ಮಂಗಳೂರು: ಗ್ರಾಮೀಣ ಪ್ರತಿಭೆಯ ಉತ್ಸಾಹದಿಂದ ಅರಳುತ್ತಿದೆ ಅಪರೂಪದ ನಾಗಲಿಂಗ ಪುಷ್ಪ!! ಅಳಿವಿನಂಚಿನ ನಾಗಲಿಂಗ ಮನೆಯಲ್ಲಿದ್ದರೆ ಪರಿಹಾರವಾಗುತ್ತದೆಯೇ ನಾಗದೋಷ!??
ಪರಶುರಾಮ ಸೃಷ್ಟಿಯ ತುಳುನಾಡು ಹಲವು ವಿಭಿನ್ನತೆಗೆ ಸಾಕ್ಷಿ. ಕೃಷಿ, ವೈದ್ಯಕೀಯ, ಆಯುರ್ವೇದ, ಕಂಬಳ, ಯಕ್ಷಗಾನ, ಕೋಲ-ನೇಮ, ಜ್ಯೋತಿಷ್ಯ, ಕೋಳಿ ಅಂಕ ಹೀಗೆ ಹತ್ತು ಹಲವು ಭಿನ್ನ-ವಿಭಿನ್ನ ಚಿತ್ರಣಗಳು ಇಲ್ಲಿ ಕಂಡು ಬರುತ್ತವೆ. ಎಲ್ಲಾ ಕ್ಷೇತ್ರದಲ್ಲೂ ಮುಂದಿರುವ ಇಂತಹ ನಾಡಿನಲ್ಲಿ ಇಂದಿನ ಯುವ ಪೀಳಿಗೆಯು ಆಧುನಿಕವಾಗಿ ಎಲ್ಲಾ ವಿಚಾರದಲ್ಲೂ ಮುಂದೆ ಇರುವುದು ವಾಸ್ತವದ ಸಂಗತಿ.ಆದರೆ ಹಿಂದಿನ ತಲೆಮಾರುಗಳು ಉಳಿಸಿ ಹೋದಂತಹ ಅಳಿದುಳಿದ ಕೆಲ ಮನೆ ಔಷಧಿ, ಪದ್ಧತಿ,ವನ್ಯ ಪ್ರೇಮ, ಆಚಾರ ವಿಚಾರ ಇತ್ಯಾದಿಗಳೆಲ್ಲಾ ಮರೆತು ಅಳಿವಿನಂಚಿನಲ್ಲಿದೆ ಅಥವಾ ಮೂಲೆಗುಂಪಾಗುತ್ತಿದೆ ಎನ್ನುವುದು ನಂಬಲಸಾಧ್ಯವಾದ ಕಟು ಸತ್ಯ.
ಅಂತಹ ಅಳಿವಿನಂಚಿನಲ್ಲಿರುವ ವೃಕ್ಷಗಳ ಸಾಲಿಗೆ ಸೇರಿದ್ದೇ ನಾಗಲಿಂಗ ಪುಷ್ಪ(ವೃಕ್ಷ).ಇದನ್ನು ನಾಗ ಚಂಪಾ(cannonbaal tree), ಶಿವಲಿಂಗ ಪುಷ್ಪ ಎಂದೂ ಕರೆಯುತ್ತಾರೆ. ಇವುಗಳ ಹೂವಿನ ಮಧ್ಯಭಾಗದಲ್ಲಿ ಲಿಂಗಾಕೃತಿ ಹೊಂದಿದ್ದು, ಹೆಡೆಯಂತೆ ಬಾಗಿಕೊಂಡಿರುವುದನ್ನು ಸೂಚಿಸುವ ಹಿನ್ನೆಲೆಯಲ್ಲಿ ನಾಗಲಿಂಗ ಎನ್ನುತ್ತಾರೆ.ಮೂಲತಃ ದಕ್ಷಿಣ ಅಮೇರಿಕಾ ಕೆರೆಬಿಯನ್ ಪ್ರದೇಶದ ಈ ಪುಷ್ಪ ಕಾಣಸಿಗುವುದು ಅಪರೂಪದಲ್ಲಿ ಅಪರೂಪ.
