ಫಿಕ್ಸ್ ಆಯ್ತು ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರ| ಘೋಷಣೆ ಮಾತ್ರ ಬಾಕಿ! ಇಲ್ಲೇ ನೋಡಿ ಸಿದ್ದು ಸ್ಪರ್ಧೆ ಮಾಡೋದು

ಕರ್ನಾಟಕದ ಜನತೆ ಕುತೂಹಲದಿಂದ ಕಾಯುತ್ತಿದ್ದಂತಹ ವಿಷಯಕ್ಕೆ ಸದ್ಯ ತೆರೆ ಬೀಳುವ ಕಾಲ ಹತ್ತಿರವಾಗುತ್ತಿದೆ. ಸಿದ್ದರಾಮಯ್ಯ ಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಎಲ್ಲರೂ ಎದುರು ನೋಡುತ್ತಿದ್ದು ಇದೀಗ ಅವರ ಕ್ಷೇತ್ರ ಬಹುಶಃ ಫಿಕ್ಸ್ ಆದಂತಾಗಿದೆ. ಹಾಗಾದರೆ ಸಿದ್ದು ಸ್ಪರ್ಧಿಸುವ ಕ್ಷೇತ್ರವಾದರೂ ಯಾವುದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

 

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರವಾರು ಅಭ್ಯರ್ಥಿಗಳ ಹಂಚಿಕೆ ಎಲ್ಲಾ ಪಕ್ಷಗಳಲ್ಲೂ ನಡೆಯುತ್ತಿದ್ದರೂ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆಂಬುದು ಪ್ರಶ್ನೆಯಾಗಿಯೇ ಉಳಿದಿತ್ತು. ಆದರೆ ಇದೀಗ ಕೋಲಾರ ಕ್ಷೇತ್ರದಿಂದ ಸಿದ್ದು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತವಾಗಿ ಘೋಷಣೆಯಾಗಬೇಕಿದೆ.ಬುಧವಾರ ರಾತ್ರಿ ಮುನಿಯಪ್ಪ ಮತ್ತು ಅವರ ತಂಡದ ಜೊತೆ ಸಿದ್ದರಾಮಯ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಕೆ.ಹೆಚ್ ಮುನಿಯಪ್ಪ ಸಿದ್ದರಾಮಯ್ಯಗೆ ಕೋಲಾರಕ್ಕೆ ಸ್ವಾಗತ ಕೋರಿದ್ದಾರೆ.

ಜನರ ಆಸೆಯಂತೆ ಹಾಗೂ ಕೆಲವು ದಿನಗಳಿಂದ ಕೋಲಾರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ಸಿನ ಭಿನ್ನಮತ, ಗುಂಪುಗಾರಿಕೆಯನ್ನು ಶಮನ ಮಾಡುವ ಸಲುವಾಗಿ ಸಿದ್ದರಾಮಯ್ಯ ಕೋಲಾರದಲ್ಲಿಯೇ ಸ್ಪರ್ಧೆಮಾಡಲಿದ್ದಾರೆ.

ಜನವರಿ 9 ರಂದು ಸಿದ್ದರಾಮಯ್ಯ ಅವರು ಕೋಲಾರ ಪ್ರವಾಸ ಕೈಗೊಂಡಿದ್ದು, ಅಂದೇ ಕೋಲಾರದಲ್ಲಿ ಸ್ಪರ್ಧೆ ಬಗ್ಗೆ ಘೋಷಣೆ ಸಾಧ್ಯತೆ ಇದೆ. ಈ ಮೂಲಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಗೊಂದಲಕ್ಕೆ ತೆರೆ ಬೀಳಲಿದೆ.ಈ ಸಲದ ವಿಧಾನಸಭಾ ಚುನಾವಣೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಿದೆ. ಅದು ರಾಜಕೀಯವಾಗಿಯೂ, ವೈಯುಕ್ತಿಕವಾಗಿಯೂ ಬಹುಮುಖ್ಯವಾಗಿದೆ ಎನ್ನುವುದಂತೂ ಸತ್ಯ.

ಈಗಾಗಲೇ ಅವರೇ ಘೋಷಣೆ ಮಾಡಿಕೊಂಡಂತೆ 2023ರ ಚುನಾವಣೆ ಅವರ ಪಾಲಿಗೆ ರಾಜಕೀಯ ಬದುಕಿನ ಕೊನೆಯ ಚುನಾವಣೆಯಾಗಿದೆ. ಹೀಗಾಗಿ ಅವರತ್ತ ಎಲ್ಲರ ದೃಷ್ಠಿ ನೆಟ್ಟಿದೆ. ಆದ್ದರಿಂದ ಅವರು ಸ್ಪರ್ಧಿಸಿ ಗೆಲ್ಲಬಹುದಾದ ಕ್ಷೇತ್ರ ಯಾವುದೆಂದು ಎಲ್ಲರಿಗೂ ಗೊಂದಲವಿತ್ತು.

ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸಿದರೂ ಕೂಡ ಅವರನ್ನು ಸೋಲಿಸಲೇಬೇಕೆಂಬ ಪಣವನ್ನು ಅವರ ವಿರೋಧಿಗಳು ತೊಟ್ಟಿದ್ದಾರೆ. ಅಲ್ಲದೆ ಅವರು ವರುಣ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಬಿಜೆಪಿಯು ಮಾಜಿ ಸಿಎಂ ಯಡಿಯೂರಪ್ಪ ಅವರ ಮಗ ವಿಜಯೇಂದ್ರನನ್ನು ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿಸಲು ಮುಂದಾಗಿತ್ತು.

ಈ ಎಲ್ಲಾ ಕಾರಣಗಳಿಂದ ಸ್ಪರ್ಧಿಸುವ ಕ್ಷೇತ್ರ ವಿಚಾರವನ್ನು ಸಿದ್ದರಾಮಯ್ಯ ರಹಸ್ಯವಾಗಿಯೇ ಇಟ್ಟಿದ್ದರು.ಆರಂಭದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದ ಕ್ಷೇತ್ರ ತಮ್ಮ ತವರು ಜಿಲ್ಲೆಯಾದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ. ಮೈಸೂರು ನಗರ ಹಾಗೂ ಗ್ರಾಮೀಣ ಪ್ರದೇಶವನ್ನು ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಭವಿಷ್ಯವನ್ನು ರೂಪಿಸಿತ್ತು.

1983, 1985, 1994, 2004, 2006ರಲ್ಲಿ ಸ್ಪರ್ಧಿಸಿ ಸುಮಾರು 5 ಬಾರಿ ಅವರು ಜಯಭೇರಿ ಸಾಧಿಸಿದ್ದರು. 2013ರಲ್ಲಿ ವರುಣಾ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಆಗಿದ್ದರು.2018ರ ವೇಳೆಗೆ ತಮ್ಮ ಗೆಲುವಿನ ಕ್ಷೇತ್ರವನ್ನು ಮಗ ಯತೀಂದ್ರನಿಗೆ ಬಿಟ್ಟುಕೊಟ್ಟ ಸಿದ್ದರಾಮಯ್ಯ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದತ್ತ ಮುಖ ಮಾಡಿದ್ದರು. ಅಷ್ಟರಲ್ಲಾಗಲೇ ಅಲ್ಲಿ ತಮ್ಮ ರಾಜಕೀಯ ಶಿಷ್ಯರಾಗಿದ್ದ ಜೆಡಿಎಸ್ ಜಿ ಟಿ ದೇವೇಗೌಡ ಪ್ರಬಲ ಸಾಧಿಸಿದ್ದರು. ಹೀಗಾಗಿ ಗೆಲುವು ಅಸಾಧ್ಯವೆಂದು ಚಾಮುಂಡೇಶ್ವರಿ ಮತ್ತು ದೂರದ ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧಿಸಲು ನಿರ್ಧರಿಸಿದರು. ಆದರೆ ಕೇವಲ ಬಾದಾಮಿ ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸಿದರು.

ಈ ಸಲದ ವಿಧಾನಸಭೆಯ ಚುನಾವಣೆಯಲ್ಲಿ ಹಿಂದಿನಂತೆ ಯಾವುದೇ ಗೊಂದಲಗಳು ಆಗಬಾರದು ಎಂಬ ನಿಟ್ಟಿನಲ್ಲಿ, ಹಾಗೂ ಪ್ರತಿಪಕ್ಷದ ನಾಯಕರಾಗಿ ರಾಜ್ಯ ಕಾಂಗ್ರೆಸ್ಸಿನ ಪ್ರಮುಖ ನಾಯಕರಾಗಿರುವ ತಾವು ಪ್ರತಿಷ್ಟೆ ಕಾಪಾಡಬೇಕೆಂದು ಸಿದ್ದರಾಮಯ್ಯ ಜಾಣ ಹೆಜ್ಜೆ ಇಡುತ್ತಿದ್ದಾರೆ. ಜೊತೆಗೆ ಇದೇ ಕೊನೆಯದಾಗಿ ಸ್ಪರ್ಧಿಸುತ್ತಿರುವ ಚುನಾವಣೆ ಎಂದು ಅವರೇ ಸ್ವತಃ ಹೇಳಿರುವುದರಿಂದ ಜನರಲ್ಲಿ ಕುತೂಹಲ ಮೂಡಿತ್ತು. ಸ ಇವೆಲ್ಲವೂ ಕೊನೆಗೊಳ್ಳಲಿದೆ. ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಗೆಲುವು ಸಾಧ್ಯವೇ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.