Air India: ಅಮೆರಿಕ-ಭಾರತ ಏರ್ ಇಂಡಿಯಾ ವಿಮಾನದಲ್ಲಿ ಮದ್ಯದ ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ ವ್ಯಕ್ತಿ

ಕಂಠ ಪೂರ್ತಿ ಎಣ್ಣೆ ಕುಡಿದರೆ ವಾಸ್ತವ ಪ್ರಪಂಚದ ಆಗು ಹೋಗುಗಳ ಪರಿವೇ ಇರುವುದಿಲ್ಲ ಎನ್ನುವ ವಿಚಾರ ಗೊತ್ತಿರುವಂತದ್ದೆ!!!.. ಕುಡಿದ ಮತ್ತಿನಲ್ಲಿ ಮದ್ಯ ಪ್ರಿಯರು ಮಾಡುವ ಜಗಳ, ರಾದ್ದಂತ ಮಾಡಿಕೊಳ್ಳುವುದು ನೋಡಿರುತ್ತೇವೆ. ಕೆಲವೊಮ್ಮೆ ಕುಡಿದ ಅಮಲಿನಲ್ಲಿ ಅಪರಾಧ ಎಸಗಿ ಅಮಲು ಇಳಿದ ಮೇಲೆ ತಾನೂ ಮಾಡಿದ ತಪ್ಪಿಗೆ ಕೊರಗುವವರನ್ನು ಕೂಡ ನೋಡಿರಬಹುದು. ಈ ನಡುವೆ ಅಮೆರಿಕದಿಂದ ದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬಿಜಿನೆಸ್ ಕ್ಲಾಸ್‌ನಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆ ತಡವಾಗಿ ಮುನ್ನಲೆಗೆ ಬಂದಿದೆ.

 

ಇತ್ತೀಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಬೆತ್ತಲಾಗಿ, ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ಮಾಡಿದ ಆಘಾತಕಾರಿ ಸಂಗತಿ ನಡೆದಿದೆ. ಅಮೆರಿಕದ ನ್ಯೂಯಾರ್ಕ್‌ನಿಂದ ದಿಲ್ಲಿಗೆ ಬರುತ್ತಿದ್ದ ವಿಮಾನದಲ್ಲಿ ಸುಮಾರು 70 ವರ್ಷದ ವೃದ್ಧೆ ಮೇಲೆ ಆತ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದೆ.

ವಿಮಾನದ ಸಿಬ್ಬಂದಿ ಬಳಿ ಮಹಿಳೆ ದೂರು ನೀಡಿದರು ಕೂಡ ಅಸಭ್ಯವಾಗಿ ವರ್ತಿಸಿದ್ದ ಪ್ರಯಾಣಿಕನ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಅಷ್ಟೆ ಅಲ್ಲದೆ, ವಿಮಾನ ಇಳಿಯುತ್ತಿದ್ದಂತೆಯೇ ಯಾವುದೇ ವಿಚಾರಣೆ ಕೂಡ ಇಲ್ಲದೆ ನಿರ್ಗಮಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ.

ಈ ಘಟನೆ ನಡೆದ ಬಳಿಕ ವಿಮಾನದಲ್ಲಿ ತಾವು ಎದುರಿಸಿದ ಅವಮಾನಕರ ಸನ್ನಿವೇಶ ಹಾಗೂ ಏರ್ ಇಂಡಿಯಾ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಟಾಟಾ ಸಮೂಹದ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಮಹಿಳೆ ಪತ್ರ ಬರೆದ ಬಳಿಕ ಈ ವಿಚಾರದ ಕುರಿತಾಗಿ ತನಿಖೆ ಆರಂಭಿಸಲಾಗಿದೆ ಎಂಬ ಮಾಹಿತಿ ಕೆಲ ಮೂಲಗಳಿಂದ ತಿಳಿದುಬಂದಿದೆ.
ನವೆಂಬರ್ 26ರಂದು ನ್ಯೂಯಾರ್ಕ್- ಜೆಕೆಎಫ್ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೊರಟ ಏರ್ ಇಂಡಿಯಾ ಎಐ-102 ವಿಮಾನದಲ್ಲಿನ ಬಿಜಿನೆಸ್ ದರ್ಜೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. “ಊಟ ವಿತರಣೆ ಮಾಡಿ, ಲೈಟ್‌ಗಳನ್ನು ಸ್ವಿಚ್ ಆಫ್ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ಮತ್ತೊಬ್ಬ ಪ್ರಯಾಣಿಕ ತನ್ನ ಸೀಟಿನ ಕಡೆ ನಡೆದು ಬಂದಿದ್ದಾನೆ.

