯತೆ ಹೊಂದಿರಲಿದ್ದು, ಇದರೊಂದಿಗೆ ಹೊಸ ಕಾರಿನ ಬ್ಯಾಟರಿ ಮತ್ತು ಮೋಟಾರ್ ಮೇಲೆ ಕಂಪನಿಯು ಗರಿಷ್ಠ 8 ವರ್ಷಗಳ ವಾರಂಟಿ ನೀಡಲಿದೆ.

ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಇವಿ ಕಾರುಗಳ ಪಟ್ಟಿಯಲ್ಲಿ ಪಂಚ್ ಎಲೆಕ್ಟ್ರಿಕ್ ಆವೃತ್ತಿಯು ಕೂಡಾ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿ, ಟಿಗೋರ್ ಇವಿ, ಟಿಯಾಗೋ ಇವಿ ಮತ್ತು ಎಕ್ಸ್ ಪ್ರೆಸ್ಸ್-ಟಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಪಂಚ್ ಇವಿ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಇವಿ ಕಾರು ಇದೇ ತಿಂಗಳು 12ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡ ನಂತರವಷ್ಟೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಆದರೆ ಸದ್ಯ ಲಭ್ಯವಿರುವ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ಇದು ದೂರದ ಪ್ರಯಾಣಕ್ಕೆ ಅಷ್ಟೊಂದು ಅನುಕೂಲಕರ ಆಗುವುದಿಲ್ಲವಾದರೂ ನಗರಪ್ರದೇಶದಲ್ಲಿನ ಸಂಚಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ ಎನ್ನಬಹುದು.

Leave A Reply

Your email address will not be published.