ಶಿಕ್ಷಕಿಗೆ ಗುಂಡು ಹಾರಿಸಿದ 6 ವರ್ಷದ ಬಾಲಕ! ಅಮೇರಿಕಾ ಶಾಲೆಗಳಲ್ಲಿ ಹೆಚ್ಚಿದ ಆತಂಕ
ಆರು ವರ್ಷದ ಬಾಲಕನೊಬ್ಬ ತನ್ನ ಶಿಕ್ಷಕಿಗೆ ಗುಂಡು ಹಾರಿಸಿದ ಘಟನೆ ಅಮೆರಿಕದ ವರ್ಜೀನಿಯಾ ರಾಜ್ಯದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಪೂರ್ವ ಅಮೇರಿಕಾದ ರಿಚ್ನೆಕ್ ಎಲಿಮೆಂಟರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ತರಗತಿಗೆ ಬಂದ ಬಾಲಕ ನೇರವಾಗಿ ಶಿಕ್ಷಕಿಗೆ ಗುಂಡು ಹಾರಿಸಿದ್ದು ಸದ್ಯ ಶಿಕ್ಷಕಿಯ ಸ್ಥಿತಿ ತೀರಾ ಗಂಭೀರವಾಗಿದೆ.
ಅದೃಷ್ಟವಶಾತ್ ತರಗತಿಯಲ್ಲಿದ್ದ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಆಗಿಲ್ಲ.ಘಟನೆ ಬಗ್ಗೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ,ಪೋಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಬಾಲಕನು ಆಕಸ್ಮಿಕವಾಗಿ ದಾಳಿ ನಡೆಸಿದಂತೆ ತೋರುತ್ತಿಲ್ಲ, ಇದರ ಹಿಂದೆ ಬೇರಾವುದೋ ಉದ್ದೇಶವಿದ್ದಂತೆ ಕಾಣುತ್ತದೆ. ವಿಚಾರಣೆ ಬಳಿಕ ಗೊತ್ತಾಗಲಿದೆ ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲರು ಮಾತನಾಡಿ, ಇದು ತುಂಬಾ ಆತಂಕಕಾರಿ ವಿಷಯ, ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೆ ವಿದ್ಯಾರ್ಥಿಗಳಿಗೆ ಬಂದೂಕುಗಳು ಲಭ್ಯವಾಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಅಮೇರಿಕಾದಲ್ಲಿ ಇತ್ತೀಚಿಗಂತೂ ಗುಂಡಿನ ಧಾಳಿಗಳು ಹೆಚ್ಚಾಗುತ್ತಿವೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಮನೆಯೊಂದರ ಮೇಲೆ ಗುಂಡಿನ ದಾಳಿಯಿಂದ ಅನೇಕರು ಪ್ರಾಣಕಳೆದು ಕೊಂಡಿದ್ದರು. ಅದೂ ಅಲ್ಲದೆ ಇತ್ತೀಚೇಗೆ ಶಾಲೆಯಲ್ಲಿನ ಗುಂಡಿನ ದಾಳಿಗಳು ಅಮೆರಿಕದಲ್ಲಿ ಹೆಚ್ಚಾಗಿ ನಡೆಯುತ್ತಿವೆ.
ಕಳೆದ ಮೇ ತಿಂಗಳಲ್ಲಿ ಟೆಕ್ಸಾಸ್‍ನ ಉವಾಲ್ಡೆಯಲ್ಲಿ 18 ವರ್ಷ ವಯಸ್ಸಿನ ಬಂದೂಕುಧಾರಿಯಿಂದ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಹತ್ಯೆಗೀಡಾಗಿದ್ದರು.