ಸರಸಕೆ ಬಾರೋ ಸರಸನೆ ಎಂದು ಬಲೆ ಬೀಸುತ್ತಿದ್ದ ಇಬ್ಬರ ಬಂಧನ!!! ಹನಿಟ್ರ್ಯಾಪ್ ಪ್ರಕರಣ
ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕೆಲವೊಂದು ಪ್ರಕರಣಗಳೂ ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತವೆ. ಅಪರಾಧ ಪ್ರಕರಣಗಳನ್ನು ಮಾಡುವ ಆರೋಪಿಗಳು ತಮ್ಮ ಬತ್ತಳಿಕೆಯಿಂದ ನಾನಾ ರೀತಿಯ ಪ್ರಯೋಗ ನಡೆಸಿ ಕುರಿ ಹಳ್ಳಕ್ಕೆ ಬೀಳುವುದೇ? ಎಂದು ಪರೀಕ್ಷಿಸುವಂತೆ ಜನರನ್ನು ಯಾಮಾರಿಸುವಲ್ಲಿ ಎತ್ತಿದ ಕೈ ಎಂಬುದಕ್ಕೆ ಬೇಕಾದಷ್ಟು ಜೀವಂತ ದೃಷ್ಟಾಂತಗಳನ್ನೂ ನಾವು ನೋಡಿದ್ದೇವೆ.
ಇತ್ತಿಚಿನ ದಿನಗಳಲ್ಲಿ ಎಲ್ಲರ ಕೈಯಲ್ಲಿಯು ಹರಿದಾಡುವ ಮೊಬೈಲ್ ಎಂಬ ಮಾಯಾವಿಯ ಬಲೆಗೆ ಸಿಲುಕಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಕಾಲ ಕಳೆಯುವ ಮಂದಿಗೇನು ಕಡಿಮೆಯಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಸ್ನೇಹ, ಪ್ರೀತಿ ಪ್ರೇಮ ಪ್ರಣಯ ಎಂದು ಹೆಜ್ಜೆ ಇರಿಸುವ ಮುನ್ನ ಎಚ್ಚರ ವಹಿಸುವುದು ಅತ್ಯವಶ್ಯಕ.
ಸರಸಕ್ಕೆ ಬಾರೆ…….ಎಂದು ಗಾಳಕ್ಕೆ ಬೀಳಿಸಲು ಹೋಗಿ … ಪೋಲಿಸರ ಗಾಳಕ್ಕೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಆ್ಯಪ್ ಮೂಲಕ ದಿವ್ಯಾ ಎಂಬ ಹೆಸರಿನಲ್ಲಿ ಪರಿಚಯವಾಗಿದ್ದವಳ ಜೊತೆ ಸಲುಗೆ ಬೆಳೆಸಿದ್ದ ದೂರುದಾರ ವ್ಯಕ್ತಿ ಒಂದಷ್ಟು ಫೋಟೋ, ವಿಡಿಯೋ ವಿನಿಮಯ ಮಾಡಿಕೊಂಡು ಆ ಬಳಿಕ ಜನವರಿ 4ರಂದು ತನ್ನ ಮನೆಗೆ ಆಹ್ವಾನ ನೀಡಿದ್ದಾರೆ.
ದಿವ್ಯಾ ಎಂಬ ಹೆಸರಿನಲ್ಲಿ ಮಾತನಾಡಿದ್ದ ಆರೋಪಿ ಸುನೀಲ್ ‘ನಾನು ಇವತ್ತು ಬಿಝಿ ಎಂದಿದ್ದು ನನ್ನ ಸಹೋದರಿ ಲಕ್ಷ್ಮಿಪ್ರಿಯಳನ್ನ ಕಳಿಸುತ್ತೇನೆ’ ಎಂದಿದ್ದಾರೆ. ಹಾಗಾಗಿ, ದೂರುದಾರ ವ್ಯಕ್ತಿ ಆರೋಪಿ ಲಕ್ಷ್ಮಿಪ್ರಿಯಳನ್ನು ಕೊಡುಗೆ ತಿರುಮಲಾಪುರದ ತನ್ನ ಮನೆಗೆ ಕರೆದೊಯ್ದಿದ್ದಾನೆ.
ಮನೆಯೊಳಗೆ ಹೋಗುವ ಸಮಯವನ್ನೇ ಕಾದು ಕೊಂಡಿದ್ದ ಸುನೀಲ್, ಮನೆಗೆ ಎಂಟ್ರಿ ಕೊಟ್ಟು ದೂರುದಾರನಿಗೆ ‘ನೀನು ಲಕ್ಷ್ಮಿಪ್ರಿಯಳನ್ನ ಜೊತೆಯಲ್ಲಿ ಕರೆ ತಂದಿರುವ ವಿಡಿಯೋ, ಫೋಟೋ ಪೊಲೀಸರಿಗೆ ಕೊಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ ಎನ್ನಲಾಗಿದೆ. ಆನಂತರ ಇಬ್ಬರು ಆರೋಪಿಗಳು ದೂರುದಾರನ ಮನೆಯಲ್ಲಿದ್ದ 45 ಗ್ರಾಂ ಚಿನ್ನಾಭರಣ, ನಗದು ಕಿತ್ತುಕೊಂಡು ಬೈಕಿನಲ್ಲಿ ಎಸ್ಕೇಪ್ ಆಗಿದ್ದಾರೆ.
ಸದ್ಯ ಮೋಸ ಹೋದ 26 ರ ಹರೆಯದ ವ್ಯಕ್ತಿ ನೀಡಿರುವ ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಸೋಲದೇವನಹಳ್ಳಿ ಪೊಲೀಸರುಪಡೆ ಸುನಿಲ್ ಹಾಗೂ ಲಕ್ಷ್ಮಿಪ್ರಿಯ ಬಂಧಿಸಿದ್ದು ಅಲ್ಲದೇ, 2.2 ಲಕ್ಷ ಮೌಲ್ಯದ 45 ಗ್ರಾಂ ಚಿನ್ನಾಭರಣ 1 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.