BMTC ಮತ್ತು KSRTC ನಡುವೆ ಕೋಲ್ಡ್ ವಾರ್! ಚಿಕ್ಕಬಳ್ಳಾಪುರಕ್ಕೂ ಬಿಎಂಟಿಸಿ ವಿಸ್ತರಣೆ ಹಿನ್ನೆಲೆ ಶುರುವಾಯ್ತು ಸಂಸ್ಥೆಗಳ ಮುಸುಕಿನ ಗುದ್ದಾಟ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬಿಎಂಟಿಸಿ ಬಸ್ ಸಂಚಾರವನ್ನು ಚಿಕ್ಕಬಳ್ಳಾಪುರ ಜಿಲ್ಲೆಗೂ ವಿಸ್ತರಿಸುವುದಾಗಿ ಕೆಲವು ದಿನಗಳ ಹಿಂದಷ್ಟೇ ಬಿಎಂಟಿಸಿ ಸಂಸ್ಥೆಯು ಆದೇಶ ಹೊರಡಿಸಿತ್ತು. ಆದರೀಗ ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ KSRTC ಸಂಸ್ಥೆಯು ಬಿಎಂಟಿಸಿಯ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಎರಡು ಸಂಸ್ಥೆಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಬಿಎಂಟಿಸಿ ಬಸ್ ಗಳ ಸಂಚಾರಕ್ಕೆ ಅನುಮತಿ ಇದೆ. ಆದರೆ ಚಿಕ್ಕಬಳ್ಳಾಪುರಕ್ಕೂ ಸಂಚಾರ ವಿಸ್ತರಣೆ ಮಾಡಿರುವ ಹಿನ್ನಲೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕೆಎಸ್ಆರ್ಟಿಸಿ ಅಧಿಕಾರಿಗಳು BMTC ನಡೆ ಖಂಡಿಸಿ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಎಂಟಿಸಿ ಸಂಚಾರ ಮಾಡಿದರೆ KSRTCಗೆ ಆದಾಯಕ್ಕೆ ಹೊಡೆತ ಬೀಳುವ ಭೀತಿ ಹಿನ್ನಲೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಬಸ್ ಓಡಿಸುವುದಕ್ಕೆ ಬಿಎಂಟಿಸಿ ಸಂಸ್ಥೆಯು ಅನುಮತಿ ಪಡೆದಿದೆ. ಅದಲ್ಲದೆ ಬಿಬಿಎಂಪಿ ವ್ಯಾಪ್ತಿಯಿಂದ ಹೊರಗೆ ಕೇವಲ 25 ಕಿಮೀ ಮೀಟರ್ ಮಾತ್ರ ಬಸ್ ಓಡಿಸಲು ಅವಕಾಶ ಇದೆ. ಆದರೀಗ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸುಮಾರು 60 ಕಿಮೀ ಮೀಟರ್ ಅಂತರವಿದೆ. ಇಷ್ಟು ದೂರಕ್ಕೆ ಬಿಎಂಟಿಸಿ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡದ್ದು ಸರಿಯಲ್ಲ. ನಿಯಮದ ಪ್ರಕಾರ ಬಸ್ ಸಂಚಾರ ವಿಸ್ತರಣೆ ಮಾಡಲು ಅವಕಾಶ ಇಲ್ಲ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಜನವರಿ 4ರಂದು ಬಿಎಂಟಿಸಿ ಆಡಳಿತ ಮಂಡಳಿ ಸಭೆ ನಡೆಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಬಿಎಂಟಿಸಿ ಸಂಚಾರ ವಿಸ್ತರಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು. ಚಿಕ್ಕಬಳ್ಳಾಪುರ ಜನರ ಬೇಡಿಕೆಗೆ ಸ್ಪಂದಿಸಿ ಬಿಎಂಟಿಸಿ ಸಂಚಾರಕ್ಕೆ ಅನುಮತಿ ನೀಡುವ ಮೂಲಕ ಪ್ರಯಾಣಿಕರಿಗೆ ಗುಡ್ನ್ಯೂಸ್ ನೀಡಿತ್ತು. ಕೇವಲ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಬಿಎಂಟಿಸಿ ಬಸ್ಗಳು ಇನ್ನು ಮುಂದೆ ಚಿಕ್ಕಬಳ್ಳಾಪುರಕ್ಕೂ ಸಂಚರಿಸುವ ತಯಾರಿಯಲ್ಲಿದ್ದವು.
ಆದರೆ ಈ ನಡುವೆಯೇ KSRTC ಸಂಸ್ಥೆಯು ಬಿಎಂಟಿಸಿ ವಿರುದ್ಧ ತನ್ನ ಆಕ್ರೋಶ ಹೊರಹಾಕಿದೆ. ಎರಡೂ ಸಂಸ್ಥೆಗಳ ನಡುವೆ ಮುಸುಕಿನ ಗುದ್ದಾಟದೊಂದಿಗೆ ಕೋಲ್ಡ್ ವಾರ್ ಶುರುವಾಗಿದೆ. ಇದರ ಕುರಿತಾಗಿ ಸಂಸ್ಥೆಗಳ ಮುಂದಿನ ನಡೆ ಏನು ಎಂಬುದಾಗಿ ಕಾದು ನೋಡಬೇಕಿದೆ.