Fact Check: ನೋಟಿನ ಮೇಲೆ ಗೀಚಿದ, ತಿದ್ದಿದ ನೋಟು ಚಲಾವಣೆ ಆಗುತ್ತಾ ? ಸರಕಾರ ನೀಡಿದ ಸ್ಪಷ್ಟನೆ ಏನು ? ಇಲ್ಲಿದೆ ಉತ್ತರ
ಕುರುಡು ಕಾಂಚಾಣದ ಮಹಿಮೆಗೆ ಮರುಳಾಗದವರೆ ವಿರಳ. ಝಣ ಝಣ ಕಾಂಚಾಣ ಕೈ ಯಲ್ಲಿ ಇದ್ದರೆ ಜಗತ್ತಿನಲ್ಲಿ ಸಿಗುವ ಬೆಲೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಸಿಗಲು ಸಾಧ್ಯವಿಲ್ಲ ಅನ್ನೋದಂತು ಕಟುಸತ್ಯ. ಅದೇ ಈ ನೋಟಿನ ಮೇಲೆ ಪೆನ್ನಿನಲ್ಲಿ ಗೀಚುವುದೋ, ಕೊಳಕು ಕೈಗಳಲ್ಲಿ ಮುಟ್ಟಿ ಹಾಳು ಮಾಡುವುದೋ ಮಾಡಿದರೆ ನೋಟಿನ ಎಕ್ಸ್ ಪೈರಿ ಮುಗಿಯಿತು ಅಂತಾನೇ ಲೆಕ್ಕ. ಆರ್ಬಿಐ ಕೂಡ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದು, ನೋಟು ಹಾಳಾಗುವ ಕಾರ್ಯದಲ್ಲಿ ತೊಡಗದಂತೆ ರಿಸರ್ವ್ ಬ್ಯಾಂಕ್ ಮನವಿ ಮಾಡುತ್ತದೆ. ಇದೀಗ ನೋಟುಗಳ ಕುರಿತಾದ ಸುದ್ದಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ.
ನೋಟಿನ ಮೇಲೆ ಗೀಚುವುದನ್ನು (Scribbling on the Currency Note) ನಾವು ನೋಡಿರುತ್ತೇವೆ. ನೋಟುಗಳ ಮೇಲೆ ಗೀಚಿ ಹಾಳು ಮಾಡದಿರಿ ಎಂದು ಆರ್ಬಿಐ (Reserve Bank of India) ಆಗಾಗ ಎಚ್ಚರಿಕೆ ನೀಡುತ್ತಲೇ ಬಂದಿದೆ. ಈ ರೀತಿ ಗೀಚಿದ ಮತ್ತು ಹಾಳಾದ ನೋಟು ಅಸಿಂಧುವಾಗಿದ್ದು ಅದು ಚಲಾವಣೆ ಮಾಡಲು ಬರುವುದಿಲ್ಲ ಎಂಬ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದ್ದು, ಹೀಗಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಈ ರೀತಿ ಗೀಚಿದ ನೋಟುಗಳು ನಿಜಕ್ಕೂ ಚಲಾವಣೆಗೆ ಅರ್ಹವಲ್ಲವೆ? ಎಂಬ ಪ್ರಶ್ನೆ ಭುಗಿಲೆದ್ದಿದ್ದು, ಈ ಕುರಿತು ಜನರಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
“ಭಾರತೀಯ ರಿಸರ್ವ್ ಬ್ಯಾಂಕಿನ ಹೊಸ ಮಾರ್ಗಸೂಚಿಗಳ ಅನುಸಾರ, ಹೊಸ ನೋಟಿನ ಮೇಲೆ ಏನಾದರೂ ಗೀಚುವುದಿಂದ ಅದು ಚಲಾವಣೆಗೆ ಅನರ್ಹವಾಗುತ್ತದೆ” ಎಂಬ ಮಾಹಿತಿಯ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದನ್ನು ಗಮನಿಸಿದ ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ ವಿಭಾಗ ಇದಕ್ಕೆ ಸ್ಪಷ್ಟೀಕರಣ ನೀಡಿದೆ.
