ಅಮೆಜಾನ್ ನೌಕರರಿಗೆ ಆಘಾತಕರ ಸುದ್ಧಿ! 18 ಸಾವಿರಕ್ಕೂ ಅಧಿಕ ನೌಕರರನ್ನು ವಜಾಗೊಳಿಸಲು ಮುಂದಾದ ಅಮೆಜಾನ್ ಕಂಪೆನಿ
ಇ-ಕಾಮರ್ಸ್ ವಲಯದ ದೈತ್ಯ ಕಂಪೆನಿ ಎನಿಸಿರುವ ಅಮೆಜಾನ್ ಸುಮಾರು ಕಳೆದ ವರ್ಷ 10,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿತ್ತು. ಆದರೆ ಇದೀಗ ಅದರ ಎರಡು ಪಟ್ಟು ಅಂದರೆ ಸುಮಾರು 18 ಸಾವಿರ ಜನ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ತಿಳಿಸಿದ್ದು ಅಮೆಜಾನ್ ನೌಕರರಿಗೆ ಅಘಾತ ಉಂಟಾಗಿದೆ.
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಮುಂದಿನ ವಾರ ಸಾವಿರಾರು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವವರಿದ್ದು, ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಲಾಭದ ಕೊರತೆಯಿಂದಾಗಿ ಹಾಗೂ ಕೋವಿಡ್ ಸಂದರ್ಭದಲ್ಲಿ ಮಾಡಿಕೊಂಡಿದ್ದ ಅಧಿಕ ನೇಮಕಾತಿ ಅಂಶವನ್ನು ಉಲ್ಲೇಖಿಸಿ ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.
2020ರ ಆರಂಭದಿಂದ 2022ರ ಆರಂಭದ ನಡುವೆ ಅಮೆಜಾನ್ ತನ್ನ ಉದ್ಯೋಗಿಳನ್ನು ಜಾಗತಿಕವಾಗಿ ದ್ವಿಗುಣಗೊಳಿಸಿತ್ತು. ಕೋವಿಡ್ ಸಂದರ್ಭದಲ್ಲಿ ವಿತರಕರ ಬೇಡಿಕೆ ಹೆಚ್ಚಿದ್ದರಿಂದ ಇದನ್ನು ಪೂರೈಸಲು ಅರೆಕಾಲಿಕ ಉದ್ಯೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡಿತ್ತು. ಇದರಿಂದ ಕಂಪನಿ ಸೆಪ್ಟೆಂಬರ್ ಅಂತ್ಯದ ವೇಳೆಗೆ 15.40 ಲಕ್ಷ ಉದ್ಯೋಗಿಗಳನ್ನು ಹೊಂದಿತ್ತು. ಸದ್ಯ ಕಂಪನಿಯು ಏಕಕಾಲದಲ್ಲಿ 18 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದರೆ, ಇದು ಅಮೆಜಾನ್‌ನ ಇತಿಹಾಸದಲ್ಲಿ ಅತಿ ದೊಡ್ಡ ವಜಾವಾಗಲಿದೆ.
ವಜಾಗೊಳ್ಳುತ್ತಿರುವ ಹೆಚ್ಚಿನ ಉದ್ಯೋಗಿಗಳು ಯುರೋಪ್‌ನವರಾಗಿದ್ದಾರೆ. ಜನವರಿ 18ರಂದು ವಜಾಗೊಳ್ಳುತ್ತಿರುವವರಿಗೆ ಈ ಬಗ್ಗೆ ತಿಳಿಸಲಿದ್ದೇವೆ. ಗೌಪ್ಯವಾಗಿಟ್ಟಿದ ಈ ಮಾಹಿತಿಯನ್ನು ನಮ್ಮ ತಂಡದ ಸದಸ್ಯರೇ ಸೋರಿಕೆ ಮಾಡಿರುವುದರಿಂದ ಈ ವಿಚಾರವಾಗಿ ಗೊಂದಲ ಬೇಡವೆಂದು ಈ ಕೂಡಲೇ ಘೋಷಣೆ ಮಾಡಬೇಕಾಯಿತು ಎಂದು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಬುಧವಾರ ತಿಳಿಸಿರುವುದಾಗಿ ವರದಿಯಾಗಿದೆ.
ಮುಂದೆ ಮಾತನಾಡಿದ ಅವರು ‘ಇದ್ದಕ್ಕಿದ್ದಂತೆ ಉದ್ಯೋಗಿಗಳನ್ನು ವಜಾ ಗೊಳಿಸುತ್ತಿರುವುದರಿಂದ ಅವರನ್ನು ಕಷ್ಟಕ್ಕೆ ದೂಡಿದಂತಾಗುತ್ತದೆ. ಇದರಿಂದ ಕಂಪೆನಿಗೂ ಬೇಸರವಿದೆ. ಆದರೆ ಇದು ಅನಿವಾರ್ಯವಾಗಿದೆ. ಅಲ್ಲದೆ ನಾವು ಈ ಪ್ರಕ್ರಿಯೆಯನ್ನು ಲಘುವಾಗಿ ತಗೆದುಕೊಳ್ಳುತ್ತಿಲ್ಲ. ವಜಾಗೊಳಿಸುತ್ತಿರುವವರಿಗೆ ಬೆಂಬಲ ನೀಡುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಅವರಿಗೆ ಪ್ರತ್ಯೇಕ ಪಾವತಿ, ಆರೋಗ್ಯ ವಿಮೆಯ ಪ್ರಯೋಜನಗಳು, ಬಾಹ್ಯ ಉದ್ಯೋಗ ನಿಯೋಜನೆಗೆ ಬೇಕಾದ ಬೆಂಬಲ ನೀಡುವ ಪ್ಯಾಕೇಜ್ ಅನ್ನು ಒದಗಿಸುವುದಾಗಿ ಭರವಸೆ ನೀಡುತ್ತಿದ್ದೇವೆ’ ಎಂದು ಅನುಕಂಪದಿಂದ ಹೇಳಿದ್ದಾರೆ.