ಸಿನಿರಂಗಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಎಂಟ್ರಿ | ವೀರೇಂದ್ರ ಹೆಗ್ಗಡೆ ಅವರು ಬಣ್ಣ ಹಚ್ಚಲಿರುವ ಸಿನಿಮಾ ಯಾವುದು?

ಮಾತನಾಡುವ ಮಂಜುನಾಥ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಹೇಳುತ್ತಾರೆ. ಚಥುರ್ಧಾನಗಳ ಮೂಲಕ, ಸಮಾಜ ಸೇವೆಯ ಮೂಲಕ ನಾಡಿನಾದ್ಯಂತ ಹೆಸರಾದವರು ಶ್ರೀ ಹೆಗ್ಗಡೆಯವರು. ಸಂತೋಷದ ವಿಚಾರವೆಂದರೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಇದೀಗ ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಹಾಗಾದರೆ ಆ ಸಿನೆಮಾ ಯಾವುದು? ನಿರ್ದೇಶಕರು ಯಾರು? ಎಂಬ ಕುತೂಹಲವೇ. ಇಲ್ಲಿದೆ ನೋಡಿ ಮಾಹಿತಿ.

 

ಹೌದು, ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ವೀರ ಕಂಬಳ’ ಸಿನಿಮಾದಲ್ಲಿ ವೀರೇಂದ್ರ ಹೆಗ್ಗಡೆ ಅವರು ಅತಿಥಿ ಪಾತ್ರವನ್ನು ಮಾಡುತ್ತಿದ್ದಾರೆ. ಸದ್ಯ ಅವರಿಗೆ ಮೇಕಪ್ ಹಚ್ಚುತ್ತಿರುವ ಫೋಟೋಗಳನ್ನು ಹಲವರು ಹಂಚಿಕೊಂಡಿದ್ದಾರೆ. ಈ ಚಿತ್ರವು ಬಹಳ ವಿಶೇಷತೆಗಳಿಂದ ಕೂಡಿದ್ದು, ಕಾಂತಾರ ಸಿನಿಮಾದಂತೆ ಜನಪದ ಕಲೆಯನ್ನು ಆಧರಿಸಿ ರಚಿತವಾಗುತ್ತಿದೆ.

ದಕ್ಷಿಣ ಕನ್ನಡದ ಹೆಮ್ಮೆ ಜನಪದ ಕ್ರೀಡೆಯಾದ ಕಂಬಳದ ಆಧಾರದಲ್ಲಿ ಸಿನಿಮಾ ಚಿತ್ರೀಕರಣಗೊಳ್ಳುತ್ತಿದ್ದು, ಕಂಬಳ ಕೋಣ ಓಡಿಸುವುದರಲ್ಲಿ ಖ್ಯಾತಿ ಗಳಿಸಿರುವ ಶ್ರೀನಿವಾಸ್ ಗೌಡ ಕೂಡ ಈ ಸಿನಿಮಾದಲ್ಲಿ ಪಾತ್ರ ಮಾಡುತ್ತಿದ್ದಾರೆ. ಇವರೊಂದಿಗೆ ಕಲಾವಿದ ಸ್ವರಾಜ್ ಶೆಟ್ಟಿ ಕೂಡ ಕಂಬಳದ ಕೋಣ ಓಡಿಸುವ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಖ್ಯಾತ ನಟರಾದ ಪ್ರಕಾಶ್ ರೈ, ನವೀನ್ ಪಡೀಲ್ ಸೇರಿ ಇನ್ನೂ ಹಲವು ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಈ ಸಿನಿಮಾ ಕನ್ನಡ, ತುಳು ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿ ಬರಲಿರುವುದು ವಿಶೇಷ. ಸಂಪೂರ್ಣವಾಗಿ ಕಂಬಳ ಕ್ರೀಡೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿವೆ. ವೀರ ಕಂಬಳ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಈಗ ನಡೆಯುತ್ತಿದ್ದು ವೀರೇಂದ್ರ ಹೆಗ್ಗಡೆ ಅವರ ಪಾತ್ರ ಏನೆಂಬುದು ಸಸ್ಪೆನ್ಸ್ ಆಗಿಯೇ ಉಳಿದಿದೆ.

Leave A Reply

Your email address will not be published.