ಗಮನಿಸಿ ವಾಹನ ಸವಾರರೇ, ಹೀಗೇನಾದರೂ ಇದ್ದರೆ ಕೂಡಲೇ ನಿಮ್ಮ ಹಳೆಯ ಹೆಲ್ಮೆಟ್‌ ಬದಲಿಸಿ

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಅದರಲ್ಲಿ ಕೆಲ ಪ್ರಕರಣಗಳು ಚಾಲಕನ ಬೇಜವಾಬ್ದಾರಿ ನಡೆಯಿಂದ ಅನಾಹುತಕ್ಕೆ ಎಡೆ ಮಾಡಿಕೊಡುವ ಪ್ರಮೇಯವನ್ನು ಅಲ್ಲಗಳೆಯುವಂತಿಲ್ಲ. ರೂಲ್ಸ್ ಇರೋದೇ ಬ್ರೇಕ್ ಮಾಡೋದಕ್ಕೆ!!! ಎಂಬಂತೆ ಡ್ರಿಂಕ್ ಆಂಡ್ ಡ್ರೈವ್ ಮಾಡುವ ಇಲ್ಲವೇ ಹೆಲ್ಮೆಟ್ ಧರಿಸದೆ ಓಡಾಡುವ ಅದೆಷ್ಟೋ ಮಂದಿ ಯನ್ನೂ ನಾವು ನೋಡುತ್ತಲೇ ಇರುತ್ತೇವೆ.

 

ಹೆಲ್ಮೆಟ್ ಜೀವ ರಕ್ಷಾ ಕವಚ ಎಂಬ ಮಾಹಿತಿಯ ಅರಿವು ಮೂಡಿಸಿದರು ಕೂಡ ಧರಿಸದೆ ಓಡಾಡುವ ಟ್ರಾಫಿಕ್ ನಿಯಮ ಉಲ್ಲಂಘಿಸಿ ಅಪಾಯಕ್ಕೆ ಆಹ್ವಾನ ಮಾಡಿಕೊಡುವ ನಿದರ್ಶನ ಕೂಡ ನಮ್ಮ ಕಣ್ಣ ಮುಂದೆಯೇ ಇದೆ. ಇದರ ಜೊತೆಗೆ ಟ್ರಾಫಿಕ್ ಪೋಲಿಸ್ ಕೈಯಲ್ಲಿ ಸಿಕ್ಕಿ ಬಿದ್ದು ಫೈನ್ ಕಟ್ಟುವ ಪ್ರಮೇಯ ಕೂಡ ಇದೆ. ರಸ್ತೆಯಲ್ಲಿ ಸಂಚರಿಸುವಾಗ ಟ್ರಾಫಿಕ್ ರೂಲ್ಸ್ ಅನ್ನು ಕಟ್ಟು ನಿಟ್ಟಿನ ಪಾಲನೆಗೆ ಸರ್ಕಾರ ಆದೇಶ ನೀಡುವುದು ಕೇವಲ ನಿಯಮ ಪಾಲನೆಗೆ ಮಾತ್ರವಲ್ಲದೇ ಜನರ ಹಿತಾಸಕ್ತಿಯನ್ನು ಕಾಪಾಡುವ ಹೊಣೆಯಿಂದ ಎಂಬುದನ್ನು ಸಾರ್ವಜನಿಕರು ಮನಗಾಣದೆ ಇರುವುದು ವಿಪರ್ಯಾಸ.

ವಾಹನ ಸವಾರರು ಅದರಲ್ಲಿಯೂ ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸುವುದು ಒಳ್ಳೆಯದು. ಇದನ್ನು ಎಂದಿಗೂ ನಿರ್ಲಕ್ಷಿಸದೇ ಧರಿಸಿದರೆ ಆಗುವ ಅನಾಹುತ ತಪ್ಪಿಸಬಹುದು.ಕೆಲವರು ಹೆಲ್ಮೆಟ್‌ ಚೆನ್ನಾಗಿದ್ದರೆ ಹೊಸ ಹೆಲ್ಮೆಟ್‌ಗಳನ್ನು ಖರೀದಿಸಲು ಮುಂದಾಗುತ್ತಾರೆ. ಅದರಲ್ಲಿ ಕೆಲವರು ಪೊಲೀಸರ ದಂಡ ದಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಒಂದನ್ನೇ ಹೆಚ್ಚಿನ ಕಾಲ ಬಳಸುತ್ತಿರುತ್ತಾರೆ. ಅದು ಒಳ್ಳೆಯದಲ್ಲ. ಹಾಗಿದ್ರೆ ಹಳೆಯ ಹೆಲ್ಮೆಟ್ ಅನ್ನು ಯಾವಾಗ ಬದಲಾಯಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.

