ಆಧಾರ್‌ಕಾರ್ಡ್‌ನಲ್ಲಿ ಈ ದಾಖಲೆಗಳಿಲ್ಲದೆಯೇ ವಿಳಾಸ ಬದಲಿಸಿ – ಹೊಸ ನಿಯಮ ಜಾರಿ

ಯಾವುದೇ ಅರ್ಜಿ ಅಥವಾ ಸೌಲಭ್ಯ ಪಡೆಯಬೇಕಾದರೆ ಆಧಾರ್ ಇರಲೇಬೇಕು ಹಾಗೆಯೇ ಆಧಾರ್ ಬಯೋಮೆಟ್ರಿಕ್ ಆಧಾರಿತವಾಗಿರುವುದರಿಂದ ಆಧಾರ್ ಕಾರ್ಡ್ ನ್ನು ಪ್ರತಿಯೊಂದು ದಾಖಲೆಗಳೊಂದಿಗೆ ಲಿಂಕ್ ಮಾಡುವುದು ಮುಖ್ಯ ಅನ್ನುವುದು ನಮಗೆ ತಿಳಿದಿರುವ ವಿಚಾರ. ಇದೀಗ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೊಸ ನಿಯಮ ರೂಪಿಸಿದೆ. ಈ ನಿಯಮದ ಅಡಿಯಲ್ಲಿ, ಕುಟುಂಬದ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್‌ನಲ್ಲಿ ತಮ್ಮ ವಿಳಾಸವನ್ನು ನವೀಕರಿಸುವ ಸೌಲಭ್ಯವನ್ನು ನೀಡಿದೆ.

 

ಹೌದು ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ಬದಲಾಯಿಸಬೇಕು ಎನ್ನುವವರಿಗೆ ಈ ವಿಚಾರವಾಗಿ UIDAI ಹೊರಡಿಸಿದ ಹೇಳಿಕೆಯಲ್ಲಿ, ಕುಟುಂಬದ ಮುಖ್ಯಸ್ಥರೊಂದಿಗಿನ ಸಂಬಂಧವನ್ನು ತೋರಿಸುವ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸುವ ಮೂಲಕ ವಿಳಾಸವನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು ಎಂದು ಮಾಹಿತಿ ನೀಡಲಾಗಿದೆ.

ಆನ್‌ಲೈನ್‌ನಲ್ಲಿ ವಿಳಾಸವನ್ನು ಅಪ್ಡೇಟ್ ಮಾಡುವ ಸೌಲಭ್ಯವು ನಿಜಕ್ಕೂ ಅನುಕೂಲಕರವಾಗಿದೆ. ಪತ್ನಿ, ಮಕ್ಕಳು, ಅಥವಾ ಪೋಷಕರ ಹೆಸರಿನಲ್ಲಿ ಯಾವುದೇ ದಾಖಲೆಗಳಲ್ಲದ ಸಂದರ್ಭದಲ್ಲಿ ಈ ನಿಯಮ ಸಹಾಯವಾಗಲಿದೆ. ವಿವಿಧ ಕಾರಣಗಳಿಂದ ನಗರಗಳು ಮತ್ತು ಪಟ್ಟಣಗಳನ್ನು ಬದಲಾಯಿಸುತ್ತಿರುವ ಸಂದರ್ಭದಲ್ಲಿ ವಿಳಾಸ ಕೂಡ ಬದಲಾಗುತ್ತದೆ. ಆಗ ಆಧಾರ್ ಕಾರ್ಡ್ ನಲ್ಲಿಯೂ ವಿಳಾಸ ಬದಲಾಯಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಈ ಸೌಲಭ್ಯವು ಲಕ್ಷಾಂತರ ಜನರಿಗೆ ಸಹಾಯಕವಾಗಿರಲಿದೆ.

ಆಧಾರ್‌ನಲ್ಲಿ ನಮೂದಿಸಿದ ವಿಳಾಸವನ್ನು ನವೀಕರಿಸುವ ಹೊಸ ಸೌಲಭ್ಯವು ಈಗಾಗಲೇ ನೀಡಿರುವ ಸೌಲಭ್ಯಕ್ಕಿಂತ ಭಿನ್ನವಾಗಿದೆ. ಮಾನ್ಯ ದಾಖಲೆಗಳ ಆಧಾರದ ಮೇಲೆ ವಿಳಾಸವನ್ನು ನವೀಕರಿಸಲು UIDAI ಈಗಾಗಲೇ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯನ್ನು ಕುಟುಂಬದ ಮುಖ್ಯಸ್ಥ ಎಂದು ಪರಿಗಣಿಸಬಹುದು. ಅವನು ತನ್ನ ವಿಳಾಸವನ್ನು ಇತರ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಬಹುದು ಎಂದು UIDAI ಹೇಳಿದೆ. ‘ಮೈ ಆಧಾರ್’ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ವಿಳಾಸವನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಇದಕ್ಕೆ 50 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಸದ್ಯ ನೀವು ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ಅಪ್ಡೇಟ್ ಮಾಡಲು ಕೆಲವು ದಾಖಲೆಗಳನ್ನು ಬಳಸಲು ಅವಕಾಶ ನೀಡಲಾಗಿದೆ.

  • ಪಡಿತರ ಚೀಟಿ,
  • ಮಾರ್ಕ್-ಶೀಟ್,
  • ಮದುವೆ ಪ್ರಮಾಣಪತ್ರ,
  • ಪಾಸ್‌ಪೋರ್ಟ್ ಇತ್ಯಾದಿಗಳನ್ನು ಆನ್‌ಲೈನ್‌ನಲ್ಲಿ ದಾಖಲೆಗಳಾಗಿ ಬಳಸಬಹುದು. ಈ ದಾಖಲೆಗಳ ಮೇಲೆ ಕುಟುಂಬದ ಮುಖ್ಯಸ್ಥ ಮತ್ತು ವಿಳಾಸ ಬದಲಿಸಬೇಕಿರುವ ವ್ಯಕ್ತಿಯ ಹೆಸರು ಮತ್ತು ಸಂಬಂಧವನ್ನು ಬರೆಯಬೇಕು. ಒಂದು ವೇಳೆ ನಿಮ್ಮ ಬಳಿ ಯಾವುದೇ ದಾಖಲೆ ಇಲ್ಲದೆ ಹೋದಲ್ಲಿ, ಕುಟುಂಬದ ಮುಖ್ಯಸ್ಥರು ನಿಗದಿತ ನಮೂನೆಯಲ್ಲಿ ಸೆಲ್ಫ್ ಡಿಕ್ಲೇರೆಶನ್ ನೀಡಬೇಕಾಗುತ್ತದೆ.

ಈ ಮೂಲಕ ಕುಟುಂಬದ ಮುಖ್ಯಸ್ಥರೊಂದಿಗಿನ ಸಂಬಂಧವನ್ನು ತೋರಿಸುವ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸುವ ಮೂಲಕ ಆಧಾರ್ ವಿಳಾಸವನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು ಎಂದು ಮಾಹಿತಿ ನೀಡಲಾಗಿದೆ.

Leave A Reply

Your email address will not be published.