Demonetisation Verdict: ನೋಟು ಅಮಾನ್ಯೀಕರಣದ ಬಗ್ಗೆ ಸುಪ್ರೀಂ ಕೋರ್ಟ್ನಿಂದ ಮಹತ್ವದ ತೀರ್ಪು ಪ್ರಕಟ
ಕೇಂದ್ರ ಸರ್ಕಾರ ಕಳ್ಳ ನೋಟಿನ ಹರಿವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೋಟು ಅಮಾನ್ಯಗೊಳಿಸಿದ್ದು ಗೊತ್ತಿರುವ ವಿಷಯವೇ!!….ಸರ್ಕಾರ ಅದೆಷ್ಟೇ ಕ್ರಮ ಕೈಗೊಂಡರು ಕೂಡ ಕಳ್ಳ ನೋಟು ದಂಧೆ ಎಗ್ಗಿಲ್ಲದೆ ತೆರೆಮರೆಯಲ್ಲಿ ನಡೆಯುತ್ತಿವೆ. ವಂಚಕರು ತಮ್ಮ ಬತ್ತಳಿಕೆಯಿಂದ ಹೊಸ ಹೊಸ ಬ್ರಹ್ಮಾಸ್ತ್ರ ಬಳಸಿ ಕಳ್ಳ ಮಾರ್ಗಗಳನ್ನು ಅನುಸರಿಸಿಕೊಂಡು ತಮ್ಮ ಕೈ ಚಳಕ ತೋರಿಸುತ್ತಲೇ ಇರುತ್ತಾರೆ. ಇದೀಗ, ಒಂದು ಸಾವಿರ ರೂ. ಮತ್ತು 500 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿ 2016ರಲ್ಲಿ ಕೇಂದ್ರ ಸರಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಿದೆ.
ನೋಟು ರದ್ದು ಪ್ರಶ್ನಿಸಿ ಒಟ್ಟು 58 ಅರ್ಜಿಗಳು ಸಲ್ಲಿಕೆಯಾಗಿದ್ದ ಹಿನ್ನಲೆಯಲ್ಲಿ, ಡಿ. 7ರಂದು ನ್ಯಾಯಪೀಠವು ನೋಟು ಅಮಾನ್ಯ ನಿರ್ಧಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಸರಕಾರ ಮತ್ತು ಆರ್‌ಬಿಐಗೆ ಸೂಚನೆ ನೀಡಿತ್ತು. ನೋಟು ಬದಲಾಯಿಸಲು ನೀಡಿದ ಕಾಲಾವಕಾಶ ಸರಿಯಾಗಿದ್ದು, ನೋಟು ಅಮಾನ್ಯಗೊಳಿಸಿದ ಸಂದರ್ಭದಲ್ಲಿ ಆರ್ ಬಿಐ ಮತ್ತು ಕೇಂದ್ರ ಸರ್ಕಾರದ ಜೊತೆಯಲ್ಲಿ ಜಂಟಿಯಾಗಿ ಚರ್ಚೆ ನಡೆಸಿದ ಬಳಿಕವೇ ನಿರ್ಣಯ ಕೈಗೊಳ್ಳಲಾಗಿದೆ. ಇದಲ್ಲದೆ, ಈ ಕ್ರಮವನ್ನು ತರಲು ಸಮಂಜಸವಾದ ಸಂಬಂಧವಿತ್ತು ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಹೀಗಾಗಿ, ಕೇಂದ್ರ ಸರ್ಕಾರ ಮಾಡಿದ್ದ ನೋಟ್ ಬ್ಯಾನ್ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದ್ದು ಅಷ್ಟೆ ಅಲ್ಲದೆ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಜ. 2ರಂದು ತೀರ್ಪು ಪ್ರಕಟಿಸಿದೆ.