ನೀವು ಬಳಕೆ ಮಾಡುವ ಹೆಲ್ಮೆಟ್‌ ಹಳೆಯದಾಗಿದ್ದಲ್ಲಿ, ಅದನ್ನು ಕೊಂಡುಕೊಂಡ ದಿನದ ಬಗ್ಗೆ ನೋಡಿಕೊಳ್ಳುವುದು ಉತ್ತಮ. ಅದರಲ್ಲಿಯೂ ಹೆಲ್ಮೆಟ್ ಮುಕ್ತಾಯದ ದಿನ ಕಳೆದಿದೆಯಾ ಎಂದು ಪರಿಶೀಲಿಸುವುದು ಉತ್ತಮ.

ಈಗಿನ ಹೆಲ್ಮೆಟ್‌ಗಳು ಸುರಕ್ಷತಾ ತಂತ್ರಜ್ಞಾನವು ತ್ವರಿತ ಗತಿಯಲ್ಲಿ ಬೆಳವಣಿಗೆ ಆಗುತ್ತಿದೆ. ಹೀಗಾಗಿ, ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ಹೆಲ್ಮೆಟ್‌ಗಳು ವಿಭಿನ್ನ ಸುರಕ್ಷತೆಯ ವೈಶಿಷ್ಟ್ಯದ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ನಿಮ್ಮ ಹೆಲ್ಮೆಟ್ ಅದಕ್ಕಿಂತ ಹಳೆಯದಾಗಿದ್ದರೆ, ಹೊಸ ಅಪ್‌ಡೇಟ್‌ಗಳಿಲ್ಲದಿದ್ದರೆ ತಕ್ಷಣ ಹೆಲ್ಮೆಟ್ ಅನ್ನು ಬದಲಾಯಿಸುವುದು ಉತ್ತಮ.

ನೀವು ಅನೇಕ ಸಲ ಹೆಲ್ಮೆಟ್ ಧರಿಸಿ ಕೆಳಗೆ ಬಿದ್ದಿದ್ದರೆ ಇಲ್ಲವೇ ಹೆಲ್ಮೆಟ್ ಅಪಘಾತಕ್ಕೀಡಾಗಿದ್ದರೆ, ಹೆಲ್ಮೆಟ್‌ನ ಸುರಕ್ಷತಾ ವೈಶಿಷ್ಟ್ಯ ಕೆಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ನಿಮ್ಮ ಹೆಲ್ಮೆಟ್‌ನ ಹೊರಭಾಗದಲ್ಲಿ ಯಾವುದೇ ಸವೆತ ಇಲ್ಲವೇ ಗೀರುಗಳಿದ್ದರೆ ಗಮನ ಹರಿಸುವುದು ಕ್ಷೇಮಕರ.

ರಸ್ತೆಯಲ್ಲಿ ವಾಹನ ಚಲಾವಣೆ ಮಾಡುವ ಸಂದರ್ಭ ಧರಿಸಬಹುದಾದ ಹೆಲ್ಮೆಟ್ ಗಾಳಿಗೆ ವೇಗವಾಗಿ ತೂಗಾಡುತ್ತಿದ್ದರೆ ಅದರ ಗುಣಮಟ್ಟದ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ದೊರೆಯುತ್ತಿರುವ ಹೆಲ್ಮೆಟ್‌ಗಳು ಏರೋಡೈನಾಮಿಕ್ ವಿನ್ಯಾಸದೊಂದಿಗೆ ಬಂದಿದ್ದು, ಜೋರಾಗಿ ಗಾಳಿ ಬೀಸಿದರು ಕೂಡ ಅದು ಸ್ಥಿರವಾಗಿರುತ್ತದೆ. ಇದನ್ನು ಧರಿಸುವುದರಿಂದ ನಿಮ್ಮ ಕತ್ತಿನ ಸ್ನಾಯುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಜೊತೆಗೆ ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಹಾರಿಹೋಗುವುದನ್ನು ತಡೆಯುತ್ತದೆ. ಈ ವೈಶಿಷ್ಟ್ಯ-ಸಮೃದ್ಧ ಹೆಲ್ಮೆಟ್‌ಗಳನ್ನು ಬಳಸುವುದರಿಂದ ರಕ್ಷಣೆ ಪಡೆಯಬಹುದು.