ಪೂರ್ವಜರು ಇವುಗಳಲ್ಲಿ ಔಷಧಿಯ ಗುಣಗಳಿರುವುದನ್ನು ಪತ್ತೆ ಹಚ್ಚಿದ್ದು, ಆಯುರ್ವೇದ ಪದ್ಧತಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಹಿಂದೂ ಧರ್ಮದಲ್ಲಿ ಹೆಚ್ಚಿನ ಗೌರವ, ಭಯ ಭಕ್ತಿ ಹೊಂದಿದ ದೇವರಿಗೆ ಸಮಾನವಾದ ನಾಗಲಿಂಗ ವೃಕ್ಷವು ಆಧುನಿಕ ಯುಗದಲ್ಲಿ ಅಳಿವಿನಂಚಿನಲ್ಲಿದೆ ಎನ್ನುವುದು ಬೇಸರದ ಸಂಗತಿಯಾದರೆ,ಇವುಳನ್ನು ಬೆಳೆಸಿ, ಸ್ಥಳೀಯ ದೇವಾಲಯಗಳಲ್ಲಿ ಖುದ್ದು ಹೋಗಿ ನೆಟ್ಟು,ಇತರರಿಗೂ ವಿತರಿಸುತ್ತಿರುವ ಅಪರೂಪದ ಪ್ರತಿಭೆ-ಪರಿಸರ ಪ್ರೇಮಿಯೋರ್ವರು ತೆರೆಯ ಮರೆಯಲ್ಲೇ ಸಮಾಜಸೇವೆ ನಡೆಸುತ್ತಿರುವುದು ಸಂತಸದ ಸಂಗತಿ.
ಹೌದು, ಇಂತಹದೊಂದು ವಿಶೇಷ ಪ್ರತಿಭೆ ಕಾಣಸಿಗುವುದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯದ ಮುಲ್ಕಿ-ಕಿನ್ನಿಗೋಳಿ ಸಮೀಪದ ನಿಡ್ಡೋಡಿ ಎಂಬಲ್ಲಿ. ಕಳೆದ ಕೆಲ ವರ್ಷಗಳಿಂದ ಅಳಿವಿನ ಅಂಚಿನಲ್ಲಿರುವ ನಾಗಲಿಂಗ ವೃಕ್ಷದ ಸಸಿಗಳನ್ನು ನೆಟ್ಟು-ಬೆಳೆಸಿ-ಪೋಷಿಸಿ ವಿತರಿಸುತ್ತಿರುವ ವಿನೇಶ್ ಪೂಜಾರಿ ಅವರೇ ನಮ್ಮ ಇಂದಿನ ಅತಿಥಿ.ಅಪರೂಪದ, ಅಳಿವಿನ ಅಂಚಿನ ನಾಗಲಿಂಗ ಪುಷ್ಪ ಬೆಳೆಸಿ,ವಿತರಿಸಿ,ದೇವಾಲಯಗಳಲ್ಲಿ-ಮಂದಿರಗಳಲ್ಲಿ, ನಾಗ ಬನಗಳಲ್ಲಿ ನೆಟ್ಟು ಇತರರಿಗೂ ಮಾದರಿಯಾದ ವಿನೇಶ್ ಅವರ ವನ್ಯ ಪ್ರೇಮ ಮೆಚ್ಚುವಂತದ್ದು.ತನ್ನ ಧನ್ಯತೆಯ ಸೇವೆಗೆ ಹಲವೆಡೆ ಗುರುತಿಸಲ್ಪಟ್ಟ ವಿನೇಶ್, ಈ ವರೆಗೂ ಸುಮಾರು 1000 ಕ್ಕೂ ಹೆಚ್ಚು ಬೀಜಗಳನ್ನು ಮೊಳಕೆ ಬರಿಸಿ, ಸಸಿ ನಾಟಿ ಮಾಡಿ ಅವುಗಳನ್ನು ಬೆಳೆಸಿ ಉಚಿತವಾಗಿ ವಿತರಿಸುತ್ತಿರುವ ಕಾರಣ ರಾಜ್ಯದ ಹಲವೆಡೆಗಳಿಂದ ಸಸಿಗಳಿಗೆ ಬೇಡಿಕೆ ಹೆಚ್ಚಾಗಿದೆ.
ಏನಿದರ ಮಹತ್ವ!?