ಆತ ಸಂಪೂರ್ಣವಾಗಿ ಎಣ್ಣೆಯ ನಶೆ ನೆತ್ತಿಗೇರಿ ಅಮಲಿನಲ್ಲಿದ್ದ. ಕೊನೆಗೆ ತನ್ನ ಪ್ಯಾಂಟ್‌ನ ಜಿಪ್ ತೆರೆದು, ತನ್ನ ಖಾಸಗಿ ಅಂಗವನ್ನು ನನ್ನ ಎದುರು ತೋರಿಸಲು ಆರಂಭಿಸಿದ್ದ” ಎಂದು ಮಹಿಳೆ ಪತ್ರದಲ್ಲಿ ತಾವು ಎದುರಿಸಿದ ಅಸಹ್ಯಕರ ಅನುಭವದ ಜೊತೆಗೆ ವಿಮಾನ ಸಿಬ್ಬಂದಿಯ ನಿರ್ಲಕ್ಷ್ಯದ ಕುರಿತು ಆರೋಪಿಸಿದ್ದಾರೆ.

ಅಮಲಿನಲ್ಲಿದ್ದ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿ ಮುಗಿಸಿದ ಬಳಿಕ ಕೂಡ ಆತ ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸುತ್ತಾ ಅಲ್ಲಿಯೇ ನಿಂತಿದ್ದ ಎನ್ನಲಾಗಿದ್ದು, ಅಲ್ಲಿಂದ ಹೊರಡುವಂತೆ ಇತರೆ ಸಹ ಪ್ರಯಾಣಿಕರು ಜೋರು ಮಾಡಿದ ಬಳಿಕವಷ್ಟೇ ಆತ ಹಿಂತಿರುಗಿದ್ದ ಎನ್ನಲಾಗಿದೆ.

ಆತ ದೂರ ಹೋದ ಬಳಿಕ ಮಹಿಳೆ ಕೂಡಲೇ ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ” ಬಟ್ಟೆಗಳು, ಶೂಸ್ ಮತ್ತು ಬ್ಯಾಗ್ ಸಂಪೂರ್ಣವಾಗಿ ಮೂತ್ರದಲ್ಲಿ ನೆಂದು ಹೋಗಿದ್ದು, ಅಲ್ಲಿದ್ದ ವ್ಯವಸ್ಥಾಪಕಿ ಮಹಿಳೆಯ ಜೊತೆಗೆ ಸೀಟಿನ ಬಳಿ ಆಗಮಿಸಿ ಅದು ಮೂತ್ರದ ವಾಸನೆಯೇ ಎಂದು ಪರಿಶೀಲನೆ ಕೂಡ ನಡೆಸಿದ್ದಾರೆ. ಆ ಬಳಿಕ ನನ್ನ ಚೀಲ ಹಾಗೂ ಶೂಸ್‌ಗೆ ಸೋಂಕು ನಿವಾರಕವನ್ನು ಸಿಂಪಡಿಸಿದ್ದಾರೆ ಎಂಬುದಾಗಿ ಮಹಿಳೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿಮಾನದ ಶೌಚಾಲಯದಲ್ಲಿ ಮಹಿಳೆ ತಮ್ಮ ದೇಹವನ್ನು ಸ್ವಚ್ಛಗೊಳಿಸಿಕೊಂಡ ಬಳಿಕ ವಿಮಾನದ ಸಿಬ್ಬಂದಿ ಆಕೆಗೆ ಪೈಜಾಮಾದ ಸೆಟ್ ಹಾಗೂ ಬಳಸಿ ಎಸೆಯಬಹುದಾದ ಚಪ್ಪಲಿಗಳನ್ನು ನೀಡಿದ್ದಾರೆ. ಕೆಟ್ಟ ವಾಸನೆ ಬರುತ್ತಿದ್ದ ಸೀಟಿಗೆ ಮರಳಲು ಬಯಸದ ಮಹಿಳೆ, ಶೌಚಾಲಯದಲ್ಲಿಯೇ ಸುಮಾರು 20 ನಿಮಿಷ ಕುಳಿತಿದ್ದಾರೆ. ಸಿಬ್ಬಂದಿ ಕೂರುವ ಕಿರಿದಾದ ಸೀಟಲ್ಲಿ ಒಂದು ಗಂಟೆ ಕೂರಲು ಅವಕಾಶ ನೀಡಿದ ಬಳಿಕ ತಮ್ಮ ಸೀಟಿಗೆ ಮರಳುವಂತೆ ಹೇಳಲಾಗಿತ್ತು.

