ಹೆದ್ದಾರಿಗಳಿಗೆ ಹೆಸರಿಡುವ ಸಂಪ್ರದಾಯ ನಮ್ಮಲ್ಲಿ ಇಲ್ಲ! ಬೆಂಗಳೂರು-ಮೈಸೂರು ದಶಪಥ ರಸ್ತೆ ಸಮೀಕ್ಷೆ ಬಳಿಕ ನಿತಿನ್ ಗಡ್ಕರಿ ಹೇಳಿಕೆ
ಕರ್ನಾಟಕದಲ್ಲಿ ಆಗಾಗ ಭುಗಿಲೇಳುವ ವಿವಾದಗಳಲ್ಲಿ ರಸ್ತೆಗಳಿಗೆ, ಹೆದ್ದಾರಿಗಳಿಗೆ ಹೆಸರಿಡುವಂತಹ ವಿಚಾರವೂ ಒಂದಾಗಿದೆ. ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳಿಗೆ ಯಾರ ಅಥವಾ ಯಾವ ಹೆಸರಿಡಬೇಕೆಂಬ ಚರ್ಚೆಗಳಿಂದ ಕೋಮು ಗಲಬೆಗಳೂ ಆಗಾಗ ನಡೇಯುತ್ತಿರುತ್ತವೆ. ಆದರೆ ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಘಡ್ಕರಿ ನಮ್ಮಲ್ಲಿ ರಸ್ತೆಗಳಿಗೆ ಹೆಸರಿಡುವ ಸಂಪ್ರದಾಯ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು-ಮೈಸೂರು ದಶಪಥ ರಸ್ತೆಯ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ನಿತಿನ್ ಗಡ್ಕರಿ ಮಾತನಾಡಿದರು. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮಲ್ಲಿ ಹೆದ್ದಾರಿಗಳಿಗೆ ಹೆಸರಿಡುವ ಸಂಪ್ರದಾಯ ಇಲ್ಲ. ಇದುವರೆಗೂ ನೀಡಿಲ್ಲ. ನಾವು ಹೆದ್ದಾರಿಗೆ ನಂಬರ್ ಅಷ್ಟೇ ಕೊಡುತ್ತೇವೆ. ಎಂದು ಹೇಳಿದರು.
ನಂತರ ಮಾತನಾಡಿದ ಅವರು ‘ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವಂತೆ ಒತ್ತಾಯ ಕೇಳಿಬರುತ್ತಿದೆ. ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ನಾನು ಕೂಡ ಆ ಪತ್ರವನ್ನ ನೋಡಿದ್ದೇನೆ. ಹಾಗಾಗಿ ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಬಳಿಕ ಪ್ರಧಾನಿಯವರ ಒಪ್ಪಿಗೆ ಪಡೆದು ಮುಂದಿನ ಆಲೋಚನೆ ಮಾಡುತ್ತೇವೆ’ ಎಂಬುದಾಗಿ ತಿಳಿಸಿದರು.
‘ಕೈಗಾರಿಕೆಗಳ ಪ್ರಗತಿಗೆ ಈ ನೂತನ ಹೆದ್ದಾರಿ ಅನುಕೂಲ ಆಗಲಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಹಾಗೂ ಕೆಲ ಸಂಚಾರ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗಲಿದೆ. ಈ ಹೆದ್ದಾರಿಯಿಂದ ಮೈಸೂರು ಭಾಗದಲ್ಲಿ ಆರ್ಥಿಕ ಚಟುವಟಿಕೆ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಮಾಲಿನ್ಯ, ಟ್ರಾಫಿಕ್ ಸಮಸ್ಯೆ ಜೊತೆಗೆ ಅಪಘಾತಗಳನ್ನು ತಡೆಯುವಂತೆ ಮಾಡಲು ಇದು ಹೆಚ್ಚು ಸಹಕಾರಿಯಾಗೆದೆ. ಒಟ್ಟಿನಲ್ಲಿ ಈ ಹೆದ್ದಾರಿಯು ಕರ್ನಾಟಕದ ಆರ್ಥಿಕ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದೆ’ ಎಂದು ಗಡ್ಕರಿ ಹೇಳಿದರು.
ಈ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಫೆಬ್ರವರಿ ಅಂತ್ಯಕ್ಕೆ ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ದ್ರೌಪದಿ ಮುರ್ಮು ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸ್ವತಃ ಕೇಂದ್ರ ಸಚಿವರೇ ತಿಳಿಸಿದರು.