ಮೀಸಲಾತಿ ಹೊಸ ಸೂತ್ರ ರಿಜೆಕ್ಟ್ ಮಾಡಿದ ಪಂಚಮಸಾಲಿ ಸಮುದಾಯ| 2ಎ ಮೀಸಲಾತಿ ನೀಡಲು ಸರಕಾರಕ್ಕೆ 24 ಗಂಟೆ ಗಡುವು!
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇದರ ಕಾವು ಮೊನ್ನೆ ನಡೆದ ಸುವರ್ಣ ಸೌಧದ ಅಧಿವೇಶನಕ್ಕೂ ಮುಟ್ಟಿತ್ತು. ಸಿಎಂ ಬೊಮ್ಮಾಯಿ ಹೊಸ ಮೀಸಲಾತಿ ವ್ಯೂಹ ರಚಿಸಿ, ಪಂಚಮಸಾಲಿ ಮತ್ತು ಒಕ್ಕಲಿಗರೆ ಹೊಸ ವರ್ಗಗಳನ್ನ ಸೃಷ್ಟಿಸುವುದರ ಮೂಲಕ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಸರ್ಕಾರ ಕಂಡುಕೊಂಡಿದ್ದ ಹೊಸ ಮೀಸಲಾತಿ ಸೂತ್ರ ಸದ್ಯ ರಿಜೆಕ್ಟ್ ಆಗಿದೆ. ಪಂಚಮಸಾಲಿ ಸಮುದಾಯ ಮತ್ತೆ ಸರ್ಕಾರದ ವಿರುದ್ಧ ಸಿಡಿದೆದ್ದಿದೆ.
ಸರ್ಕಾರ ಮೀಸಲಾತಿಯ ಸಂಕಷ್ಟಗಳಿಂದ ಪಾರಾಗಲು ಪಂಚಮಸಾಲಿ ಹಾಗೂ ಇತರೆ ಸಮುದಾಯಕ್ಕೆ 2ಡಿ ಪ್ರವರ್ಗಗಳನ್ನು ರಚಿಸಿ ಮೀಸಲಾತಿ ನೀಡುವುದಾಗಿ ತಿಳಿಸಿತ್ತು. ಮೀಸಲಾತಿಯ ಪ್ರಮಾಣದ ಬಗ್ಗೆ ಇನ್ನು ತಿಳಿಸಿರಲಿಲ್ಲ. ಆದರೆ ಈ ನಡುವೆಯೇ ಪಂಚಮಸಾಲಿ ಸಮುದಾಯವು ಹೊಸ ಪ್ರವರ್ಗ 2ಡಿ ಪ್ರಸ್ತಾಪವನ್ನು ನಿರಾಕರಿಸಿದೆ. ಅಲ್ಲದೇ ತಮ್ಮನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕೆಂದು ಸರ್ಕಾರಕ್ಕೆ 24 ಗಂಟೆಯ ಗಡುವುನ್ನು ನೀಡಿದೆ. ಇದರಿಂದ ಚುನಾವಣೆಯ ಹೊಸ್ತಿಲಲ್ಲಿರುವ ಸರ್ಕಾರಕ್ಕೆ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ.