ಸಿಬ್ಬಂದಿಗೆ ಆಸನದ ಮೇಲೆ ಶೀಟ್ ಹಾಕಿದ್ದರೂ ಕೂಡ ಆ ಜಾಗದಲ್ಲಿ ಮೂತ್ರದ ದುರ್ನಾತ ಮೂಗಿಗೆ ಬಡಿಯುತ್ತಿತ್ತು. ಇಂತಹ ದುಸ್ಥಿತಿ ಎದುರಿಸಿದ ಮಹಿಳೆಗೆ ಎರಡು ಗಂಟೆಯ ಬಳಿಕ ಮತ್ತೊಂದು ಸಿಬ್ಬಂದಿ ಸೀಟು ನೀಡಲಾಗಿದ್ದು, ದಿಲ್ಲಿಗೆ ಬರುವವರೆಗೂ ಅವರು ಅಲ್ಲಿಯೇ ಕುಳಿತು ಬಂದಿದ್ದಾರೆ. ಆದರೆ, ಈ ನಡುವೆ ಮೊದಲ ದರ್ಜೆಯಲ್ಲಿ ಅನೇಕ ಸೀಟುಗಳು ಖಾಲಿ ಇದ್ದವು ಎನ್ನುವ ಮಾಹಿತಿ ಪ್ರಯಾಣಿಕರಿಂದ ಮಹಿಳೆಗೆ ತಿಳಿದು ಬಂದಿದೆ.

“ಆಘಾತಕ್ಕೆ ಒಳಗಾದ ಪ್ರಯಾಣಿಕರನ್ನು ಆದ್ಯತೆ ಅನುಸಾರ ಕಾಳಜಿ ವಹಿಸಬೇಕು ಎಂಬ ಕಿಂಚಿತ್ತು ಭಾವನೆ ಕೂಡ ವಿಮಾನ ಸಿಬ್ಬಂದಿಗೆ ಮೂಡಿರಲಿಲ್ಲ ಎನ್ನುವ ವಿಚಾರ ಅವರ ನಡೆಯಿಂದ ತಿಳಿಯುತ್ತದೆ. ವಿಮಾನ ಇಳಿಯುವಾಗ, ವಿಮಾನ ಸಿಬ್ಬಂದಿಯು ಕಸ್ಟಮ್ಸ್ ಕಾರ್ಯ ಬೇಗನೆ ಮುಗಿಯಲು ಅನುಕೂಲವಾಗುವಂತೆ ಗಾಲಿ ಕುರ್ಚಿ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಆದರೆ ವೇಯ್ಟಿಂಗ್ ಪ್ರದೇಶದಲ್ಲಿ ಗಾಲಿಕುರ್ಚಿಯನ್ನು ಮಹಿಳೆಗೆ ಇರಿಸಲಾಗಿದ್ದು, ಅಲ್ಲಿ ನಮಹಿಳೆ 30 ನಿಮಿಷ ಕಾದರೂ ಕೂಡ ಯಾರು ಅವರ ಬಳಿ ಬಂದಿಲ್ಲ.

