ಮಲ್ಟಿಸ್ಟಾರ್ ಸಿನಿಮಾಗಳಲ್ಲಿ ನಟಿಸುವುದಿಲ್ಲ, ನಾನು ಪೋಷಕ ನಟನಲ್ಲ – ಸುದೀಪ್ ಈ ರೀತಿ ಹೇಳಲು ಕಾರಣವೇನು?
ಕಿಚ್ಚ ಸುದೀಪ್ ಕನ್ನಡ ಹೆಸರಾಂತ ನಟ. ಅಭಿನಯ ಚಕ್ರವರ್ತಿಯಾಗಿ ಕನ್ನಡಕ್ಕೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರು. ಅಷ್ಟೇ ಅಲ್ಲದೆ ಭಾರತೀಯ ಚಿತ್ರರಂಗದಲ್ಲಿಯೂ ಸುದೀಪ್ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಕನ್ನಡ ಹಾಗೂ ಇತರ ಭಾಷೆಗಳಲ್ಲಿ ಅನೇಕ ಸ್ಟಾರ್ ನಟರೊಂದಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಸುದೀಪ್ ಇನ್ನು ಮುಂದೆ ಮಲ್ಟಿಸ್ಟಾರ್ ಸಿನಿಮಾದಲ್ಲಿ ನಟಿಸಲಾರೆ ಎಂದಿದ್ದಾರೆ.
ಈ ಮೊದಲು ಸುದೀಪ್, ಸ್ಯಾಂಡಲ್ ವುಡ್ ನ ಹಲವಾರು ಹೆಸರಾಂತ ನಟರಾದ ಶಿವರಾಜ್ ಕುಮಾರ್, ಅಂಬರೀಷ್, ಚಿರಂಜೀವಿ ಸರ್ಜಾ, ರವಿಚಂದ್ರನ್, ಉಪೇಂದ್ರ ಹೀಗೆ ಅನೇಕರೊಂದಿಗೆ ತೆರೆ ಹಂಚಿಕೊಂಡಿದ್ದರು. ಆದರೆ ಶಿವರಾಜ್ ಕುಮಾರ್ ಜೊತೆಗೂಡಿ ಮಾಡಿದ ‘ದಿ ವಿಲನ್’ ಸಿನಿಮಾ ನಂತರ ಹಲವು ನೆಗೆಟಿವ್ ಕಮೆಂಟ್ಸ್ ಗಳು ಕೇಳಿಬಂದಿದ್ದವು. ಆ ಸಮಯದಲ್ಲೇ ಮುಂದೆ ಮಲ್ಟಿಸ್ಟಾರ್ ಸಿನಿಮಾದಲ್ಲಿ ನಟಿಸಲಾರೆ ಎನ್ನುವ ಅರ್ಥದಲ್ಲಿ ಸುದೀಪ್ ಮಾತನಾಡಿದ್ದರು. ಆದರೀಗ ತಾವೇ ಸ್ವತಃ ಈ ಕುರಿತು ಹೇಳಿಕೆ ನೀಡಿದ್ದಾರೆ.
ತೆಲುಗು ಗ್ಲಿಟ್ಜ್ ಯೂಟ್ಯೂಬ್ ಚಾನಲ್ಗೆ ಕೊಟ್ಟ ಸಂದರ್ಶನದಲ್ಲಿ ಉಪೇಂದ್ರ ನಿರ್ದೇಶನದ ‘ಕಬ್ಜ’ ಸಿನಿಮಾದ ಬಗ್ಗೆ ಮಾತನಾಡಿ ತಮ್ಮ ಪಾತ್ರದ ಕುರಿತು ಹೇಳಿಕೊಂಡಿದ್ದಾರೆ. ಬಳಿಕ ಈ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ‘ನಾನು ಪೋಷಕ ಕಲಾವಿದ ಅಲ್ಲ, ನಾನೂ ಕೂಡ ಒಬ್ಬ ಸ್ಟಾರ್ ನಟ. ಅಲ್ಲದೆ ಮತ್ತೊಬ್ಬ ಸ್ಟಾರ್ ನಟರ ಜೊತೆ ನಟಿಸುವುದು ಅಷ್ಟು ಸುಲಭವಲ್ಲ. ಸದ್ಯ ಕಬ್ಜದಲ್ಲಿ ಮಾಡಿದ್ದು ತುಂಬಾ ಚಿಕ್ಕ ಪಾತ್ರ. ಆದರೆ ಇನ್ನು ಮುಂದೆ ಮಲ್ಟಿಸ್ಟಾರ್ ಸಿನೆಮಾಗಳಲ್ಲಿ ನಟಿಸಬಾರದು ಎಂಬ ನಿರ್ಧಾರ ಮಾಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ಕಿಚ್ಚ ಸುದೀಪ್ ನಾನಿ ಜೊತೆ ‘ಈಗ’ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಾಗ ಅವರ ಖ್ಯಾತಿ ಬೇರೆ ಲೆವೆಲ್ಗೆ ಹೋಯಿತು. ಪರಭಾಷೆಗಳಲ್ಲಿ ಗೆಸ್ಟ್ ರೋಲ್ಗಳಿಗೆ ಡಿಮ್ಯಾಂಡ್ ಹೆಚ್ಚಾಗಿತ್ತು. ಆ ಬಳಿಕ ಸೌತ್ ಇಂಡಿಯಾದ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
ಇದುವರೆಗೂ ಇಬ್ಬರು ಸ್ಟಾರ್ ಗಳು ಜೊತೆಯಾಗಿ ಮಾಡಿದ ಸಿನಿಮಾಗಳ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿದ್ದು ತೀರಾ ಕಡಿಮೆ. ಅಭಿಮಾನಿಗಳ ಕಿತ್ತಾಟ ಸೇರಿದಂತೆ ಹಲವು ತೊಂದರೆಗಳನ್ನೂ ನಿರ್ದೇಶಕರು, ನಿರ್ಮಾಪಕರು ಅನುಭವಿಸಿದ ಉದಾಹರಣೆಗಳು ಇವೆ. ಹಾಗಾಗಿ ಮಲ್ಟಿಸ್ಟಾರ್ ಸಿನಿಮಾಗಳನ್ನು ಮಾಡುವುದು ಸುಲಭವಲ್ಲ. ಹೀಗಾಗಿ ಸುದೀಪ್ ಇಂಥದ್ದೊಂದು ನಿರ್ಧಾರ ತಗೆದುಕೊಂಡಿರುವುದು ಒಂದು ಲೆಕ್ಕದಲ್ಲಿ ಸೂಕ್ತ ಎನಿಸುವುದು ಸಹಜ.