ಸರ್ಕಾರಕ್ಕೆ ಬೋಳು ತಲೆ ಪುರುಷರ ಸಂಘದ ವಿಶೇಷ ಮನವಿ! ತಿಂಗಳಿಗೆ 6 ಸಾವಿರ ಪಿಂಚಣಿ ನೀಡಲು ಒತ್ತಾಯ !
ನಮಗೂ ಪ್ರತೀ ತಿಂಗಳಿಗೆ 6 ಸಾವಿರ ರೂಪಾಯಿಗಳಷ್ಟು ಪಿಂಚಣಿ ನೀಡಿ ಎಂದು ಬೋಳು ತಲೆ ಪುರುಷರ ಸಂಘವೊಂದು ತೆಲಂಗಾಣ ಸರ್ಕಾರಕ್ಕೆ ಮನವಿ ಸಲ್ಲಿಸಿದ ವಿಚಿತ್ರ ಘಟನೆಯೊಂದು ನಡೆದಿದೆ.
ತೆಲಂಗಾಣದ ಸಿದ್ಧಪೇಟೆ ಜಿಲ್ಲೆಯ ತಂಗಲ್ಲಪಲ್ಲಿ ಎಂಬ ಗ್ರಾಮದಲ್ಲಿ ತಲೆಯಲ್ಲಿ ಕೂದಲಿಲ್ಲದ ಪುರುಷರೆಲ್ಲರೂ ಸೇರಿಕೊಂಡು ಬೋಳು ತಲೆ ಪುರುಷರ ಸಂಘೊಂದನ್ನು ರಚಿಸಿಕೊಂಡಿದ್ದಾರೆ. ಇದರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸದಸ್ಯರು ‘ತಲೆಯಲ್ಲಿ ಕೂದಲಿಲ್ಲದೆ ನಾವೆಲ್ಲರೂ ಸಾಕಷ್ಟು ಮುಜುಗರ ಅನುಭವಿಸುತ್ತಿದ್ದೇವೆ. ಅಲ್ಲದೆ ಕೆಲವರು ನಮ್ಮನ್ನು ನೋಡಿ ಅಣಕಿಸುವುದರಿಂದ ಮಾನಸೀಕ ನೋವುಂಟಾಗಿದೆ. ಹೀಗಾಗಿ ಸರ್ಕಾರ ನಮ್ಮ ಬಗ್ಗೆ ವಿಶೇಷ ಗಮನ ಹರಿಸಬೇಕು’ ಎಂದು ಕೇಳಿಕೊಂಡಿದ್ದಾರೆ.
ಜನವರಿ 5 ರಂದು ಸಂಘದ ಸದಸ್ಯರೆಲ್ಲರೂ ಸೇರಿ ಅನೌಪಚಾರಿಕ ಸಭೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲು ಒಮ್ಮತದಿಂದ ತೀರ್ಮಾನ ಕೈಗೊಂಡಿದ್ದರು. ಅದರಂತೆ ಅವರು, ಸರ್ಕಾರವು ಕೂದಲು ಕಳೆದುಕೊಂಡ ನಮ್ಮಂತವರಿಗೆ ನೆರವಾಗಬೇಕು, ಬೋಳು ತಲೆ ಹೊಂದಿದ ಪುರುಷರಿಗೆ ಮಾಸಿಕವಾಗಿ 6 ಸಾವಿರ ಪಿಂಚಣಿ ನೀಡಬೇಕು, ಸಂಕ್ರಾಂತಿ ಹಬ್ಬದ ಪ್ರಯುಕ್ತ ಇದನ್ನು ನಮಗೆ ಉಡುಗೊರೆಯಾಗಿ ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸಂಘದ ಸದಸ್ಯರಲ್ಲಿ ಒಬ್ಬರಾದ 41 ವರ್ಷದ ಅಂಜಿ ಎಂಬುವರು ಮಾತನಾಡಿ ‘ ನನಗೆ 20 ವರ್ಷ ಇರುವಾಗಲೇ ಕೂದಲು ಉದುರಲು ಶುರುವಾಗಿತ್ತು. ಅಂದಿನಿಂದಲೂ ಎಲ್ಲರೂ ತಮಾಷೆ ಮಾಡುತ್ತಾ ಬಂದಿದ್ದಾರೆ. ಈಗಂತೂ ನಮ್ಮನ್ನು ನೋಡಿ ಜನರು ನೀಡುವ ಕಮೆಂಟ್ಗಳು ಮನಸ್ಸಿಗೆ ತುಂಬಾ ನೋವುಂಟುಮಾಡುತ್ತದೆ. ಈಗಾಗಲೇ ನಾವು ಬೋಳು ತಲೆ ಬಗ್ಗೆ ಸಾಕಷ್ಟು ಚಿಂತೆಗೀಡಾಗಿದ್ದೇವೆ. ಜನರ ಮಾತುಗಳಿಂದ ಇನ್ನೂ ಮಾನಸಿಕ ಸಂಕಟವಾಗುತ್ತಿದೆ. ಎಂದು ಹೇಳಿದರು.
ಒಂದು ವೇಳೆ ಸರ್ಕಾರ ಪಿಂಚಣಿ ನೀಡಿದರೆ ಆ ಹಣವನ್ನು ಏನು ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ ಕೂದಲನ್ನು ಹೊಂದಲು ಚಿಕಿತ್ಸೆ ಪಡೆಯುತ್ತೇವೆ. ಸದಸ್ಯರೆಲ್ಲರೂ ಆ ಹಣವನ್ನು ಚಿಕಿತ್ಸೆ ಪಡೆಯಲು ಬಳಸಿಕೊಳ್ಳುತ್ತೇವೆ’ ಎಂದರು. ಬಳಿಕ ಮಾತನಾಡಿದ ಅವರು ಸರ್ಕಾರ ಈಗಾಗಲೇ ಅಂಗವಿಕಲರಿಗೆ, ವಿಧವೆಯರಿಗೆ, ವೃದ್ಧರಿಗೆ ಎಂದು ಪಿಂಚಣಿ ನೀಡುತ್ತಾ ಬಂದಿದೆ. ಇದೀಗ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ನಮಗೂ ಪಿಂಚಣಿ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು ಎಂದರು.
50 ವರ್ಷದ ಹೆಲ್ಡಿ ಬಾಲಯ್ಯ ಎಂಬುವರು ಔಪಚಾರಿಕವಾಗಿ ಸಂಘವನ್ನು ಸೇರಿದ್ದರೂ ಕೂಡ ಸದ್ಯ ಸಂಘದ ಅಧ್ಯಕ್ಷರಾಗಿದ್ದಾರೆ. ಪದಾಧಿಕಾರಿಗಳು ಇದ್ದಾರೆ. ಇನ್ನೂ ಹಲವರು ಸದಸ್ಯರು ಸಂಘಕ್ಕೆ ಸೇರುತ್ತಿದ್ದಾರೆ. ಸಂಕ್ರಾಂತಿ ಬಳಿಕ ಮತ್ತೊಮ್ಮೆ ಸಂಘದ ಸಭೆ ಕರೆಯಲಾಗಿದ್ದು 30 ಕ್ಕೂ ಹೆಚ್ಚು ಜನರು ಭಾಗವಹಿಹುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.