ಕಾದು ಸಾಕಾದ ಮಹಿಳೆ, ಕೊನೆಗೆ ಆಕೆಯೇ ಹೋಗಿ ಕಸ್ಟಂ ವಿಭಾಗದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ತನ್ನ ಲಗೇಜನ್ನು ಪಡೆದುಕೊಂಡಿದ್ದಾರೆ. ಇದೆಲ್ಲವನ್ನೂ ಏರ್ ಇಂಡಿಯಾದ ಪೈಜಾಮಾ ಮತ್ತು ಸಾಕ್ಸ್‌ಗಳಲ್ಲಿಯೇ ಮಾಡಿದ್ದೆ” ಎಂದು ಮಹಿಳೆ ತಮ್ಮ ಕಹಿ ಅನುಭವದ ಕುರಿತು ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ.

ಈ ವಿಚಾರದಲ್ಲಿ ವಿಮಾನ ಸಿಬ್ಬಂದಿಗಳ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದ್ದು, “ಬಹಳ ಸೂಕ್ಷ್ಮ ಹಾಗೂ ಆಘಾತಕಾರಿ ಸನ್ನಿವೇಶವನ್ನು ಸಂವೇದನೆಯಿಂದ ನಿರ್ವಹಿಸುವುದರಲ್ಲಿ ಸಿಬ್ಬಂದಿ ವರ್ಗ ವಿಫಲರಾಗಿದ್ದಾರೆ. ಈ ಘಟನೆಯ ಬಳಿಕ ತನ್ನ ಪರವಾಗಿ ತಾನೇ ಹೋರಾಟ ನಡೆಸಿಕೊಂಡು ಬಂದಿರುವ ಮಹಿಳೆ ಪ್ರತಿಕ್ರಿಯೆ ಪಡೆಯಲು ಸುದೀರ್ಘ ಸಮಯದವರೆಗೆ ಕಾದಿರುವ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಘಟನೆ ಸಂದರ್ಭದಲ್ಲಿ ಮಹಿಳೆಯ ಸುರಕ್ಷತೆ ಇಲ್ಲವೇ ಹಿತ ಕಾಪಾಡಲು ವಿಮಾನಯಾನ ಸಂಸ್ಥೆ ಯಾವುದೇ ಪ್ರಯತ್ನ ನಡೆಸದೆ ಇರುವುದು ನಿಜಕ್ಕೂ ವಿಷಾದನೀಯ.

ಏರ್ ಇಂಡಿಯಾ ಈ ಘಟನೆಯ ಕುರಿತಾಗಿ ಪೊಲೀಸರು ಮತ್ತು ನಿಯಂತ್ರಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನೊಂದ ಪ್ರಯಾಣಿಕರ ಜತೆ ನಾವು ನಿರಂತರ ಸಂಪರ್ಕಸಲ್ಲಿದ್ದೇವೆ” ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.

ವಿಮಾನದ ಸಿಬ್ಬಂದಿ ಕಂಪೆನಿ ನಿಯಮಾವಳಿಗಳನ್ನು ಅನುಸರಿಸ ಬೇಕಾಗಿತ್ತು. ಈ ಘಟನೆಯ ಬಗ್ಗೆ ಹಿರಿಯ ಏರ್‌ಲೈನ್ ಕಮಾಂಡರ್ ಪ್ರತಿಕ್ರಿಯೆ ನೀಡಿದ್ದು, ಪೈಲಟ್‌ಗೆ ಮಾಹಿತಿ ನೀಡಿ, ಕೆಟ್ಟದಾಗಿ ವರ್ತಿಸಿದ ಪ್ರಯಾಣಿಕನನ್ನು ಪ್ರತ್ಯೇಕವಾಗಿ ಇರಿಸಿ, ಆತನನ್ನು ವಿಮಾನ ಇಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿಗೆ ಒಪ್ಪಿಸಬೇಕಿತ್ತು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.