ನಾಗಲಿಂಗ ವೃಕ್ಷವು ಗಿಡ ನೆಟ್ಟು ಸುಮಾರು ನಾಲ್ಕು ವರ್ಷಗಳ ಬಳಿಕ ಹೂವು ಬಿಡಲು ಪ್ರಾರಂಭವಾಗುತ್ತದೆ. ಅತ್ಯಂತ ಹೆಚ್ಚು ಸುಗಂಧ ಹೊಂದಿರುವ ಕಾರಣ ಸುಗಂಧ ದ್ರವ್ಯಗಳ ಉತ್ಪಾದನೆಯಲ್ಲಿ, ಆಯುರ್ವೇದ ಪದ್ಧತಿಯ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ.
ನಾಗಲಿಂಗ ವೃಕ್ಷವು ದೇವಾಲಯದ ಸುತ್ತ-ಮುತ್ತ ನೆಟ್ಟರೆ ಅದೊಂದು ಹೆಚ್ಚಿನ ಆಕರ್ಷಣೆಯಾಗುವುದರೊಂದಿಗೆ ಮುಂದಿನ ಪೀಳಿಗೆಗೂ ಅದರ ಮಹತ್ವ ಅರಿಯುತ್ತದೆ. ಮನೆಯಲ್ಲಿ, ಅಥವಾ ತೋಟದಲ್ಲಿ, ಮನೆಯ ಬಾವಿಯ ಕಟ್ಟೆಯ ಬದಿಯಲ್ಲಿ ನಾಗಲಿಂಗ ಪುಷ್ಪದ ಗಿಡ ನೆಟ್ಟರೆ ನಾಗ-ಸಂಚಾರ(ನಾಗನಡೆ), ನಾಗಬೀದಿ ಇವುಗಳಿಗೆಲ್ಲಾ ಕಡಿವಾಣ ಬೀಳುತ್ತದೆ ಎನ್ನುವ ನಂಬಿಕೆಯೂ ಇದೆ.
ನಾಗನಡೆ-ನಾಗಬೀದಿ ಎಂದರೆ ಏನು ಎನ್ನುವ ಪ್ರಶ್ನೆಗೂ ಇಲ್ಲಿ ಉತ್ತರಿಸುವ ಸಣ್ಣ ಪ್ರಯತ್ನವೊಂದನ್ನು ಮಾಡಲಾಗಿದೆ. ನಾಗ ನಡೆ, ನಾಗ ಎನ್ನುವ ಪದಕ್ಕೆ ಅಂತರ್ಜಲ ಎಂದೂ ಹೇಳಲಾಗುತ್ತದೆ. ಸರ್ಪ ಎನ್ನುವುದು ಕೇವಲ ಶಬ್ದವನ್ನೇ ಆಲಿಸಿ ತೆವಲಿಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳುವ ಒಂದು ಸರೀಸೃಪ.ಹೀಗೆ ಸಂಚರಿಸುವಾಗ ಅವುಗಳು ಅಂತರ್ಜಲ ಜಿನುಗುವ ಸದ್ದಿಗೆ ಸಂಚರಿಸುತ್ತ ಇರುವುದರಿಂದ ಕೆಲವೊಂದು ಕಡೆಗಳಲ್ಲಿ ಮನೆ ನಿವೇಶನಕ್ಕೆ ಮುಂದಡಿ ಇಡುವಾಗ ನಾಗಬೀದಿ ಇದೆಯೇ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ. ಹೀಗೆ ನಾಗಬೀದಿ, ನಾಗನಡೆ ಇರುವಂತಹ ಪ್ರದೇಶಗಳಲ್ಲಿ, ನಿವೇಶಗಳಿಗೆ ಗೊತ್ತು ಪಡಿಸಿದ ಜಾಗಗಳಲ್ಲಿ ನಾಗಲಿಂಗ ಪುಷ್ಪದ ಸಸಿ ನೆಟ್ಟರೆ ಈ ಸಮಸ್ಯೆಗಳು ಬಗೆಹರಿಯುತ್ತದೆ ಎನ್ನುವುದು ನಂಬಿಕೆ.
ಪೂರ್ವಜರು ನಾಗಲಿಂಗದ ಬಗ್ಗೆ ಹೊಂದಿದ್ದ ಮೂಢನಂಬಿಕೆಯೇನು!?
