Covid BF.7: ಶಾಲಾ ತರಗತಿಗಳಲ್ಲಿ ಮಕ್ಕಳಿಗೆ ಮಾಸ್ಕ್ ಕಡ್ಡಾಯ
ಕೊರೊನಾ ತನ್ನ ಅಸ್ತಿತ್ವ ತೋರುತ್ತಿರುವ ಈ ವೇಳೆ ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಸರ್ಕಾರದ ಗೈಡ್ಸ್ ಲೈನ್ಸ್ ಬಿಡುಗಡೆಗೂ ಮುನ್ನವೇ ಕೆಲವು ಶಾಲೆಗಳು ಮಹತ್ವದ ನಿರ್ಧಾರ ಕೈಗೊಂಡಿದೆ.
ಈಗಾಗಲೇ ಬೆಂಗಳೂರಿನ ಹಲವು ಖಾಸಗಿ ಶಾಲೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಮೇರೆಗೆ ತರಗತಿ, ಇತರ ಒಳಾಂಗಣ ಪ್ರದೇಶದಲ್ಲಿ ತಮ್ಮ ಮಕ್ಕಳಿಗೆ ಮಾಸ್ಕ್ ಹಾಕುವಂತೆ ಪೋಷಕರಿಗೆ ಸುತ್ತೋಲೆ ಕಳುಹಿಸಿವೆ. ಆದರೆ ಮಕ್ಕಳು ಆಟವಾಡುವ ವೇಳೆ ಸದ್ಯಕ್ಕೆ ಮಾಸ್ಕ್‌ಗೆ ವಿನಾಯಿತಿ ನೀಡಲಾಗಿದೆ.
ಶಾಲಾ ತರಗತಿಗಳಲ್ಲಿ ಮಾಸ್ಕ ಕಡ್ಡಾಯಗೊಳಿಲಾಗಿದೆ. ಆದರೆ ಈ ನಿಯಮ ಶಾಲಾ ಆವರಣದಲ್ಲಿ ನಡೆಯುವ ತರಗತಿಗಳು, ವಿದ್ಯಾರ್ಥಿಗಳ ಹಾಜರಾತಿ ಅಥವಾ ಪಠ್ಯೇತರ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿಲ್ಲ ಎನ್ನಲಾಗಿದೆ.
ಈ ಕುರಿತಂತೆ ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್ ಸ್ಕೂಲ್‌ನ ಪ್ರಾಂಶುಪಾಲರು, ಹೊಸ ಕೋವಿಡ್ ರೂಪಾಂತರಗಳ ಬಗ್ಗೆ ಕಾಳಜಿ ಇರುವುದರಿಂದ, ನಾವು ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳಿಗೆ ಮಾಸ್ಕ್‌ಗಳನ್ನು ಸೂಚಿಸಿದ್ದೇವೆ. ಹೆಚ್ಚುವರಿಯಾಗಿ, ಈ ಋತುವಿನಲ್ಲಿ ಸಾಮಾನ್ಯವಾಗಿ ಶೀತ ಮತ್ತು ಜ್ವರದ ಪ್ರಮಾಣವು ಹೆಚ್ಚಾಗುತ್ತದೆ. ಹೀಗಾಗಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಾಸ್ಕ್ ಕಡ್ಡಾಯಗೊಳಿಸಿದ್ದೇವೆ ಎಂದರು.
ಸಾಂಕ್ರಾಮಿಕ ರೋಗ ಭೀತಿ ಇದ್ದಾಗ ಅದರ ಬಗ್ಗೆ ಅರಿತುಕೊಂಡು ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಮಾಸ್ಕ್ ಧರಿಸಬೇಕು. ಆರೋಗ್ಯ ಕಾಳಜಿವಹಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹಲವು ಶಾಲೆಗಳು ಅಭಿಪ್ರಾಯಪಟ್ಟಿವೆ.
ವಿದ್ಯಾರ್ಥಿಗಳು ಮಾತ್ರವಲ್ಲದೇ ಶಾಲಾ ಸಿಬ್ಬಂದಿಯು ಮಾಸ್ಕ್ ಧರಿಸುತ್ತಿದ್ದಾರೆ. ಇದರೊಂದಿಗೆ ಸ್ವಚ್ಚತೆ, ಉತ್ತಮ ಆಹಾರ ಸೇವನೆ, ಬಿಸಿ ನೀರು ಕುಡಿಯುವುದ ಸೇರಿದಂತೆ ಇತರ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕೊರೊನಾ ಮೊದಲಿದ್ದ ಅಲೆಗಳಂತೆ ಈ ಬಾರಿ ಅಂತಹ ಭಯದ ಆತಂಕವಿಲ್ಲ. ಆದರೆ ನಿಯಮ ಪಾಲನೆ ಅತ್ಯಗತ್ಯವಾಗಿದೆ. ಶಾಲೆಗಳು ತೆಗೆದುಕೊಳ್ಳುತ್ತಿರುವ ಮುನ್ನೆಚ್ಚರಿಕೆಗಳ ಬಗ್ಗೆ ಪೋಷಕರಿಗೆ ತಿಳಿಸಿದ್ದೇವೆ.
ಎಲ್ಲ ಸುರಕ್ಷತಾ ಕ್ರಮ ವಹಿಸಿದ್ದೇವೆ. ಮಕ್ಕಳಲ್ಲಿ ಏನಾದರೂ ಕಾಯಿಲೆ ಲಕ್ಷಣಗಳು, ಅವರಲ್ಲಿ ಅಸ್ವಸ್ಥತೆ ಕಂಡು ಬಂದರೆ ಅವರನ್ನು ಪ್ರತ್ಯೇಕ ಗೊಳಿಸಲಾಗುವುದು. ನಂತರ ಪೋಷಕರಿಗೆ ತಿಳಿಸಲಾಗುವುದು. ಈ ಮೊದಲೇ ತಿಳಿಸಿದಂತೆ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳು ತರಗತಿಗಳಿಗೆ ಹಾಜರಾಗದಂತೆ ತಿಳಿಸಲಾಗಿದೆ ಎಂದರು.
ಕಳೆದ ಬಾರಿಗಿಂತ ಈ ವರ್ಷ ನಿಯಮಗಳು ಭಿನ್ನವಾಗಿವೆ. ಕಾರಣ ಶಾಲೆಗಳಲ್ಲಿ ಯಾವುದೇ ಪಠ್ಯೇತರ ಕಾರ್ಯಕ್ರಮಗಳನ್ನು ರದ್ದುಗೊಳಿಸಿಲ್ಲ. ಕೇವಲ ಒಳಾಂಗಣ ಪ್ರದೇಶಗಳಲ್ಲಿ ಮಾತ್ರವೇ ಮಾಸ್ಕ್ ಶಿಫಾರಸು ಮಾಡಲಾಗಿದೆ. ಮಕ್ಕಳು ಹೊರ ಬರುತ್ತಿದ್ದಂತೆ ತೆಗೆದು ಆಟವಾಡಬಹುದು ಎಂದು ಡಿಪಿಎಸ್ ಶಾಲೆಯ ಮಂಜು ಬಾಲಸುಬ್ರಮಣ್ಯಂ ಮಾಹಿತಿ ನೀಡಿದರು.