ಪಂಚಮಸಾಲಿಯ ಪ್ರಮುಖರು ಹಾಗೂ ಸ್ವತಃ ಬಿಜೆಪಿ ಶಾಸಕರು ಆಗಿರುವ ಬಸವನ ಗೌಡ ಪಾಟೀಲ್ ಯತ್ನಾಳು ಅವರು ಹೋರಾಟದ ಮುಂದಾಳತ್ವವನ್ನು ವಹಿಸಿದ್ದು ತಾವೇ ಸರ್ಕಾರಕ್ಕೆ 24 ಗಂಟೆಯ ಕಾಲಾವಕಾಶ ನೀಡಿದ್ದಾರೆ. 24 ಗಂಟೆಯೊಳಗೆ ಸರ್ಕಾರ 2ಎ ಸೇರ್ಪಡೆ ಘೋಷಣೆ ಮಾಡಬೇಕು. ಜನವರಿ 12 ರೊಳಗೆ ಈ ಸಂಬಂಧ ಸರ್ಕಾರಿ ಆದೇಶ ಬರಬೇಕು. ಇಲ್ಲದಿದ್ದಲ್ಲಿ ಸಿಎಂ ಬೊಮ್ಮಾಯಿ ನಿವಾಸದ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ಕೊಡಲಾಗಿದೆ. ಗುರುವಾರ ಬೆಳಗಾವಿಯಲ್ಲಿ ಪಂಚಮಸಾಲಿ ಜನಪ್ರತಿನಿಧಿಗಳು, ಪದಾಧಿಕಾರಿಗಳ ಸಭೆ ನಡೆದಿದ್ದು ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸರ್ಕಾರವು 3 ಪ್ರವರ್ಗದಲ್ಲಿ ಇರುವವರನ್ನ 2 ಪ್ರವರ್ಗಕ್ಕೆ ತರಲು ಮುಂದಾಗಿತ್ತು. 3A ನಲ್ಲಿದ್ದ ಒಕ್ಕಲಿಗರು ಮತ್ತು ಇತರರನ್ನು ಇನ್ಮುಂದೆ 2C ಅಂತ ಮಾಡಿ ಅಲ್ಲಿಗೆ ಸೇರಿಸುತ್ತೇವೆ. ಹಾಗೆಯೇ 3B ನಲ್ಲಿದ್ದ ಲಿಂಗಾಯತ ಮತ್ತು ಇತರರನ್ನು 2Dಗೆ ಸೇರಿಸುತ್ತೇವೆ. ಇದರಿಂದ 2A ಮತ್ತು 2B ಪ್ರವರ್ಗದವರಿಗೆ ಯಾವುದೇ ಸಮಸ್ಯೆ ಆಗಲ್ಲ. 3A ಮತ್ತು 3Bನಲ್ಲಿ ಈವರೆಗೆ ನೀಡಲಾಗುತ್ತಿದ್ದ ಎಲ್ಲಾ ಸೌಲಭ್ಯ, ಸವಲತ್ತುಗಳನ್ನು, ಈಗ ಹೊಸದಾಗಿ ಸೃಷ್ಟಿಸಿರುವ 2C ಮತ್ತು 2D ಪ್ರವರ್ಗಕ್ಕೆ ಮುಂದುವರಿಸಿಕೊಂಡು ಹೋಗಲಾಗುವುದು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುವುದು. ಆದರೆ ರಾಜಕೀಯ ಮೀಸಲಾತಿ ಇರಲ್ಲ ಎಂದು ತಿಳಿಸಿತ್ತು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಬೇಡಿಕೆ ಈಡೇರಿಕೆಗೆ ಹೊಸ ಡೆಡ್ ಲೈನ್ ಕೊಟ್ಟಿರುವ ಸಂಬಂಧ ಇವತ್ತು ಸಚಿವ ಮುರುಗೇಶ್ ನಿರಾಣಿ ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ. ಬಳಿಕ ಸಚಿವ ನಿರಾಣಿ ಮಾತನಾಡಿ, ಪದೇ ಪದೇ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗ್ತಿದೆ, ಯತ್ನಾಳ್ ಸುಕಾಸುಮ್ಮನೆ ನನ್ನ ವಿರುದ್ಧ ಪದೇ ಪದೇ ಮಾತನಾಡ್ತಾರೆ ಎಂದು ಸಿಎಂ ಅವರು ಬೇಸರದೊಂದಿಗೆ ಅಸಮಾಧಾನ ಹೊರ ಹಾಕಿದ್ದಾರೆ ಎಂದರು.
ಆದರೂ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂಬೊಮ್ಮಾಯಿ ‘ಮೀಸಲಾತಿ ವಿಷಯದ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇದೆ. ಕಾನೂನಿನ ಚೌಕಟ್ಟಿನಲ್ಲಿ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿದೆ. ಮುಂದೆ ಬರುವ ಅಂತಿಮ ವರದಿಗಳಲ್ಲಿ ಎಲ್ಲಾ ಸಮುದಾಯಗಳಿಗೆ ಸೂಕ್ತ ನ್ಯಾಯ ಒದಗಿಸಲಾಗುವುದು’ ಎಂದರು. ಒಟ್ಟಿನಲ್ಲಿ ಚುನಾವಣೆ ಬೆನ್ನಲ್ಲೇ ಸಮುದಾಯದ ಈ ಹೋರಾಟಗಳು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿರುವುದಂತೂ ಖಂಡಿತ!