ಹೊಸ ನೋಟುಗಳ ಮೇಲೆ ಏನಾದರೂ ಗೀಚುವುದರಿಂದ ಆ ನೋಟಿನ ಮಾನ್ಯತೆ ಸ್ಥಗಿತಗೊಳ್ಳುವುದಿಲ್ಲ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಅನೇಕ ಕಾರಣಗಳಿಂದ ಒಂದು ನೋಟು ಕೆಲ ವರ್ಷಗಳ ಬಳಕೆಯ ಬಳಿಕ ಹಾಳಾದ ಸ್ಥಿತಿಗೆ ತಲುಪುತ್ತದೆ ಜೊತೆಗೆ ನೋಟು ಹರಿದುಹೋಗುವ ಪ್ರಮೇಯ ಕೂಡ ಇದೆ. ಒಂದು ವೇಳೆ ಆ ರೀತಿ ಆದರೆ ಹೆದರುವ ಅವಶ್ಯಕತೆ ಇರುವುದಿಲ್ಲ. ನೋಟಿನ ನಂಬರ್ ಸರಿಯಾಗಿ ಕಾಣುವಂತಿದ್ದರೆ ಅದನ್ನು ಯಾವುದೇ ಬ್ಯಾಂಕಿಗೆ ಹೋಗಿ ಹೊಸ ನೋಟಿಗೆ ವಿನಿಮಯ ಮಾಡಲು ಅವಕಾಶ ಇದೆ.
ನೋಟಿನ ಮೇಲೆ ಬರೆದರೆ ಏನೂ ಆಗಲ್ಲ ಎಂದು ಭಾವಿಸಿ ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ ಮಾಡದಿರುವುದು ಉತ್ತಮ. ನೋಟನ್ನು ಆದಷ್ಟೂ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ನೋಟಿನ ಮುದ್ರಣಕ್ಕೆ ಸರ್ಕಾರ ಬಹಳಷ್ಟು ದುಡ್ಡು ಖರ್ಚು ಮಾಡುತ್ತಿರುವ ಹಿನ್ನೆಲೆ ಆರ್ ಬಿಐ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಾ ಬಂದಿದೆ.
ಕರೆನ್ಸಿ ನೋಟಿಗೆ ಈ ರೀತಿ ಮಾಡಬೇಡಿ:
ಯಾವುದೇ ಬ್ಯಾಂಕ್ ನೋಟಿಗೆ ಸ್ಟೇಪಲ್ ಪಿನ್ ಅದುಮದಿರಿ ಜೊತೆಗೆ ನೋಟುಗಳನ್ನು ಪೋಣಿಸಿ ಹಾರದಂತೆ ಮಾಡಬೇಡಿ. ಈ ಹಿಂದೆ, ಬ್ಯಾಂಕಿನಲ್ಲಿರುವ ಸಿಬ್ಬಂದಿಯೇ ಸಾಮಾನ್ಯವಾಗಿ ನೋಟುಗಳ ಕಂತೆಗೆ ಸ್ಟೇಪಲ್ ಪಿನ್ ಚುಚ್ಚುವ ಕೆಲ್ಸ ಮಾಡುತ್ತಾ ಜೊತೆಗೆ ಎಣಿಕೆಗೆ ಸಹಾಯವಾಗಲು ಗುರುತಿಗೆ ನಂಬರ್ ಬರೆಯುವ ಕ್ರಮ ಅನುಸರಿಸುತ್ತಿದ್ದರು. ಈಗ ರಬ್ಬರ ಬ್ಯಾಂಡ್ ಹಾಕಲಾಗುತ್ತದೆ ಮತ್ತು ಎಣಿಕೆಗೆ ಮೆಷೀನ್ ಕೂಡ ಇರುವುದರಿಂದ ಪಿನ್ ಚುಚ್ಚುವ ಅಭ್ಯಾಸ ನಿಂತಿದೆ.
ಅಭಿಮಾನ ತೋರಲು ನೋಟುಗಳನ್ನು ಎರಚುವುದೋ, ನೆಲಕ್ಕೆ ಬಿಸುಡುವುದೋ ಇತ್ಯಾದಿ ಮಾಡಬಾರದು. ಇದರ ಜೊತೆಗೆ ಡೆಕೋರೇಶನ್ ಮಾಡಲು ನೋಟುಗಳನ್ನು ಬಳಸಬೇಡಿ. ನೋಟುಗಳ ಮೇಲೆ ಬರೆಯಬೇಡಿ ಜೊತೆಗೆ ನೋಟು ಹಾಳಾಗುವಂಥ ಯಾವುದೇ ಅಭ್ಯಾಸವನ್ನೂ ಮಾಡದಿರಿ ಎಂದು ರಿಸರ್ವ್ ಬ್ಯಾಂಕ್ ಮನವಿ ಮಾಡುತ್ತದೆ. ಮೇಲೆ ತಿಳಿಸಿದ ವಿಷಯಗಳ ಕುರಿತು ಸಾರ್ವಜನಿಕರು ಗಮನಿಸಿ ಕೇಂದ್ರ ಸರ್ಕಾರದ ಕಾರ್ಯಗಳಿಗೆ ಬೆಂಬಲ ನೀಡುವುದು ಉತ್ತಮ.