ಫ್ರಿಡ್ಜ್ ಖರೀದಿದಾರರಿಗೆ ಶಾಕಿಂಗ್ ನ್ಯೂಸ್! | ಭಾರತದಲ್ಲಿ ರೆಫ್ರಿಜರೇಟರ್ ಸಂಬಂಧ ಜಾರಿಯಾಗಿದೆ ಹೊಸ ನಿಯಮ
ಇಂದಿನ ಟೆಕ್ನಾಲಜಿ ಯುಗದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಫ್ರಿಡ್ಜ್ ಇದ್ದೇ ಇದೆ. ಅದರಲ್ಲೂ ಬೇಸಗೆ ಕಾಲದಲ್ಲಿ ಅಂತೂ ಈ ಉರಿ ಸೆಕೆಗೆ ತಣ್ಣಗಿನ ನೀರು ಸಿಕ್ಕರೆ ಸಾಕು ಅನ್ನೋ ಮನಸ್ಥಿತಿ ಇರುತ್ತದೆ. ಹೀಗಾಗಿ ಎಲ್ಲರೂ ಫ್ರಿಡ್ಜ್ ಬಳಸುತ್ತಾರೆ. ಆದ್ರೆ, ಇನ್ಮುಂದೆ ಆರ್ಥಿಕವಾಗಿ ಹಿಂದುಳಿದವರಿಗೆ ರೆಫ್ರಿಜರೇಟರ್ ಖರೀದಿ ಸ್ವಲ್ಪ ಕಷ್ಟವೇ ಸರಿ.
ಹೌದು. ಭಾರತದಲ್ಲಿ ರೆಫ್ರಿಜರೇಟರ್ ಸಂಬಂಧ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದ್ದು, ಇನ್ಮುಂದೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಹೊಸ ರೆಫ್ರಿಜರೇಟರ್ ನಿಯಮಗಳನ್ನು ಜನವರಿ 1, 2023 ರಿಂದ ಜಾರಿಗೆ ತರಲಾಗಿದೆ. ಈ ಮೂಲಕ ರೆಫ್ರಿಜರೇಟರ್ ಬೆಲೆಯಲ್ಲಿ ಶೇಕಡಾ 5ರಷ್ಟು ಹೆಚ್ಚಳವಾಗಬಹುದು ಎಂದು ತಿಳಿದುಬಂದಿದೆ.
ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಐಐ) ವರದಿ ಪ್ರಕಾರ, ಉತ್ಪನ್ನಗಳಿಗೆ ಹೊಸ ಸ್ಟಾರ್ ರೇಟಿಂಗ್ ನೀಡಲಾಗುತ್ತದಂತೆ. ಹಾಗೆಯೇ ಗ್ರಾಹಕರು ವಿವಿಧ ಮಾದರಿಗಳ ಪ್ರಕಾರ 2 ರಿಂದ 5 ಪ್ರತಿಶತದಷ್ಟು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವಿದ್ಯುತ್ ಬಳಕೆಯ ಆಧಾರದ ಮೇಲೆ ಬಿಒಒ ಎಲ್ಲಾ ಡಿವೈಸ್‌ಗಳಿಗೆ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ. ಈ ಸ್ಟಾರ್ ರೇಟಿಂಗ್ 1 ರಿಂದ 5 ರವರೆಗೆ ಇದ್ದು, ಇವು ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಶಕ್ತಿ ಬಳಕೆ ಮಾಡುತ್ತವೆ ಎಂಬ ವಿವರವನ್ನು ತಿಳಿಸಲಿವೆ.
ಗೋದ್ರೇಜ್ ಅಪ್ಲೈಯನ್ಸ್‌ನ ವ್ಯವಹಾರ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಕಮಲ್ ನಂದಿ ಈ ಸಂಬಂಧ ಮಾತನಾಡಿದ್ದು, ಈಗ ನಾವು ಎರಡಕ್ಕೂ ಸ್ಟಾರ್ ರೇಟಿಂಗ್ ಅಡಿಯಲ್ಲಿ ಲೇಬಲಿಂಗ್ ಅನ್ನು ಘೋಷಿಸಬೇಕಾಗಿದೆ. ಇದೊಂದು ಹೊಸ ಬದಲಾವಣೆಯಾಗಿದೆ. ಇಂಧನ ದಕ್ಷತೆ ನಿಯಮಗಳನ್ನು ಬಿಗಿಗೊಳಿಸುತ್ತಿರುವ ಹಿನ್ನೆಲೆ ವೆಚ್ಚ ಸ್ವಲ್ಪ ಹೆಚ್ಚಾಗುತ್ತದೆ. ಬೆಲೆಗಳು ಎರಡರಿಂದ ಮೂರು ಪ್ರತಿಶತದಷ್ಟು ಹೆಚ್ಚಾಗಬಹುದು ಮತ್ತು ಇದು ವಿಭಿನ್ನ ಮಾದರಿಗಳು ಮತ್ತು ಸ್ಟಾರ್ ರೇಟಿಂಗ್‌ಗಳನ್ನು ಅವಲಂಬಿಸಿರುತ್ತದೆ ಎಂದು ತಿಳಿಸಿದ್ದಾರೆ.
ಬೆಲೆ ಏರಿಕೆ ಬಿಸಿ ಇನ್ನೂ ರೆಫ್ರಿಜರೇಟರ್ ಮೇಲೆ ಪ್ರಭಾವ ಬೀರಿಲ್ಲ. ಹೀಗಾಗಿ ನೀವೇನಾದರೂ ಖರೀದಿ ಮಾಡಬೇಕು ಎಂದುಕೊಂಡರೆ ಈ ಸಮಯ ನಿಮಗೆ ಸೂಕ್ತವಾಗಲಿದ್ದು, ಇದರಿಂದ ಶೇ. 5 ರಷ್ಟು ಹೆಚ್ಚಿನ ಬೆಲೆ ಏರಿಕೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ವರದಿಯ ಆಧಾರದ ಮೇಲೆ ಗೋದ್ರೇಜ್, ಹೈಯರ್ ಮತ್ತು ಪ್ಯಾನಾಸೋನಿಕ್ ಕಂಪೆನಿಗಳು ಫ್ರಿಡ್ಜ್ ಸ್ಟಾಕ್ ಹೊಂದಿದ್ದು, ಶೇ 5 ರಿಂದ 10 ರಷ್ಟು ರಿಯಾಯಿತಿಯಲ್ಲಿ ಮಾರಾಟ ಮಾಡಲು ಮುಂದಾಗಿದ್ದು, ನೀವೇನಾದರೂ ಈ ಸಮಯದಲ್ಲಿ ಖರೀದಿ ಮಾಡಿದರೆ ಖಂಡಿತಾ ಶೇ.15ರಷ್ಟು ಕಡಿಮೆ ಬೆಲೆಯಲ್ಲಿ ಫ್ರಿಡ್ಜ್ ದೊರೆಯಲಿದೆ.