ಸಾಮಾನ್ಯವಾಗಿ ಶಿವ ದೇವಾಲಯಗಲ್ಲಿ, ಬುದ್ಧ ಮಂದಿರಗಳಲ್ಲಿ ಕಂಡು ಬರುತ್ತಿದ್ದ ನಾಗಲಿಂಗ ವೃಕ್ಷವನ್ನು ಮನೆಯಲ್ಲಿಯೂ ಬೆಳೆಯಬಹುದು ಎನ್ನುವ ನಂಬಿಕೆ ಇದ್ದರೂ ಕೆಲವೊಂದು ಮೂಢನಂಬಿಕೆಗಳು ಅಡಚಣೆ ತಂದಿದ್ದವು. ಇವುಗಳನ್ನು ಮನೆಯಲ್ಲಿ ನೆಟ್ಟು ಬೆಳೆಸಿದರೆ ಒಳಿತಾಗುವುದಿಲ್ಲ,ಆರ್ಥಿಕವಾಗಿ ಉಳಿತಾಯವಾಗುವುದಿಲ್ಲ ಎನ್ನುವ ಪರಿಕಲ್ಪನೆಯಿಂದ ಬೆಳೆಸದೆ ಇವುಗಳು ಅವನತಿಯತ್ತ ಸಾಗಿದೆ. ಒಂದು ಕಾಲದಲ್ಲಿ ಅಜ್ಜಿಯ ಮನೆ ಮದ್ದಿನಲ್ಲಿ ತಪ್ಪದೇ ಹಾಜರಿರುತ್ತಿದ್ದ ನಾಗಲಿಂಗ ಕೆಲವರ ಮೂಢನಂಬಿಕೆಗೆ ಬಲಿಯಾಗಿ ತನ್ನ ಇರುವಿಕೆಯನ್ನೇ ಕಳೆದುಕೊಂಡಿದೆ. ಶಿವನಿಗೆ ಅರ್ಪಿತವಾಗುವ ಬಿಲ್ವಪತ್ರೆ ಗಿಡವನ್ನೇ ಮನೆಯಲ್ಲಿ ಬೆಳೆಸಿ, ಪೂಜೆಗೆ ಉಪಯೋಗಿಸುವಾಗ, ಶಿವನಿಗೆ ಪ್ರಿಯವಾದ ನಾಗಲಿಂಗಕ್ಕೆ ಸ್ಥಾನ ಸಿಗದಿರುವುದು ಬೇಸರದ ಸಂಗತಿ.
ಅದೇನೇ ಇರಲಿ, ವಿನೇಶ್ ಪೂಜಾರಿ ಅವರ ಸಮಾಜಮುಖಿ ಚಿಂತನೆಗೆ, ಚಿರಯುವಕನ ವನ್ಯ ಪ್ರೇಮಕ್ಕೆ ಇನ್ನಷ್ಟು ಪುರಸ್ಕಾರಗಳು ಒದಗಿ ಬರಲಿ,ಅವರ ಅಮೃತ ಹಸ್ತದಿಂದ ಇನ್ನಷ್ಟು ಅಳಿವಿನ ಅಂಚಿನ ಗಿಡ-ಮೂಲಿಕೆಗಳು ಬೆಳಕಿಗೆ ಬರಲಿ,ಮುಂದಿನ ಪೀಳಿಗೆಗೂ ಅದರ ಮಹತ್ವ ಅರಿಯುವಂತಾಗಲಿ ಎನ್ನುವುದೇ ಆಶಯ.
ನಿಮಗೂ ನಾಗಲಿಂಗ ಪುಷ್ಪದ ಮಾಹಿತಿ, ಹಾಗೂ ಸಸಿ ಬೇಕಾದಲ್ಲಿ ವಿನೇಶ್ ಅವರನ್ನು ಸಂಪರ್ಕಿಸಬಹುದಾಗಿದ್ದು, ಗಿಡಕ್ಕೆ ಯಾವುದೇ ಹಣ ಪಾವತಿಸದೆ ಉಚಿತವಾಗಿ ಕೊಂಡೊಯ್ಯಬಹುದು.
ಸಂಪರ್ಕ ಸಂಖ್ಯೆ: ವಿನೇಶ್ ಪೂಜಾರಿ 8748870759
?ದೀಪಕ್ ಹೊಸ್ಮಠ