ಹವಾಮಾನಕ್ಕೆ ಅನುಗುಣವಾಗಿ ಕೆಲ ಪ್ರದೇಶದಲ್ಲಿ ಸೆಕೆ ಹೆಚ್ಚಿದಲ್ಲಿ ಹೆಲ್ಮೆಟ್ ಹಾಕಿಕೊಂಡು ದ್ವಿಚಕ್ರ ವಾಹನ ಓಡಿಸುವಾಗ ತುಸು ಹೆಚ್ಚೇ ಬೆವರುವುದು ಸಹಜ. ಸಾಮಾನ್ಯವಾಗಿ ನಿಮ್ಮ ಬೆವರು ಹೆಲ್ಮೆಟ್‌ನ ಮೃದುವಾದ ಹೈಪೋಲಾರ್ಜನಿಕ್ ಲೈನಿಂಗ್ ಮತ್ತು ಪ್ಯಾಡಿಂಗ್‌ನಿಂದ ಹೀರಲ್ಪಡುತ್ತದೆ. ಹೀಗಾಗಿ, ಹೆಲ್ಮೆಟ್ ಅನ್ನು ಆರು ತಿಂಗಳಿಗೊಮ್ಮೆ ಚೆನ್ನಾಗಿ ತೊಳೆಯುವುದು ಒಳ್ಳೆಯದು. ಏನೇ ಮಾಡಿದರೂ ಹೆಲ್ಮೆಟ್ ವಾಸನೆ ಹೋಗದಿದ್ದರೆ ಹೊಸ ಹೆಲ್ಮೆಟ್ ಖರೀದಿ ಮಾಡಬೇಕು.

ಹೆಲ್ಮೆಟ್‌ ಬಳಕೆ ಮಾಡುವಾಗ ಲೈನಿಂಗ್ ಮತ್ತು ಪ್ಯಾಡಿಂಗ್‌ ಸವೆತದಿಂದ ಪುಡಿಯಂತ ವಸ್ತು ಬಿದ್ದು ಕಣ್ಣಿಗೆ ತೊಂದರೆ ಉಂಟು ಮಾಡಬಹುದು. ಸ್ವಲ್ಪ ಸಮಯದ ಅವಧಿಯಲ್ಲಿ ಹೆಲ್ಮೆಟ್‌ನ ಒಳಭಾಗದ ಮೇಲ್ಮೈ ಸಿಪ್ಪೆ ಸುಲಿಯುವ ಇಲ್ಲವೇ ಕೆಡುವ ಸಾಧ್ಯತೆ ಇದೆ. ಈ ರೀತಿ ಹಾನಿಗೊಳಗಾದ ಹೆಲ್ಮೆಟ್ ಅನ್ನು ಬಳಕೆ ಮಾಡಿದರೆ, ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ಕಿವಿ, ಮೂಗೂ ಅದರ ಪೌಡರ್‌ನಿಂದ ಸಮಸ್ಯೆಗಳುಂಟಾಗುತ್ತವೆ. ಹೀಗಾಗಿ, ಹೆಲ್ಮೆಟ್ ಬಳಕೆ ಮಾಡುವಾಗ ಮೇಲೆ ಹೇಳಿದ ವಿಷಯಗಳ ಕುರಿತು ಗಮನ ಹರಿಸುವುದು ಒಳ್ಳೆಯದು.

Leave A Reply

Your email address will not be published.