ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗಳಿಸಿದ SDPI ಪಾರ್ಟಿ| ಇವರೇ ನೋಡಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳು
ವಿಧಾನಸಭೆ ಚುನಾವಣೆ ನಿಮಿತ್ತ ಕರ್ನಾಟಕದಲ್ಲಿ ಎಲ್ಲಾ ಪಕ್ಷಗಳು ಕ್ಷೇತ್ರವಾರು ತಮ್ಮ ಅಭ್ಯರ್ಥಿಗಳ ಹಂಚಿಕೆ ಮಾಡಿ ಮೊದಲ ಹಂತದ ಪಟ್ಟಿಯನ್ನು ಬಿಡುಗೊಳಿಸಲು ತರಾತುರಿಯಲ್ಲಿವೆ. ಇದರ ನಡುವೆ ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚು ಉತ್ಸಾಹ ತೋರುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷವು ರಾಜ್ಯದ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತನ್ನ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂಕೆ ಫೈಜಿ ಬೆಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ನಡೆಸಿ ಮೊದಲ ಹಂತದ 10 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಾವು ಚಿಂತನೆ ನಡೆಸಿದ್ದು, ಸದ್ಯ 43 ಕ್ಷೇತ್ರಗಳು ಅಂತಿಮಗೊಂಡಿವೆ. ಅದರಲ್ಲಿ ಮೊದಲ ಹಂತಾವಾಗಿ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದೇವೆ ಎಂದರು.
ಬಳಿಕ ಮಾತನಾಡಿದ ಅವರು ‘ಬಿಜೆಪಿಗೆ ತನ್ನ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಲು ಯಾವುದೇ ವಿಚಾರ ಇಲ್ಲ. ತನ್ನ ಆಡಳಿತ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ .ಹೀಗಾಗಿ ಎಂದಿನಂತೆ ಮುಂದಿನ ಚುನಾವಣೆಗೂ ಕೂಡ ಗದ್ದಲ ಮಾಡಲು ಮುಂದಾಗಿದೆ. ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೂಡ ಇದೇ ಹಾದಿಯಲ್ಲಿವೆ’ ಎಂದರು.
ಅಭ್ಯರ್ಥಿಗಳ ಕುರಿತು ತಿಳಿಸಿದ ಅವರು ನರಸಿಂಹರಾಜ ವಿಧಾನಸಭಾ ಕ್ಷೇತ್ರ ದಿಂದ ಅಬ್ದುಲ್ ಮಜೀದ್, ಪುಲಕೇಶಿ ನಗರದಿಂದ ಭಾಸ್ಕರ್ ಪ್ರಸಾದ್, ಸರ್ವಜ್ಞ ನಗರದಿಂದ ಅಬ್ದುಲ್ ಹನ್ನಾನ್, ಬಂಟ್ವಾಳದಿಂದ ಇಲ್ಯಾಸ್ ಮುಹಮ್ಮದ್, ಕಾಪು ಕ್ಷೇತ್ರದಿಂದ ಹನೀಶ್ ಮುಳೂರು, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಇಸ್ಮಾಯಿಲ್ ಝಬಿಯುಲ್ಲಾ, ಚಿತ್ರದುರ್ಗದಿಂದ ಶ್ರೀನಿವಾಸ್ ಬಾಳೆಕಾಯಿ,
ವಿಜಯನಗರ ಕ್ಷೇತ್ರದಲ್ಲಿ ನಝೀರ್ ಖಾನ್, ಮೂಡಬಿದರೆಯಿಂದ ಅಲ್ಪಾನ್ಸೋ ಫ್ರಾಂಕೋ, ಬೆಳ್ತಂಗಡಿ ಕ್ಷೇತ್ರದಿಂದ ಅಕ್ಬರ್ ಬೆಳ್ತಂಗಡಿ ಇವರುಗಳು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.
ಮುಂದೆ ಮಾತನಾಡಿ ‘ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಹಾಳಾಗಿದೆ. ಕಳೆದ ಬಾರಿ ಬಿಜೆಪಿಗೆ ಬಹುಮತ ಸಿಗಲಿಲ್ಲ. ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸರ್ಕಾರ ಮಾಡಿದರು. ಆದರೆ ಕಾಂಗ್ರೆಸ್ ಪಕ್ಷದ ಶಾಸಕರನ್ನು ಬಿಜೆಪಿ ಬಟ್ಟೆ ಕೊಳ್ಳುವಂತೆ ಖರೀದಿಸಿ ಸರ್ಕಾರ ರಚನೆ ಮಾಡಿತು. ನಮ್ಮಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಆಗಬೇಕು. ಆದರೆ ಯಾರೂ ಇದರ ಬಗ್ಗೆ ಗಮನ ಕೊಡುವುದಿಲ್ಲ. ಹೀಗಾಗಿ ಇದಕ್ಕೆ SDPI ಹೊಸ ಪರ್ಯಾಯ ಪಕ್ಷವಾಗಿದೆ. ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಕೆಲಸ ಮಾಡುತ್ತಾರೆ, ದಯವಿಟ್ಟು ಎಲ್ಲರೂ ನಮ್ಮನ್ನು ಬೆಂಬಲಿಸಬೇಕು’ ಎಂದರು.