ಚರಂಡಿಯೊಳಗೇ ಕಿಲೋಮೀಟರ್ ಗಟ್ಟಲೆ ನಡೆದು ಬಂದ ಭೂಪ | ಹಿಂದೆ ಇನ್ನೂ 30 ಜನ ಇದ್ದಾರೆ ಎಂದ !
ಚರಂಡಿ ಒಂದರಿಂದ ವ್ಯಕ್ತಿಯೊಬ್ಬ ಏಕಾಏಕಿ ಮೇಲೆದ್ದು ಬಂದು ಸ್ಥಳೀಯರಿಗೆ ಗಾಬರಿ ಉಂಟುಮಾಡಿದ್ದಾನೆ. ತನ್ನ ಜೊತೆಗೆ ಚರಂಡಿಯಲ್ಲಿ ಇನ್ನೂ 30 ಜನ ಇದ್ದಾರೆ, ಅವರನ್ನೂ ಮೇಲೆತ್ತಿ ಎಂದು ಅಲ್ಲಿದ್ದವರಿಗೆ ಆತಂಕ ಮೂಡಿಸಿದ ಘಟನೆಯೊಂದು ನಿನ್ನೆ ನಡೆದಿದೆ.
ಬೆಂಗಳೂರಿನ ಯಶವಂತಪುರದ ಬಳಿ ಇರುವ ಎಂಇಐ ಸಿಗ್ನಲ್ ಬಳಿ ಶನಿವಾರ ಬೆಳಿಗ್ಗೆ 11.30ರ ಸುಮಾರಿಗೆ ವ್ಯಕ್ತಿಯೊಬ್ಬ ಏಕಾಏಕಿ ಚರಂಡಿಯಿಂದ ಮೇಲೆದ್ದು ಬಂದಿದ್ದಾನೆ. ಆತನ ಮೈತುಂಬಾ ಚರಂಡಿ ಗಲೀಜು ಮೆತ್ತಿಕೊಂಡಿತ್ತು. ಗಾಬರಿಗೊಂಡ ಸ್ಥಳೀಯರು ಪರಿಸ್ಥಿತಿ ನೋಡಿ ಆತನನ್ನು ಪ್ರಶ್ನಿಸಿದ್ದಾರೆ. ಆಗ ಆತ, ‘ನಾನು ಶ್ರೀರಾಮಪುರದಿಂದ ಇಲ್ಲಿಯತನಕ ಚರಂಡಿಯೊಳಗೆ ನುಸುಳಿ, ನಡೆದು ಬಂದಿದ್ದೇನೆ. ಇನ್ನೂ 30 ಜನ ಚರಂಡಿ ಒಳಗೆ ಇದ್ದಾರೆ’ ಎಂದು ಹೇಳಿದ್ದಾನೆ. ಈತನ ಮಾತಿಗೆ ಸ್ಥಳೀಯರು ಬೆಚ್ಚಿಬಿದ್ದು, ಕೂಡಲೇ ಸ್ಥಳೀಯರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಷಯ ಮುಟ್ಟಿಸಿ ಪೋಲೀಸರಲ್ಲಿ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ.
ಸುದ್ದಿ ತಿಳಿದ ತಕ್ಷಣ ಪೊಲೀಸರು ಕಾರ್ಯ ಪ್ರವೃತ್ತರಾಗಿ ಅಗ್ನಿಶಾಮಕ ತಂಡಕ್ಕೆ ಸುದ್ದಿ ಕೊಟ್ಟಿದ್ದಾರೆ. ಅಲ್ಲದೆ ಮುನಿಸಿಪಾಲಿಟಿಗೂ ಸುದ್ದಿ ತಲುಪಿದೆ. ಎಲ್ಲರೂ ಸ್ಥಳಕ್ಕೆ ಓಡಿ ಬಂದಿದ್ದಾರೆ. ರಕ್ಷಣಾ ಕಾರ್ಯಕ್ಕೆ ಧಾವಿಸಿ ಬಂದ ತಂಡಗಳು ಸುಮಾರು ಗಂಟೆಗಳ ಕಾಲ ಚರಂಡಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಚರಂಡಿಯಲ್ಲಿ ಯಾರೊಬ್ಬರ ಸುಳಿವೂ ಕಂಡುಬಂದಿಲ್ಲ. ಒಟ್ಟಿನಲ್ಲಿ ಅಯೋಮಯ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು.
ತದನಂತರ ಚರಂಡಿಯಿಂದ ಮೇಲೆ ಬಂದು ಮೈಮೇಲೆ ಗಲೀಜು ಮೆತ್ತಿಕೊಂಡಿದ್ದ ವ್ಯಕ್ತಿಗೆ ಸ್ನಾನ ಮಾಡಿಸಿ, ತಿಂಡಿ ತಿನ್ನಿಸಿ ಸಮಾಧಾನದಿಂದ ಪ್ರಶ್ನೆ ಮಾಡಲಾಗಿದೆ. ಆಗ ಆತ ಹೇಳಿದ ಸುದ್ದಿ ಕೇಳಿ ಮತ್ತೆ ಬೆಚ್ಚಿ ಬೀಳಿಸುವ ಸರದಿ ಪೊಲೀಸರದ್ದಾಗಿತ್ತು. ಆತ ಹೇಳಿದ್ದೇನು ಗೊತ್ತ? ‘ನಾನು ಚರಂಡಿಯ ಒಳಗಿರುವ ರಾಕೇಟ್‌ನಲ್ಲಿ ಇಲ್ಲಿಗೆ ಬಂದೆ’ ಎಂದಿದ್ದಾನೆ. ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದ ಈತನ ಹೆಸರು ರಾಜು ಎನ್ನಲಾಗಿದ್ದು, ಆತ ತನ್ನ ಕುಟುಂಬದ ಬಗ್ಗೆಯೂ ಗೊಂದಲದ ಹೇಳಿಕೆಗಳನ್ನು ನೀಡಿದ್ದಾನೆ.
ನೋಡಲು ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ ಎನ್ನುವ ಮಾಹಿತಿ ಇದೆ. ಹೀಗಾಗಿ ಅಲ್ಲಿನ ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು, ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲು ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.